
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ರಿಯಾಲಿಟಿ ಶೋನ ಶನಿವಾರದ ಪಂಚಾಯ್ತಿ ಎಪಿಸೋಡ್‌ನಲ್ಲಿ ಭಾವುಕರಾಗಿದ್ದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶನಿವಾರದ ಸಂಚಿಕೆಯಲ್ಲಿ ಕಣ್ಣೀರಿಟ್ಟಿದ್ದ ಸುದೀಪ್, ಭಾನುವಾರದ ಸಂಚಿಕೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಅಸಲಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಭಾನುವಾರದ ಎಪಿಸೋಡ್‌ನಲ್ಲಿ ಸ್ಪರ್ಧಿ ತಾಂಡವ್ ರಾಮ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ‘ನಿಮ್ಮ ಕಣ್ಣಲ್ಲಿ ನೀರು ಹಾಕಿಸಿದ್ದಕ್ಕೆ ನಮಗೆ ಬೇಸರವಾಗುತ್ತಿದೆ’ ಎಂದರು. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್, ‘ನಾನು ಕಂಟೆಂಟ್ಗೋಸ್ಕರ ಅತ್ತಿದ್ದು, ಅಳಬೇಕು ಅಂತ ಅತ್ತಿದ್ದಲ್ಲ’ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಸುದೀಪ್ ಅವರ ಈ ಮಾತನ್ನು ಕೇಳಿ ಮನೆಯಲ್ಲಿದ್ದ ಸ್ಪರ್ಧಿಗಳು ಒಮ್ಮೆ ಶಾಕ್ ಆದರು. ತಕ್ಷಣವೇ ಅಸಲಿ ಕಾರಣವನ್ನು ವಿವರಿಸಿದ ಸುದೀಪ್, ‘ನಾನು ಅತ್ತಿದ್ದು ತಾಯಿ ನೆನಪಾಗಿ. ಎಲ್ಲರೂ ಒಂದು ದಿನ ತಮ್ಮ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಆಗ ಎಲ್ಲರಿಗೂ ಇದರ ನೋವು ಗೊತ್ತಾಗುತ್ತದೆ’ ಎಂದು ಕಣ್ಣೀರಿನ ಹಿಂದಿನ ನಿಜವಾದ ಭಾವನೆಯನ್ನು ಹಂಚಿಕೊಂಡರು.
ಇದನ್ನೂ ಓದಿ: ‘ಫೇವರಿಸಂ ಮಾಡಲ್ಲ’; ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ತಾಂಡವ್-ಗಗನ್ಗೆ ಕಿಚ್ಚ ಸುದೀಪ್ ಕ್ಲಾಸ್
ತಾಯಿಯ ನೆನಪು ಹಾಗೂ ಅಗಲಿಕೆಯ ನೋವು ಎಲ್ಲರಿಗೂ ಸಾಮಾನ್ಯ ಎಂಬ ಸುದೀಪ್ ಅವರ ಈ ನುಡಿಗಳು ವೀಕ್ಷಕರ ಮನಸ್ಸನ್ನು ಭಾರವಾಗಿಸಿತು ಮತ್ತು ಬಿಗ್‌ಬಾಸ್ ವೇದಿಕೆಯಲ್ಲಿ ಮತ್ತೊಮ್ಮೆ ಭಾವುಕ ವಾತಾವರಣ ನಿರ್ಮಾಣವಾಯಿತು. ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಸಾಕಷ್ಟು ಪ್ರೀತಿ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಬಳಿಕ ಅವರು ಸಾಕಷ್ಟು ನೋವು ತಿಂದಿದ್ದಾರೆ. ಹಲವು ಸಂದರ್ಭದಲ್ಲಿ ಅವರು ತಾಯಿಯನ್ನು ನೆನಪು ಮಾಡಿಕೊಂಡು ಅತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.