Kichcha Sudeep: ಫಿನಾಲೆ ವೇದಿಕೆಯಲ್ಲಿ ಕಣ್ಣೀರು ಹಾಕಿದ ಸುದೀಪ್; ಬಿಗ್ ಬಾಸ್ ಶೋನಲ್ಲಿ ಅಂಥದ್ದೇನಾಯ್ತು?
Bigg Boss Kannada Season 9 | BBK 9 Finale: ಬಿಗ್ ಬಾಸ್ ಫಿನಾಲೆ ನಡೆಯುವಾಗ ಕಿಚ್ಚ ಸುದೀಪ್ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು. ಆ ಅಪರೂಪದ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾದರು.
ನಟ ಸುದೀಪ್ ಅವರಿಂದ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮಕ್ಕೆ ಸ್ಟಾರ್ ಮೆರುಗು ಸಿಕ್ಕಿದೆ ಎಂದರೆ ತಪ್ಪಿಲ್ಲ. ಮೊದಲ ಸೀಸನ್ನಿಂದ 9ನೇ ಸೀಸನ್ ತನಕ ಅವರು ತುಂಬ ಅಚ್ಚುಕಟ್ಟಾಗಿ ಈ ಶೋ ನಡೆಸಿಕೊಟ್ಟಿದ್ದಾರೆ. ಇದೊಂದು ಕಾಂಟ್ರವರ್ಸಿ ಕಾರ್ಯಕ್ರಮ ಎಂಬ ಅಭಿಪ್ರಾಯ ಬಹುತೇಕರಲ್ಲಿ ಇದೆ. ಕೆಲವೊಮ್ಮೆ ಸ್ಪರ್ಧಿಗಳ ಮಾತು ಮತ್ತು ನಡವಳಿಕೆ ಮಿತಿ ಮೀರುವುದುಂಟು. ಅಂಥ ಸಂದರ್ಭಗಳನ್ನು ಕಿಚ್ಚ ಸುದೀಪ್ (Kichcha Sudeep) ಅವರು ತುಂಬ ಘನತೆಯಿಂದ ನಿಭಾಯಿಸಿದ್ದುಂಟು. ಡಿಸೆಂಬರ್ 31ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಫಿನಾಲೆ (Bigg Boss Kannada Finale) ನಡೆಯಿತು. ಈ ವೇದಿಕೆಯಲ್ಲಿ ಸುದೀಪ್ ಅವರು ಕಣ್ಣೀರು ಹಾಕಿದರು. ಅವರು ಭಾವುಕರಾಗಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸ್ಪರ್ಧಿ ಎಲಿಮಿನೇಟ್ ಆದಾಗ ಅವರ ಜರ್ನಿಯನ್ನು ಮೆಲುಕು ಹಾಕುವಂತಹ ವಿಡಿಯೋ ಬಿತ್ತರ ಮಾಡಲಾಗುತ್ತಿದೆ. ಅದೇ ರೀತಿ, ಕೊನೇ ಸಂಚಿಕೆ ಆದ್ದರಿಂದ ಸುದೀಪ್ ಅವರ ಬೆಸ್ಟ್ ಕ್ಷಣಗಳನ್ನು ನೆನಪಿಸುವಂತಹ ವಿಡಿಯೋವನ್ನು ಶನಿವಾರ (ಡಿ.31) ಪ್ರಸಾರ ಮಾಡಲಾಯಿತು. ಅವರ ಬದ್ಧತೆ, ನಾಯಕತ್ವ, ನಿರೂಪಣೆಯ ಶೈಲಿ ಹಾಗೂ ಒಟ್ಟಾರೆ ವ್ಯಕ್ತಿತ್ವವನ್ನು ಅದರಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು. ಆ ವಿಡಿಯೋ ನೋಡಿ ಸುದೀಪ್ ಎಮೋಷನಲ್ ಆದರು.
ಇದನ್ನೂ ಓದಿ: Rakesh Adiga: ‘ಬಿಗ್ ಬಾಸ್’ ವಿನ್ ಆಗದಿದ್ರೂ 12 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಪಡೆದ ರಾಕೇಶ್ ಅಡಿಗ
ಫಿನಾಲೆ ಮಧ್ಯೆ ಈ ರೀತಿ ವಿಡಿಯೋ ಪ್ರದರ್ಶನ ಆಗಿದ್ದು ನೋಡಿ ಸುದೀಪ್ ಅವರು ಭಾವುಕರಾಗಿ ಕಣ್ಣೀರು ಸುರಿಸಿದರು. ಈ ಅಪರೂಪದ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾದರು. ಒಂದೆರಡು ನಿಮಿಷ ಸುಧಾರಿಸಿಕೊಂಡ ಬಳಿಕ ಸುದೀಪ್ ಮಾತನಾಡಿದರು. ‘ನನಗೆ ಈ ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು. ಈ ವಿಡಿಯೋದಲ್ಲಿ ನನಗೆ ನಾನು ಕಾಣಿಸಲಿಲ್ಲ. ನಿಮ್ಮೆಲ್ಲರ ಪ್ರೀತಿ ಕಾಣಿಸಿತು’ ಎಂದು ಅವರು ಹೇಳಿದರು.
ಇದನ್ನೂ ಓದಿ: BBK 9 Finale: ಬಿಗ್ ಬಾಸ್ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್
‘ಈ ವಿಡಿಯೋದಲ್ಲಿ ಇದ್ದಷ್ಟು ಪರ್ಫೆಕ್ಟ್ ನಾನಲ್ಲ. ಈ ಸ್ಥಾನಕ್ಕೆ ಬಂದಾಗ ತುಂಬ ಪರ್ಫೆಕ್ಟ್ ಆಗಿರಬೇಕು, ಎಲ್ಲರೂ ಸರಿಯಾಗಿ ಇರಬೇಕು ಎಂಬ ಒತ್ತಡ ಸೃಷ್ಟಿ ಆಗುತ್ತದೆ. ಆಗ ನಾನು ಕೂಡ ನಿಮ್ಮೆಲ್ಲರ ರೀತಿ ಸಿಂಪಲ್ ಮ್ಯಾನ್ ಆಗಿ ಬೆಳಗ್ಗೆ ಎದ್ದೇಳಬೇಕು ಅಂತ ಆಸೆ ಆಗುತ್ತದೆ’ ಎಂದಿದ್ದಾರೆ ಸುದೀಪ್.
View this post on Instagram
‘ಪಾತ್ರ ಅಲ್ಲದೇ ನಾನು ಸುದೀಪ್ ಆಗಿ ಇಲ್ಲಿ ಇರುವುದಕ್ಕೆ, ಪ್ರೀತಿಯಿಂದ ನನ್ನನ್ನು ನೀವು ಸ್ವಾಗತಿಸಿದ್ದಕ್ಕೆ, ಗೌರವ ನೀಡಿದ್ದಕ್ಕೆ, ಹೊರಗಡೆ ಜನ ನೀಡಿದ ಪ್ರೀತಿಗೆ ಪ್ರತಿಯಾಗಿ ವಾಪಸ್ ನೀಡಲು ನನ್ನ ಬಳಿ ಏನೂ ಇಲ್ಲ. ನನ್ನ ಕೈ ಖಾಲಿ ಇದೆ. ಪ್ರತಿ ಸಂಚಿಕೆಯಲ್ಲೂ ನಿಮ್ಮಿಂದ ನಾನು ಕಲಿತಿದ್ದೇನೆ. ಇಡೀ ತಾಂತ್ರಿಕ ವರ್ಗವನ್ನು ನಾನು ಪ್ರೀತಿಸುತ್ತೇನೆ’ ಎಂದು ಸುದೀಪ್ ಹೇಳಿದಾಗ ಇಡೀ ವಾತಾವರಣ ಭಾವುಕವಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.