ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಂಜುಗೆ ತಾನು ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ವೈದ್ಯರು ಉತ್ತರ ನೀಡಿದ್ದರು. ‘ನೀವೇ ಆರ್ಯವರ್ಧನ್’ ಎಂದು ವೈದ್ಯರ ಕಡೆಯಿಂದ ಉತ್ತರ ಸಿಕ್ಕಿತ್ತು. ಇದನ್ನು ಕೇಳಿ ಸಂಜುಗೆ ಶಾಕ್ ಆಗಿತ್ತು. ಇದನ್ನು ಬಂದು ಆತ ಮನೆಯವರ ಎದುರು ಹೇಳಿಕೊಂಡಿದ್ದ. ಆದರೆ, ಇದನ್ನು ನಂಬಲು ಯಾರೂ ಸಿದ್ಧರಿರಲಿಲ್ಲ. ಸಂಜುಗೆ ತಲೆಕೆಟ್ಟಿದೆ ಎಂಬ ನಿರ್ಧಾರಕ್ಕೆ ಎಲ್ಲರೂ ಬಂದರು. ಶಾರದಾ ದೇವಿಗೆ ಈ ವಿಚಾರವನ್ನು ನಂಬಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಮೂಡಿದೆ. ಸಂಜು ನಡೆದುಕೊಳ್ಳುತ್ತಿದ್ದ ರೀತಿ ಬಗ್ಗೆ ಆಕೆಗೆ ಮೊದಲಿನಿಂದಲೂ ಸಾಕಷ್ಟು ಅನುಮಾನ ಇತ್ತು.
ವೈದ್ಯರಿಗೆ ಬೆದರಿಗೆ
ಸಂಜುಗೆ ಟ್ರೀಟ್ಮೆಂಟ್ ಕೊಡುವ ವೈದ್ಯರು ಈಗ ಸಂಕಷ್ಟದಲ್ಲಿದ್ದಾರೆ. ಪೊಲೀಸರು ಹೇಳಿದರು ಎನ್ನುವ ಕಾರಣಕ್ಕೆ ವೈದ್ಯರು ಸಂಜು ಬಳಿ ಸತ್ಯ ಹೇಳಿರಲಿಲ್ಲ. ದಿನ ಕಳೆದಂತೆ ಸಂಜುಗೆ ಕೋಪ ನೆತ್ತಿಗೇರುತ್ತಲೇ ಇತ್ತು. ಈ ಕಾರಣಕ್ಕೆ ವೈದ್ಯರನ್ನು ಅಪಹರಿಸಿ ತಾನು ಯಾರು ಎಂಬ ಸತ್ಯವನ್ನು ಆತ ತಿಳಿದುಕೊಂಡಿದ್ದ. ಇದಾದ ಬೆನ್ನಲ್ಲೇ ವೈದ್ಯರನ್ನು ಝೇಂಡೆ ಅಪಹರಿಸಿದ್ದಾನೆ. ವೈದ್ಯರ ಬಳಿ ಸತ್ಯ ಹೇಳದಂತೆ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: Jothe Jotheyali: ಆರ್ಯವರ್ಧನ್ ಸತ್ತಿಲ್ಲ ಅನ್ನೋದು ಅನುಗೆ ತಿಳಿದೇ ಹೋಯ್ತು? ಮೀರಾ ಪ್ರಶ್ನೆಯಿಂದ ಮೂಡಿತು ಅನುಮಾನ
‘ರಾಜ ನಂದಿನಿ ವಿಲಾಸದವರಿಗೆ ನಿಜ ವಿಚಾರ ಹೇಳಿದರೆ ನಿಮ್ಮ ಮಕ್ಕಳನ್ನು ನಾನು ಕಿಡ್ನಾಪ್ ಮಾಡುತ್ತೇನೆ. ಆಗ ನಿಮ್ಮ ವಂಶವೇ ನಿರ್ವಂಶ ಆಗುತ್ತದೆ. ಒಂದೊಮ್ಮೆ ಸತ್ಯ ಹೇಳಿಲ್ಲ ಎಂದಿಟ್ಟುಕೊಳ್ಳಿ ನಿಮ್ಮ ಕುಟುಂಬದವರು ಉಂಡು ತೇಗುವಷ್ಟು ಆಸ್ತಿಯನ್ನು ನಾನು ಮಾಡಿಕೊಡ್ತೀನಿ’ ಎಂದಿದ್ದಾನೆ ಝೇಂಡೆ. ಇದಕ್ಕೆ ವೈದ್ಯರು ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದ್ದಾರೆ.
ಖಾಲಿ ಬಾಂಡ್ಗೆ ಸಹಿ
ವರ್ಧನ್ ಸಂಸ್ಥೆಯ ಎಲ್ಲಾ ಆಸ್ತಿಯನ್ನು ಕಬಳಿಸಬೇಕು ಎನ್ನುವ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ. ಇದನ್ನು ಕಾರ್ಯರೂಪಕ್ಕೆ ತರಲು ಆತ ಪ್ಲ್ಯಾನ್ ಮಾಡುತ್ತಿದ್ದಾನೆ. ಇದರ ಮೊದಲ ಹಂತವಾಗಿ ಖಾಲಿ ಬಾಂಡ್ಗೆ ವರ್ಧನ್ ಕಂಪನಿಯ ಪ್ರಮುಖರಲ್ಲಿ ಒಬ್ಬಳಾದ ಮೀರಾ ಹೆಗಡೆಯಿಂದ ಸಹಿ ಮಾಡಿಸಿಕೊಂಡಿದ್ದಾನೆ. ಆರ್ಯನನ್ನು ಮರಳಿಸಿಕೊಡುತ್ತೇನೆ ಎಂದು ನಂಬಿಸಿ ಈ ರೀತಿ ಸಹಿ ಹಾಕಿಸಿಕೊಳ್ಳುವ ಕೆಲಸ ಮಾಡಿದ್ದಾನೆ ಝೇಂಡೆ. ಇದು ಆಸ್ತಿ ಹೊಡೆಯಲು ಮಾಡಿದ ಪ್ಲ್ಯಾನ್ ಇರಬಹುದು ಎಂಬುದು ವೀಕ್ಷಕರ ಊಹೆ.
ಸಂಜು ಮಾತು ನಂಬಲೇ ಇಲ್ಲ ಅನು
ಸಂಜುಗೆ ನಿಜ ವಿಚಾರ ತಿಳಿಯುತ್ತಿದ್ದಂತೆ ಅನು ಬಳಿ ಬಂದು ಹೇಳಿಕೊಂಡಿದ್ದ. ‘ನಾನೇ ಆರ್ಯವರ್ಧನ್, ನಾನೇ ನಿಮ್ಮ ಪತಿ’ ಎಂದು ಕೂಗಿ ಹೇಳಿದ್ದ. ಈ ಮಾತಿನ ಮೇಲೆ ಅನುಗೆ ನಂಬಿಕೆ ಬರುತ್ತಿಲ್ಲ. ಸಂಜು, ಆರ್ಯವರ್ಧನ್ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Jothe Jotheyali Serial: ‘ನೀವೇ ಆರ್ಯವರ್ಧನ್’; ಸಂಜು ಎದುರು ನಿಜ ವಿಚಾರ ಹೇಳಿದ ವೈದ್ಯರು
ಈ ಮೊದಲು ಭೇಟಿ ಆಗಿದ್ದ ಜೋಗ್ತವ್ವ, ‘ನಿನ್ನ ಪತಿ ಬದುಕಿದ್ದಾನೆ. ಆತ ನಿನ್ನ ಕಣ್ಮುಂದೇ ಇದ್ದಾನೆ. ಪತಿಯನ್ನು ಕಳೆದುಕೊಳ್ಳಬೇಡ’ ಎಂಬ ಎಚ್ಚರಿಕೆ ನೀಡಿದ್ದಳು. ಈ ಮಾತಿನ ಅಸಲಿಯತ್ತು ಏನು ಎಂಬುದು ಅನುಗೆ ಇನ್ನೂ ಬಗೆಹರಿದಿಲ್ಲ. ಹೀಗಿರುವಾಗಲೇ ಸಂಜು ಬಂದು ನಾನೇ ಆರ್ಯವರ್ಧನ್ ಎಂದು ಹೇಳಿಕೊಂಡಾಗ ಆಕೆಗೆ ಗೊಂದಲ ಮೂಡಿದೆ.
ಆರಾಧನಾಗೆ ಕೋಪ
ಸಂಜುನೇ ನನ್ನ ಗಂಡ ಎಂದು ಆರಾಧನಾ ನಂಬಿಕೊಂಡಿದ್ದಾಳೆ. ಅಸಲಿ ವಿಚಾರ ಆಕೆಗೆ ತಿಳಿದಿಲ್ಲ. ಈ ಕಾರಣಕ್ಕೆ ಆಕೆ ಎಲ್ಲರನ್ನು ಶಪಿಸುತ್ತಿದ್ದಾಳೆ. ಸಂಜುನಿಂದ ತನ್ನನ್ನು ದೂರ ಮಾಡಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ ಎಂಬ ಕೋಪ ಆಕೆಗೆ ಇದೆ. ಆಕೆಯ ಬಳಿ ಸತ್ಯ ಹೇಳಿದ ಹೊರತಾಗಿಯೂ ಅದನ್ನು ನಂಬಲು ಆರಾಧನಾ ಸಿದ್ಧಳಿಲ್ಲ. ತನ್ನ ಪತಿ ನಿಜಕ್ಕೂ ಸತ್ತು ಹೋಗಿದ್ದಾನೆ ಎನ್ನುವ ವಿಚಾರ ತಿಳಿದರೆ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Tue, 20 December 22