22 ವರ್ಷದ ಅಕೌಂಟ್ನ ಒಂದೇ ದಿನದಲ್ಲಿ ನೋಡಿ ಮುಗಿಸಿದ ಸಂಜು; ಮೀರಾಗೆ ಹೆಚ್ಚಿತು ಅನುಮಾನ
ಬಿಸ್ನೆಸ್ ಮಾಡೋಕೆ ಏನು ಮುಖ್ಯ ಎಂದು ಕೇಳಿದಾಗ ಸಂಜು ‘ನಂಬಿಕೆ’ ಎಂದು ಹೇಳಿದ್ದ. ಆರ್ಯವರ್ಧನ್ ಕೂಡ ಇದೇ ರೀತಿ ಮಾತನಾಡುತ್ತಿದ್ದ. ಈ ವಿಚಾರ ಅನುನ ಅತಿಯಾಗಿ ಕಾಡಿದೆ. ಕನಸಿನಲ್ಲೂ ಸಂಜು ಬಂದಿದ್ದಾನೆ.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ (Jothe Jotheyali Serial) ಹೊಸ ಆರ್ಯವರ್ಧನ್ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನ ಮುಖಚರ್ಯೆ ಸಂಪೂರ್ಣವಾಗಿ ಬದಲಾಗಿದ್ದು, ಆತನೇ ಆರ್ಯವರ್ಧನ್ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಆತ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ವಿಚಿತ್ರ ಎನಿಸುತ್ತಿದೆ. ಆರ್ಯವರ್ಧನ್ (Aryavardhan) ರೀತಿಯೇ ಸಂಜು ನಡೆದುಕೊಳ್ಳುತ್ತಿರುವುದು ಹಲವರಿಗೆ ಅನುಮಾನ ಹುಟ್ಟಿಸಿದೆ. ಈಗ ಸಂಜು ನಡೆದುಕೊಂಡ ರೀತಿಗೆ ಪ್ರಮುಖರೇ ಬೆಚ್ಚಿ ಬಿದ್ದಿದ್ದಾರೆ. ಸೆಪ್ಟೆಂಬರ್ 18ರ ಎಪಿಸೋಡ್ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.
ಮೀರಾಗೆ ಅಚ್ಚರಿ ಮೂಡಿಸಿದ ಸಂಜು
ಆರ್ಯವರ್ಧನ್ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಸಂಜು ನೇಮಕಗೊಂಡಿದ್ದಾನೆ. ಸ್ವತಃ ಅನು ಸಂದರ್ಶನ ಮಾಡಿ ಆತನನ್ನು ಕಂಪನಿಗೆ ಸೇರ್ಪಡೆ ಮಾಡಿಕೊಂಡಿದ್ದಾಳೆ. ಮೊದಲ ದಿನವೇ ಸಂಜು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಕಂಪನಿಯ 22 ವರ್ಷದ ಅಕೌಂಟ್ ಅನ್ನು ಸಂಜುಗೆ ನೀಡಲಾಗಿತ್ತು. ಈ ಕಂಪನಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಕೇವಲ ಒಂದೇ ದಿನದಲ್ಲಿ ಸಂಜು ಇದನ್ನು ಪತ್ತೆ ಹಚ್ಚಿದ್ದಾನೆ. ಅಷ್ಟೇ ಅಲ್ಲ, 22 ವರ್ಷಗಳ ಅಕೌಂಟ್ ಅನ್ನು ಸಂಪೂರ್ಣವಾಗಿ ನೋಡಿ ಮುಗಿಸಿದ್ದಾನೆ.
ಈ ವಿಚಾರ ಆರ್ಯವರ್ಧನ್ ಪಿ.ಎ. ಆಗಿದ್ದ ಮೀರಾ ಹೆಗಡೆಗೆ ಅಚ್ಚರಿ ಮೂಡಿಸಿದೆ. ಒಂದೇ ದಿನದಲ್ಲಿ ಈ ರೀತಿ ಮಾಡೋಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೀರಾಗೆ ಮೂಡಿದೆ. ಈ ವಿಚಾರವನ್ನು ಆಕೆ ಹರ್ಷ ಹಾಗೂ ಮಾನ್ಸಿ ಬಳಿಯೂ ಚರ್ಚೆ ಮಾಡಿದ್ದಾಳೆ. ಈ ಮಾತನ್ನು ಕೇಳಿ ಹರ್ಷ ಶಾಕ್ ಆಗಿದ್ದಾನೆ. ಅಲ್ಲದೆ, ಸಂಜು ಬಗ್ಗೆ ಆತನಿಗೆ ವಿಶೇಷ ಗೌರವ ಮೂಡಿದೆ. ‘ಆತ ಸಾಮಾನ್ಯದವನಲ್ಲವೇ ಅಲ್ಲ’ ಎಂದು ಆತ ಮೆಚ್ಚುಗೆಯ ಮಾತನ್ನು ಆಡಿದ್ದಾನೆ.
ಅನುಗೆ ಬೀಳುತ್ತಿದೆ ಸಂಜು ಕನಸು
ಆರ್ಯವರ್ಧನ್ನ ಅನು ಅತಿಯಾಗಿ ಪ್ರೀತಿಸಿದ್ದಳು. ಈಗ ಆತ ಇಲ್ಲ ಎಂಬ ನೋವು ಆಕೆಯನ್ನು ಅತಿಯಾಗಿ ಕಾಡುತ್ತಿದೆ. ಹೀಗಿರುವಾಲೇ ಅನುನ ಸಂಜು ಪದೇಪದೇ ಕಾಡುತ್ತಿದ್ದಾನೆ. ಆತ ಆರ್ಯವರ್ಧನ್ ರೀತಿಯೇ ನಡೆದುಕೊಳ್ಳುತ್ತಿದ್ದಾನೆ ಎಂಬುದು ಅನುಗೆ ಖಚಿತವಾಗಿದೆ. ಆತನ ಸಂದರ್ಶನ ಮಾಡುವಾಗ ಬಿಸ್ನೆಸ್ ಮಾಡೋಕೆ ಏನು ಮುಖ್ಯ ಎಂದು ಕೇಳಿದಾಗ ಸಂಜು ‘ನಂಬಿಕೆ’ ಎಂದು ಹೇಳಿದ್ದ. ಆರ್ಯವರ್ಧನ್ ಕೂಡ ಇದೇ ರೀತಿ ಮಾತನಾಡುತ್ತಿದ್ದ. ಈ ವಿಚಾರ ಅನುನ ಅತಿಯಾಗಿ ಕಾಡಿದೆ. ಕನಸಿನಲ್ಲೂ ಸಂಜು ಬಂದಿದ್ದಾನೆ. ಆ ಬಳಿಕ ಅನು ಭಯದಿಂದ ಎಚ್ಚೆತ್ತುಕೊಂಡಿದ್ದಾಳೆ. ಇನ್ಮುಂದೆ ಸಂಜುವಿನಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಅನು ಬಂದಿದ್ದಾಳೆ. ಈ ಮಧ್ಯೆ ಸಂಜುಗೆ ಆರ್ಯವರ್ಧನ್ ಕನಸು ಬೀಳುತ್ತಿದೆ. ರಾತ್ರಿ ವೇಳೆ ಸಂಜು ಎದ್ದು ಆರ್ಯವರ್ಧನ್ ರೂಂಗೆ ಹೋಗಿ ಬಂದಿದ್ದಾನೆ.
ಝೇಂಡೆಗೆ ಮೂಡಿದೆ ಅನುಮಾನ
ಸಂಜು ತಾಯಿ ಪ್ರಿಯಾ ಮನೆಗೆ ಝೇಂಡೆ ತೆರಳಿದ್ದಾನೆ. ಆತನನ್ನು ಪ್ರಿಯಾ ಅದ್ದೂರಿಯಾಗಿ ಸ್ವಾಗತಿಸಿದ್ದಾಳೆ. ಸಂಜು ಎಂದು ಹೇಳಿಕೊಂಡು ಬಂದ ವ್ಯಕ್ತಿ ಹಿಂದೆ ಏನೋ ಅಡಗಿದೆ ಎಂಬ ಅನುಮಾನ ಝೇಂಡೆಯನ್ನು ಅತಿಯಾಗಿ ಕಾಡಿತ್ತು. ಈ ಕಾರಣಕ್ಕೆ ಅದರ ಬಗ್ಗೆ ತನಿಖೆ ಮಾಡುವ ಉದ್ದೇಶದಿಂದಲೇ ಈ ಮನೆಗೆ ಬಂದಿದ್ದಾನೆ. ಝೇಂಡೆ ಹಾಗೂ ಆರ್ಯವರ್ಧನ್ ಒಟ್ಟಾಗಿ ಬೆಳೆದವರು. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಈ ಕಾರಣಕ್ಕೆ ಝೇಂಡೆಯನ್ನು ಕಂಡು ಪ್ರಿಯಾ ಭಾವುಕಳಾಗಿದ್ದಾಳೆ. ಆತನಿಗೆ ಎಲ್ಲಾ ಸತ್ಯವನ್ನು ಹೇಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ, ಇದನ್ನು ಸಂಜು ತಂದೆ ತಡೆದಿದ್ದಾರೆ.
ಶ್ರೀಲಕ್ಷ್ಮಿ ಎಚ್.