ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್​; ಕಿರುತೆರೆಯಲ್ಲಿ ಅತಿಥಿಯಾಗಿ ಕಮಾಲ್​ ಮಾಡಲು ಬಂದ ನಟಿ

‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಧಾರಾವಾಹಿಯಲ್ಲಿ ಸಂಗೀತಾ ಭಟ್​ ಅವರು ನಾಗಿಣಿ ಪಾತ್ರ ಮಾಡಿದ್ದಾರೆ. ನಾಗರ ಪಂಚಮಿ ಪ್ರಯುಕ್ತ ಈ ವಿಶೇಷ ಎಪಿಸೋಡ್​ ಪ್ರಸಾರ ಆಗಲಿದೆ.

ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್​; ಕಿರುತೆರೆಯಲ್ಲಿ ಅತಿಥಿಯಾಗಿ ಕಮಾಲ್​ ಮಾಡಲು ಬಂದ ನಟಿ
ಸಂಗೀತಾ ಭಟ್
TV9kannada Web Team

| Edited By: Madan Kumar

Jul 29, 2022 | 8:31 AM

ನಟಿ ಸಂಗೀತ ಭಟ್​ (Sangeetha Bhat) ಅವರು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. 2011ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇತ್ತೀಚಿನ ವರ್ಷಗಳಲ್ಲಿ ಚ್ಯೂಸಿ ಆಗಿದ್ದಾರೆ ಎನ್ನಬಹುದು. ‘ಪ್ರೀತಿ ಗೀತಿ ಇತ್ಯಾದಿ’, ‘ಮಾಮೂ ಟೀ ಅಂಗಡಿ’, ‘ದಯವಿಟ್ಟ ಗಮನಿಸಿ’, ‘ಎರಡನೇ ಸಲ’ ಮುಂತಾದ ಸಿನಿಮಾಗಳಲ್ಲಿ ಸಂಗೀತಾ ಭಟ್​ ನಟಿಸಿದರು. ಈಗ ಅವರು ಕಿರುತೆಯಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗಂತ ಮಾತ್ರಕ್ಕೆ ಫುಲ್​ ಟೈಮ್ ಕನ್ನಡ​ ಧಾರಾವಾಹಿಯಲ್ಲಿ (Kannada Serial) ಬ್ಯುಸಿ ಆಗಿಲ್ಲ. ಬದಲಿಗೆ ಒಂದು ಅತಿಥಿ ಪಾತ್ರ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಈ ಮೊದಲು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅವರು ಈಗ ಸ್ಟಾರ್​ ಸುವರ್ಣ (Star Suvarna) ವಾಹಿನಿಯ ‘ಎಡೆಯೂರು ಶ್ರೀ ಸಿದ್ದಲಿಂಗೇಶ್ವರ’ ಸೀರಿಯಲ್​ನಲ್ಲಿ ಚಿಕ್ಕದೊಂದು ಪಾತ್ರ ನಿಭಾಯಿಸಿದ್ದಾರೆ. ಅವರ ಪಾಲಿಗೆ ಈ ಪಾತ್ರ ತುಂಬ ವಿಶೇಷವಾಗಿದೆ.

ನಾಗರ ಪಂಚಮಿ ಹಬ್ಬದ ಪ್ರಯುಕ್ತ ಪ್ರಸಾರ ಆಗಲಿರುವ ‘ನಾಗಮಣಿ ರಹಸ್ಯ’ ಎಂಬ ವಿಶೇಷ ಎಪಿಸೋಡ್​ಗಾಗಿ ಸಂಗೀತಾ ಭಟ್​ ಅವರು ಈ ಪಾತ್ರ ಮಾಡಿದ್ದಾರೆ. ಅವರ ಗೆಟಪ್​ ಗಮನ ಸೆಳೆಯುವಂತಿದೆ. ಇದು ಅವರಿಗೆ ಹೊಸ ಅನುಭವ. 3 ಗಂಟೆಗಳ ಮಹಾ ಸಂಚಿಕೆ ಇದಾಗಿದ್ದು ನಾಗಿಣಿಯಾಗಿ ಸಂಗೀತಾ ಭಟ್​ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಬಿತ್ತರವಾಗುತ್ತಿದ್ದು, ಈಗಾಗಲೇ ಹೈಪ್​ ಸೃಷ್ಟಿ ಮಾಡಿದೆ.

‘ಸ್ಟಾರ್​ ಸುವರ್ಣ’ ವಾಹಿನಿಯಲ್ಲಿ ಜುಲೈ 31ರ ಭಾನುವಾರ ಸಂಜೆ 6 ಗಂಟೆಗೆ ಈ ಸಂಚಿಕೆ ಪ್ರಸಾರ ಆಗಲಿದೆ. ಬಳಿಕ ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಮೂಲಕವೂ ವೀಕ್ಷಕರು ಈ ಸ್ಪೆಷಲ್​ ಸಂಚಿಕೆಯನ್ನು ನೋಡಬಹುದು. ನವೀನ್​ ಕೃಷ್ಣ ಅವರು ‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದ ಈ ಧಾರಾವಾಹಿ ಗಮನ ಸೆಳೆಯುತ್ತಿದೆ. ಭಕ್ತಿ ಪ್ರಧಾನ ಕಥಾಹಂದರದ ಈ ಸೀರಿಯಲ್​​ಗೆ ವೀಕ್ಷಕರು ಮನಸೋತಿದ್ದಾರೆ.

‘ಇದೇ ಮೊದಲ ಬಾರಿಗೆ ನಾನು ಗ್ರೀನ್​ ಮ್ಯಾಟ್​ನಲ್ಲಿ ಚಿತ್ರೀಕರಣ ಮಾಡಿದ್ದೇನೆ. ನಾಗಿಣಿ ಪಾತ್ರ ಮಾಡಬೇಕು ಎಂಬ ಆಸೆ ತುಂಬ ದಿನಗಳಿಂದ ನನಗೆ ಇತ್ತು. ಅದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ಈಡೇರಿತು. ಅದಕ್ಕಾಗಿ ತುಂಬ ಖುಷಿ ಇದೆ. ಇದರಲ್ಲಿ ಮಾಮೂಲಿ ಕನ್ನಡ ಇಲ್ಲ. ಸಂಭಾಷಣೆಗಳು ಕಾವ್ಯಾತ್ಮಕವಾಗಿವೆ. ಇಂಥ ಪಾತ್ರ ಮಾಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಸಂಗೀತಾ ಭಟ್​ ಹೇಳಿದ್ದಾರೆ.

ಇದನ್ನೂ ಓದಿ

ಈ ಹಿಂದೆ ಸಿನಿಮಾಗಳ ಜೊತೆ ಜೊತೆಯಲ್ಲೇ ಸಂಗೀತಾ ಭಟ್​ ಅವರು ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ನೀಲಿ’, ‘ಭಾಗ್ಯವಂತರು’, ‘ಚಂದ್ರ ಚಕೋರಿ’, ‘ಚಂದ್ರಮುಖಿ’, ‘ಪಂಜರದ ಗಿಣಿ’ ಸೀರಿಯಲ್​ಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಪರಭಾಷೆ ಕೆಲವು ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada