Puneeth Rajkumar: 6 ಸೂಪರ್ ಹಿಟ್ ಚಿತ್ರಗಳ ಮೂಲಕ ಅಪ್ಪುಗೆ ನಮನ ಸಲ್ಲಿಸಲಿರುವ ವೂಟ್ ಸೆಲೆಕ್ಟ್ ಮತ್ತು ಕಲರ್ಸ್ ಕನ್ನಡ
Puneeth Rajkumar Movies: ಅಪ್ಪು, ಅಭಿ, ಆಕಾಶ್, ಮೌರ್ಯ, ನಮ್ಮ ಬಸವ, ಅಜಯ್ ಸಿನಿಮಾಗಳು ಪ್ರಸಾರಕ್ಕೆ ಸಜ್ಜಾಗಿವೆ. ಈ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಲಾಗುತ್ತದೆ.
ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಎಲ್ಲರಿಗೂ ಕಷ್ಟ ಆಗುತ್ತಿದೆ. ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಸಿನಿಮಾಗಳ ಮೂಲಕ ಅವರು ಎಂದಿಗೂ ಅಮರ. ಅವರ ಮೊದಲ ವರ್ಷದ ಪುಣ್ಯ ಸ್ಮರಣೆ (Puneeth Rajkumar Death Anniversary) ಪ್ರಯುಕ್ತ ವೂಟ್ ಸೆಲೆಕ್ಟ್ ಮತ್ತು ಕಲರ್ಸ್ ಕನ್ನಡ (Colors Kannada) ವತಿಯಿಂದ ನಮನ ಸಲ್ಲಿಸಲಾಗುತ್ತಿದೆ. ಅದು ಕೂಡ ಆರು ಸೂಪರ್ ಹಿಟ್ ಸಿನಿಮಾಗಳ ಮೂಲಕ ಎಂಬುದು ವಿಶೇಷ. ಹೌದು, ಪುನೀತ್ ಅವರು ಹೀರೋ ಆಗಿ ವೃತ್ತಿಜೀವನ ಆರಂಭಿಸಿದ ಶುರುವಿನ ಕಾಲದ 6 ಸೂಪರ್ ಹಿಟ್ ಚಿತ್ರಗಳಾದ ‘ಅಪ್ಪು’, ‘ಅಭಿ’, ‘ಆಕಾಶ್’, ‘ಮೌರ್ಯ’, ‘ನಮ್ಮ ಬಸವ’ ಮತ್ತು ‘ಅಜಯ್’ ಸಿನಿಮಾಗಳನ್ನು ಬಿತ್ತರಿಸಲು ಸಮಯ ನಿಗದಿ ಆಗಿದೆ.
‘ಅಪ್ಪು ಸಿನಿನಮನ’ದ ಅಂಗವಾಗಿ ಅಕ್ಟೋಬರ್ 28ರಂದು ‘ವೂಟ್ ಸೆಲೆಕ್ಟ್’ ಒಟಿಟಿ ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಈ 6 ಚಿತ್ರಗಳು ವೀಕ್ಷಣೆಗೆ ಲಭ್ಯವಾಗಲಿವೆ. ‘ಪವರ್ ಸ್ಟಾರ್’ ಅಭಿನಯದ ಆರು ಸೂಪರ್ ಹಿಟ್ ಸಿನಿಮಾಗಳನ್ನು ಆಸ್ವಾದಿಸುವ ಅವಕಾಶವನ್ನು ವೂಟ್ ತನ್ನ ವೀಕ್ಷಕರಿಗೆ ಒದಗಿಸಿಕೊಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 27ರಿಂದ 29ರವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ‘ಆಕಾಶ್’, ‘ಮೌರ್‍ಯ’ ಮತ್ತು ‘ಅಪ್ಪು’ ಸಿನಿಮಾಗಳು ಪ್ರಸಾರವಾಗಲಿವೆ. ನಂತರ ಪ್ರತಿ ಶುಕ್ರವಾರ ಅಂದರೆ, ನ.5, ನ.12 ಮತ್ತು ನ.19ಕ್ಕೆ ಮಧ್ಯಾಹ್ನ 2 ಗಂಟೆಗೆ ‘ಅಜಯ್’, ‘ನಮ್ಮ ಬಸವ’ ಮತ್ತು ‘ಅಭಿ’ ಸಿನಿಮಾಗಳು ಪ್ರಸಾರವಾಗಲಿವೆ.
‘ಪುನೀತ್ ಅವರನ್ನು ಕಳೆದುಕೊಂಡು ಒಂದು ವರ್ಷ ಆಗಿರುವ ಈ ಸಂದರ್ಭದಲ್ಲಿ ನಮ್ಮ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಅವರು ಆರು ಸಿನಿಮಾಗಳು ಮೊದಲನೇ ಬಾರಿಗೆ ಪ್ರಸಾರವಾಗುತ್ತಿವೆ. ಈ ಸಿನಿಮಾಗಳನ್ನು ನೋಡುತ್ತ ಅವರು ಬದುಕಿದ್ದ ಮೌಲ್ಯಗಳನ್ನು ಜನರು ನೆನಪಿಸಿಕೊಳ್ಳಲು ಸಾಧ್ಯವಾದರೆ, ಅವುಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಅದು ದೊಡ್ಡ ಗೆಲುವು ಅಂತ ನಾನು ಭಾವಿಸುತ್ತೇನೆ’ ಎಂದಿದ್ದಾರೆ ಕಲರ್ಸ್ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.
View this post on Instagram
‘ಪುನೀತ್ ರಾಜ್‌ಕುಮಾರ್ ಒಬ್ಬ ಒಳ್ಳೆಯ ನಟ ಅಷ್ಟೇ ಅಲ್ಲ, ನಿಷ್ಕಲ್ಮಶ ನಗು ಇರುವ ಅಪ್ಪಟ ಕನ್ನಡದ ವ್ಯಕ್ತಿ. ಅವರು ಅನೇಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ಜೊತೆಗೆ ‘ಕನ್ನಡದ ಕೋಟ್ಯಧಿಪತಿ’, ‘ಫ್ಯಾಮಿಲಿ ಪವರ್’ ಶೋಗಳನ್ನು ಮಾಡುವಾಗ ಆ ಮೌಲ್ಯಗಳನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು’ ಎಂಬುದು ಪರಮೇಶ್ವರ ಗುಂಡ್ಕಲ್ ಮಾತುಗಳು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Tue, 25 October 22