ಟಿಆರ್ಪಿಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’ ಧಾರಾವಾಹಿ
ಕರ್ಣ ಧಾರಾವಾಹಿಯು ತನ್ನ ಮೊದಲ ವಾರದಲ್ಲೇ ಎರಡಂಕಿಯ ಟಿಆರ್‌ಪಿ ರೇಟಿಂಗ್ ಪಡೆದು ನಂಬರ್ 1 ಸ್ಥಾನವನ್ನು ಗಳಿಸಿದೆ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅವರ ಅಭಿನಯ ಮೆಚ್ಚುಗೆ ಪಡೆದಿದೆ. ದಾಖಲೆಗಳನ್ನು ಮುರಿದು ಈ ಯಶಸ್ಸು ಸಾಧಿಸಿರುವ ಧಾರಾವಾಹಿ ತಂಡಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅವರು ಒಟ್ಟಾಗಿ ನಟಿಸಿರೋ ‘ಕರ್ಣ’ ಧಾರಾವಾಹಿ (Karna Serial) ಟಿಆರ್ಪಿಯಲ್ಲಿ ದಾಖಲೆ ಬರೆದಿದೆ. ಇತ್ತೀಚಿಗೆ ಯಾರೂ ಮಾಡಿರದ ಸಾಧನೆಯನ್ನು ಈ ಧಾರಾವಾಹಿ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ವಿಚಾರ ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಇದೇ ರೀತಿಯ ಟಿಆರ್ಪಿಯನ್ನು ಕಾಯ್ದುಕೊಂಡು ಹೋಗಬೇಕಾದ ಚಾಲೆಂಜ್ ಇದೆ.
ಕಿರಣ್ ರಾಜ್, ನಮ್ರತಾ ಹಾಗೂ ಭವ್ಯಾ ಈ ಮೂವರಿಗೂ ಒಳ್ಳೆಯ ಮಾರುಕಟ್ಟೆ ಇದೆ. ಇವರನ್ನು ಒಂದೆಡೆ ಸೇರಿಸೋದು ಎಂದರೆ ಬಜೆಟ್ ವಿಷಯದಲ್ಲಿ ದೊಡ್ಡ ಚಾಲೆಂಜ್. ಈ ಚಾಲೆಂಜ್ನ ಸ್ವೀಕರಿಸಿ ಧಾರಾವಾಹಿಯನ್ನು ಮಾಡಲಾಗಿದೆ. ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ಪ್ರಸೂತಿ ವೈದ್ಯನಾಗಿ ಕಾಣಿಸಿಕೊಂಡರೆ, ಭವ್ಯಾ ಗೌಡ ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮ್ರತಾ ಅವರದ್ದು ಭವ್ಯಾ ಸಹೋದರಿಯ ಪಾತ್ರ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ತಿಂಗಳೇ ಈ ಧಾರಾವಾಹಿ ಪ್ರಸಾರ ಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲೇ ಇಲ್ಲ. ‘ಕರ್ಣ’ನ ಎಂಟ್ರಿ ತಡವಾದರೂ ಟಿಆರ್ಪಿಯಲ್ಲಿ ಮುಂಚೂಣಿ ಸ್ಥಾನ ಪಡೆದಿದ್ದಾನೆ. ಈ ಧಾರಾವಾಹಿಗೆ ಬರೋಬ್ಬರಿ 11 ಟಿವಿಆರ್ ಸಿಕ್ಕಿದೆ. ಈ ಮೂಲಕ ಧಾರಾವಾಹಿಗೆ ಟಿಆರ್ಪಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ.
ಜೀ ಕನ್ನಡ ವಾಹಿನಿ ಮಾಡಿದ ಪೋಸ್ಟ್
View this post on Instagram
ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 13.5 ಟಿವಿಆರ್ ಪಡೆದು ದಾಖಲೆ ಬರೆದಿತ್ತು. ನಂತರದ ಸ್ಥಾನದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (11.8 ಟಿವಿಆರ್) ಹಾಗೂ ‘ನಾಗಿಣಿ 2’ (11.2 ಟಿವಿಆರ್) ಧಾರಾವಾಹಿಗಳು ಇವೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಆಯ್ತು ಒಂದು ಅಂಶ; ವಿವರಿಸಿದ ನಮ್ರತಾ ಗೌಡ
‘ಕರ್ಣನ ದಾರಿಯಲ್ಲಿ ಸಾವಿರ ಅಡೆತಡೆಗಳು ಎದುರಾದರೂ ಅವನು ಗುರಿ ತಪ್ಪಲಿಲ್ಲ. ಕರ್ಣ ಬರುವುದು ತಡವಾದರೂ ನೀವು ಅವನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ. ಸವಾಲುಗಳನ್ನೆಲ್ಲಾ ಬದಿಗೊತ್ತಿ ಹೊತ್ತು ಮೀರಿ ಬಂದ ಮನೆ ಮಗನಿಗೆ ಕೈ ತುತ್ತು ನೀಡಿ ಉಪಚರಿಸಿದ್ದೀರಿ. ಹುಟ್ಟಿನಿಂದಲೂ ಪ್ರೀತಿ ಕಾಣದ ಕರ್ಣನನ್ನ ಅಪ್ಪಿ ಮುದ್ದಾಡಿದ್ದೀರಿ. ಕನ್ನಡಿಗರ ಈ ಪ್ರೀತಿ ಇಂದು ಕರ್ಣನನ್ನು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಿಸಿದೆ. ನಿಮ್ಮ ಬೆಂಬಲಕ್ಕೆ ಸದಾ ಋಣಿಯಾಗಿರುತ್ತೇವೆ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:06 am, Fri, 11 July 25








