Lakshana Serial: ಶ್ವೇತಾಳ ಕುತಂತ್ರಕ್ಕೆ ಆಕೆಯ ದಾರಿಯಲ್ಲೇ ತಕ್ಕ ಪಾಠ ಕಲಿಸಿದ ನಕ್ಷತ್ರ

ನಕ್ಷತ್ರಳ ತಿರುಗುಬಾಣಕ್ಕೆ ಕೋಪಗೊಂಡಿರುವ ಶ್ವೇತಾ ಇನ್ನೇನು ಅವಾಂತರ ಸೃಷ್ಟಿ ಮಾಡುತ್ತಾಳೆ. ಶ್ವೇತಾಳ ತಂತ್ರಕ್ಕೆ ನಕ್ಷತ್ರ ಪ್ರತಿತಂತ್ರ ಮಾಡಿ ಶ್ವೇತಾಳ ಅಹಂಕಾರವನ್ನು ಮುರಿದ್ದಾಳೆ.

Lakshana Serial: ಶ್ವೇತಾಳ ಕುತಂತ್ರಕ್ಕೆ ಆಕೆಯ ದಾರಿಯಲ್ಲೇ ತಕ್ಕ ಪಾಠ ಕಲಿಸಿದ ನಕ್ಷತ್ರ
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 01, 2022 | 10:22 AM

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭೂಪತಿ ಹಾಗೂ ಶಕುಂತಳಾದೇವಿ ಮುಂದೆ ನಕ್ಷತ್ರಳನ್ನು ಕೆಟ್ಟವಳನ್ನಾಗಿಸಬೇಕೆಂದು, ತಾನೆ ಕಾಫಿಗೆ ಉಪ್ಪು ಹಾಕಿ ಅದನ್ನು ನಕ್ಷತ್ರಳ ವಿರುದ್ಧ ಎತ್ತಿ ಕಟ್ಟುವ ಮೂಲಕ ಯಶಸ್ಸು ಸಾಧಿಸಿದ್ದಾಳೆ ಶ್ವೇತಾ.

ಶ್ವೇತಾಳ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಹೊರಟಿದ್ದಾಳೆ ನಕ್ಷತ್ರ

ಶ್ವೇತಾ ಮಾಡಿರುವ ಕುತಂತ್ರದ ಕೆಲಸಕ್ಕೆ ಆಕೆಗೆ ತಕ್ಕ ಪಾಠ ಕಲಿಸಲು ಹೊರಟಿದ್ದಾಳೆ ನಕ್ಷತ್ರ. ಭೂಪತಿಯ ಕಣ್ಣ ಮುಂದೆ ನಕ್ಷತ್ರಳನ್ನು ಸಣ್ಣವಳನ್ನಾಗಿಸಲು ಶ್ವೇತಾ ಇಷ್ಟೆಲ್ಲಾ ಮಾಡಿರುವುದನ್ನು ನೋಡಿ, ಭೂಪತಿಯ ಮೂಲಕನೇ ಆಕೆಗೆ ಬುದ್ಧಿ ಕಲಿಸಲು ಯೋಜನೆಯೊಂದನ್ನು ನಕ್ಷತ್ರ ರೂಪಿಸಿದ್ದಾಳೆ. ತಾನು ಮಾಡಿದ ಪ್ಲಾನ್ ಪ್ರಕಾರ ಕೋಣೆಯಲ್ಲಿ ಕಾನ್ಫರೆನ್ಸ್ ಮೀಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಭೂಪತಿಯ ಬಳಿಗೆ ಬಂದು ನನಗೆ ಶುಂಠಿ ಟೀ ಬೇಕೆಂದು ನಕ್ಷತ್ರ ಕೇಳುತ್ತಾಳೆ. ಅವನು ಆಗುವುದಿಲ್ಲ ಎಂದು ಹೇಳಿದರೂ ನಕ್ಷತ್ರ ಹಠ ಮಾಡಿ ನನಗೆ ಟೀ ಬೇಕೇ ಬೇಕು ಎಂದು ಪಟ್ಟು ಹಿಡಿಯುತ್ತಾಳೆ.

ಆಕೆಯ ಕಾಟ ತಡೆಯಲಾಗದೆ ಮನೆಯವರಿಗೆಲ್ಲರಿಗೂ ಶುಂಠಿ ಟೀ ಮಾಡಿಕೊಡಲು ಒಪ್ಪುತ್ತಾನೆ ಭೂಪತಿ. ಟೀ ಮಾಡಲು ಕಿಚನ್‌ಗೆ ಹೋದ ಭೂಪತಿಯ ಹಿಂದೆನೇ ನಕ್ಷತ್ರ ಹೋಗಿ ಅಲ್ಲೂ ಭೂಪತಿಗೆ ಕೀಟಲೆ ಕೊಡುತ್ತಾಳೆ. ಸುಮ್ಮನೆ ನಿಂತುಕೋ ಎಂದು ಭೂಪತಿ ಹೇಳಿದರೂ ನಕ್ಷತ್ರ ವಟ ವಟ ಮಾತನಾಡುತ್ತಾ ನಿಲ್ಲುತ್ತಾಳೆ. ಅಂತೂ ಇಂತೂ ನಕ್ಷತ್ರಳ ಕಾಟ ತಡೆದುಕೊಂಡು ಟೀ ಮಾಡಿ ಕೊಡುತ್ತಾನೆ. ಶ್ವೇತಾಳಿಗೆ ನಾನೇ ಟೀ ಕೊಡುತ್ತೇನೆ. ಅವಳ ಬಳಿ ಕ್ಷಮೆ ಕೇಳಬೇಕು. ಬೆಳಗ್ಗೆ ನಡೆದ ಘಟನೆಯಿಂದ ಆಕೆಗೆ ಬೇಜಾರಾಗಿರಬಹುದು, ಹಾಗಾಗಿ ಅವಳಿಗೆ ಕ್ಷಮೆ ಕೇಳಬೇಕು ಎಂದು ಹೇಳಿ ಕಾಫಿಯನ್ನು ಶ್ವೇತಾಳ ಕೋಣೆಗೆ ತರುತ್ತಾಳೆ ನಕ್ಷತ್ರ.

ಕಾಫಿ ತಂದವಳೇ ತಗೊಳಿ ಮೇಡಂ ಶುಂಠಿ ಟೀ ಎಂದು ನಕ್ಷತ್ರ ಹೇಳುತ್ತಾಳೆ. ನಾನು ಯಾವಾಗ ಟೀ ಕೇಳಿದೆ ಎಂದು ದುರಹಂಕಾರದಿಂದ ಶ್ವೇತಾ ಆಕೆಗೆ ಪ್ರಶ್ನೆ ಮಾಡುತ್ತಾಳೆ. ಈ ಸಮಯದಲ್ಲಿ ಶ್ವೇತಾಳ ದಾರಿಯಲ್ಲೇ ಆಕೆಗೆ ಬುದ್ಧಿ ಕಲಿಸಲು, ಆಕೆ ತಂದಿಟ್ಟಿ ಉಪ್ಪನ್ನು ಟೀಗೆ ಬೆರೆಸಿ ಅದನ್ನು ನೆಲಕ್ಕೆ ಚೆಲ್ಲುತ್ತಾಳೆ ನಕ್ಷತ್ರ. ನಂತರ ಜೋರಾಗಿ ಯಾಕೆ ಟೀ ಚೆಲ್ಲಿದ್ದು ಶ್ವೇತಾ, ನಾನು ಉಪ್ಪು ಹಾಕಿಲ್ಲ ಅದಕ್ಕೆ, ಏನಕ್ಕೆ ಹೀಗೆ ಮಾಡುತ್ತಿದ್ದೀಯಾ ಎಂದು ಶ್ವೇತಾಳಿಗೆ ಕೇಳುತ್ತಾಳೆ. ಆದರೆ ಇಲ್ಲಿ ಏನು ನಡೆಯುತ್ತಿದೆ ಎಂದು ಶ್ವೇತಾಳಿಗೆ ಗೊತ್ತೇ ಆಗಲಿಲ್ಲ. ಅಷ್ಟರಲ್ಲೇ ಭೂಪತಿ, ಶಕುಂತಳಾದೇವಿ, ಮಯೂರಿ ಇವರಿದ್ದ ಕೋಣೆಗೆ ಬಂದು ಏನಾಯಿತೆಂದು ಕೇಳುತ್ತಾರೆ. ಆಗ ನಾನು ಟೀ ಯಲ್ಲಿ ಉಪ್ಪು ಹಾಕಿದ್ದೇನೆಂದು ಶ್ವೇತಾ ಅದನ್ನು ಚೆಲ್ಲಿದ್ದಾಳೆ.

ನಾನು ಯಾಕೆ ಹಾಗೆ ಮಾಡಲಿ ಅತ್ತೆ ಎಂದು ಶಕುಂತಳಾದೇವಿಗೆ ಹೇಳುತ್ತಾಳೆ. ಅವಳು ಉಪ್ಪು ಹಾಕಿದ್ದಾಳೆ ಅದನ್ನು ನಾನೇ ನೋಡಿದ್ದೇನೆ ಎಂದು ಶ್ವೇತಾ ಹೇಳಿದಾಗ ಟೀ ಮಾಡಿದ್ದು ನಾನು ಅದೇಗೆ ನಕ್ಷತ್ರ ಉಪ್ಪು ಹಾಕಲು ಸಾಧ್ಯ ಅಂತ ಭೂಪತಿ ಹೇಳುತ್ತಾನೆ. ಆತನ ಮಾತನ್ನು ಕೇಳಿ ಕುತಂತ್ರಿ ಶ್ವೇತಾಳಿಗೆ ಮಾತೆ ಹೊರಡದೆ ಸುಮ್ಮನೆ ನಿಂತು ಬಿಡುತ್ತಾಳೆ. ನಕ್ಷತ್ರ ಮತ್ತೊಮ್ಮೆ ಶ್ವೇತಾಳ ಹಾಗೆ ನಾಟಕ ಮಾಡಿ ಅತ್ತೆ ಶ್ವೇತಾಳಿಗೆ ನನ್ನ ಮೇಲೆ ಅಷ್ಟೇಲ್ಲ ಅನುಮಾನ ಇದ್ದರೆ ಇನ್ನು ಮುಂದೆ ಅವಳೇ ಟೀ ಕಾಫಿ ಮಾಡಲಿ ಎಂದು ಶಕುಂತಳಾದೇವಿಗೆ ಹೇಳುತ್ತಾಳೆ.

ಅವಳಿಗೆ ಎಲ್ಲ ಕೆಲಸನೂ ಗೊತ್ತು ಶ್ವೇತಾನೇ ಮನೆಯವರಿಗೆಲ್ಲ ಕಾಫಿ ಟೀ ಮಾಡಿ ಕೊಡುತ್ತಾಳೆ ಎಂದು ಹೇಳಿ ಶಕುಂತಳಾದೇವಿ ಹೊರಡುತ್ತಾರೆ. ಎಲ್ಲರು ಹೋದ ಮೇಲೆ ನನ್ನ ತಂಟೆಗೆ ಬಂದರೆ ನಿನಗೆ ಇದೇ ಗತಿ ಎಂದು ಶ್ವೇತಾಳಿಗೆ ಎಚ್ಚರಿಕೆ ಕೊಟ್ಟು ಹೊರಡುತ್ತಾಳೆ ನಕ್ಷತ್ರ. ಮಾರನೆಯ ದಿನ ತಾನು ಬೇಗ ಎದ್ದು, ಶ್ವೇತಾಳಿಗೆ ಬೈದು ಬೇಗ ಎಬ್ಬಿಸಿ ಅಡುಗೆ ಕೋಣೆಗೆ ಕರೆದುಕೊಂಡು ಹೋಗಿ ಕಾಫಿ ಮಾಡಿಸುತ್ತಾಳೆ ನಕ್ಷತ್ರ. ಪ್ರತಿದಿನ ನೀನೆ ಈ ಕೆಲಸ ಮಾಡಬೇಕು ಅಂತನೂ ಹೇಳುತ್ತಾಳೆ. ಅಂತೂ ಇಂತೂ ಶ್ವೇತಾ ಉಪ್ಪು ತಿಂದ ಮೇಲೆ ನೀರು ಕುಡಿದಿದ್ದಾಳೆ. ನಕ್ಷತ್ರಳ ತಿರುಗುಬಾಣಕ್ಕೆ ಕೋಪಗೊಂಡಿರುವ ಶ್ವೇತಾ ಇನ್ನೇನು ಅವಾಂತರ ಸೃಷ್ಟಿ ಮಾಡುತ್ತಾಳೆ ಎಂಬುದನ್ನು ಮುಂದೆ ನೋಡಬೇಕಾಗಿದೆ.

ಮಧುಶ್ರೀ

Published On - 9:53 am, Wed, 9 November 22