‘ಆತನಿಂದ ಜೀವನ ನರಕವಾಯ್ತು’; ಧಾರಾವಾಹಿ ತೊರೆಯಲು ಕಾರಣ ತಿಳಿಸಿದ ನಯನಾ ನಾಗರಾಜ್
ನಟಿ ನಯನಾ ನಾಗರಾಜ್ ಅವರು ‘ಗಿಣಿ ರಾಮ’ ಧಾರಾವಾಹಿಯಿಂದ ನಿರ್ಗಮಿಸಿದ್ದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ವ್ಯಕ್ತಿಯಿಂದ ಸೆಟ್‌ನಲ್ಲಿ ಅವರಿಗೆ ಚಿತ್ರಹಿಂಸೆ ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ವಾಹಿನಿಯವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ನಂತರ ಅವರು ಧಾರಾವಾಹಿಯನ್ನು ತೊರೆದರು.

ನಟಿ ನಯನಾ ನಾಗರಾಜ್ ಅವರು ಈ ಮೊದಲು ‘ಪಾಪ ಪಾಂಡು’ (ಹೊಸ ವರ್ಷನ್) ಧಾರಾವಾಹಿಯಲ್ಲಿ ಚಾರು ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸಿದ ಅವರು ನಂತರ ಕಿರುತೆರೆ ಲೋಕವನ್ನು ತೊರೆದೇ ಬಿಟ್ಟರು. ಈಗ ಅವರು ಸುಹಾಸ್ ಎಂಬ ವ್ಯಕ್ತಿಯನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಾಗಾದರೆ, ನಯನಾ ‘ಗಿಣಿ ರಾಮ’ ಬಿಡಲು ಕಾರಣ ಏನು? ಈ ಬಗ್ಗೆ ನಯನಾ ಅವರು ಮಾತನಾಡಿದ್ದಾರೆ. ತಮಗಾದ ಚಿತ್ರ ಹಿಂಸೆಯನ್ನು ಹೇಳಿಕೊಂಡಿದ್ದಾರೆ.
‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನಯನಾ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಕಹಿ ಘಟನೆ ವಿವರಿಸಿದ್ದಾರೆ. ‘ನನಗೆ ಇಷ್ಟ ಆಗಿಲ್ಲ ಎಂದರೆ ನೇರವಾಗಿ ಹೇಳುತ್ತೇನೆ. ನೀವು ಏನಾದರೂ ಕೆಟ್ಟದ್ದು ಹೇಳಿದರೆ ನನಗೆ ಬೇಸರ ಆಗುತ್ತದೆ. ನನ್ನ ಪಾಡಿಗೆ ನಾನು ಇರುತ್ತಾ ಇದ್ದೆ. ಒಂದೂವರೆ ವರ್ಷದ ಬಳಿಕ ಸೆಟ್‌ನಲ್ಲಿ ಕಿರಿಕ್ ಆಯಿತು. ಒಂದೂಕಾಲು ವರ್ಷ ತಡೆದುಕೊಂಡೆ’ ಎಂದು ಅವರು ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ಹಲವು ವರ್ಷ ಇದ್ದ ವ್ಯಕ್ತಿಯೊಬ್ಬರು ‘ಗಿಣಿ ರಾಮ’ ಧಾರಾವಾಹಿ ಸೆಟ್‌ನಲ್ಲಿ ನಯನಾ ಜೊತೆ ಕಠಿಣವಾಗಿ ನಡೆದುಕೊಂಡರು. ನಯನಾ ಕೂಡ ಅದೇ ಟೋನ್ನಲ್ಲಿ ಉತ್ತರ ಕೊಟ್ಟರಂತೆ. ಈ ವಿಚಾರ ಆ ವ್ಯಕ್ತಿಯ ಅಹಂಗೆ ಪೆಟ್ಟು ನೀಡಿತು. ಅಂದಿನಿಂದ ನಯನಾ ಜೀವನ ನರಕವಾಗಿ ಹೋಯಿತು.
‘ಅಲ್ಲಿ ನನ್ನ ತಪ್ಪಿರಲಿಲ್ಲ. ಆದರೆ, ಅವರು ದ್ವೇಷ ಸಾಧಿಸಲು ಪ್ರಾರಂಭಿಸಿದರು. ಎಲ್ಲರೂ ತುಂಬಾನೇ ಖುಷಿಯಿಂದ ಬಂದು ಮಾತನಾಡುತ್ತಿದ್ದರು. ಆದರೆ, ಆ ವ್ಯಕ್ತಿ ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡರು. ಯಾರಾದರೂ ಬಂದು ನನ್ನ ಬಳಿ ಮಾತನಾಡಿದರೆ, ಏನೋ ಲಲ್ಲೆ ಹೊಡಿತೀಯಾ ಎನ್ನುತ್ತಿದ್ದರು. ನಾನು ಕುಗ್ಗಿ ಹೋದೆ. ಆ್ಯಕ್ಷನ್ ಎನ್ನುವಾಗ ಕೆಟ್ಟ ಕಮೆಂಟ್ ಮಾಡುತ್ತಿದ್ದರು. ಆ ಬಳಿಕ ಅದು ನಿನಗಲ್ಲ ಎನ್ನುತ್ತಿದ್ದರು. ವಾಹಿನಿಯವರಿಗೆ ಹೇಳಿದೆ. ಆದರೆ ಹೆಚ್ಚೇನು ಬದಲಾವಣೆ ಆಗಿಲ್ಲ’ ಎಂದಿದ್ದಾರೆ ನಯನಾ.
‘ನಾನು ಕುಗ್ಗಿ ನಿತ್ಯ ಅಳುತ್ತಿದ್ದೆ. ನಾನು ಇಷ್ಟಪಟ್ಟು ಬಂದ ಕ್ಷೇತ್ರ ಇದಾಗಿತ್ತು. ಸೆಟ್‌ನಲ್ಲಿ ಆದ ಫ್ರಸ್ಟ್ರೇಷನ್ನ ಆಪ್ತರ ಮೇಲೆ ಹಾಕುತ್ತಿದ್ದೆ. ಯಾರೊಬ್ಬರೂ ನನ್ನ ಸಹಾಯಕ್ಕೆ ಬಂದಿಲ್ಲ. ನಾನು ಧಾರಾವಾಹಿ ಬಿಡುವ ನಿರ್ಧಾರ ತೆಗೆದುಕೊಂಡೆ. ನೀನು ಬಿಟ್ಟರೆ ಧಾರಾವಾಹಿ ಮುಗಿಯುತ್ತದೆ ಎಂದರು. ತೊಂದರೆ ಇಲ್ಲ. ನಾನು ಬಿಟ್ಟ ಬಳಿಕ ಧಾರಾವಾಹಿ ಪೂರ್ಣಗೊಂಡಿತು’ ಎಂದಿದ್ದಾರೆ ನಯನಾ.
ಇದನ್ನೂ ಓದಿ: ನಯನಾತಾರಾಗೆ ದೊಡ್ಡ ಹಿನ್ನಡೆ: ಧನುಷ್ ಪರವಾಗಿ ತೀರ್ಪು ನೀಡಿದ ಕೋರ್ಟ್
‘ಪ್ರತಿ ದಿನ ನನಗೆ ಮೂರು 3,600 ರೂಪಾಯಿ ಕೊಡುತ್ತಿದ್ದರು. 15 ಸಾವಿರ ಕೊಡ್ತಾರೆ ಅನ್ನೋದಲ್ಲ ಸುಳ್ಳು. ಪ್ರತಿ ತಿಂಗಳೂ ಹೊಸ ಸೀರೆ ತೆಗೆದುಕೊಳ್ಳಬೇಕು’ ಎಂದು ಬೇಸರ ಹೊರಹಾಕಿದ್ದಾರೆ ನಯನಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.