‘ಜೊತೆ ಜೊತೆಯಲಿ’ ಧಾರಾವಾಹಿ: ಭಾರೀ ಅಪಾಯದ ಮುನ್ಸೂಚನೆ ನೀಡಿದ ಆರ್ಯವರ್ಧನ್
ಸಂಜುಗೆ ನಿಧಾನವಾಗಿ ಹಳೆಯ ನೆನಪುಗಳು ಬರುತ್ತಿವೆ. ಆತ ಗೊತ್ತಿಲ್ಲದೆ ಆರ್ಯವರ್ಧನ್ ರೀತಿಯಲ್ಲಿ ವರ್ತಿಸುತ್ತಿದ್ದಾನೆ.
‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಕೆಲವು ಟ್ವಿಸ್ಟ್ಗಳು ಎದುರಾಗಿವೆ. ಆರ್ಯವರ್ಧನ್ ಪಾತ್ರಧಾರಿ ಬದಲಾಗಿದ್ದಾನೆ. ಹರೀಶ್ ರಾಜ್ ಅವರು ಆರ್ಯವರ್ಧನ್ನ ಪಾತ್ರವನ್ನು ಮಾಡುತ್ತಿದ್ದಾರೆ. ಸಂಜು ಎಂದು ಎಂಟ್ರಿ ಕೊಟ್ಟಿರುವ ವ್ಯಕ್ತಿಯೇ ಆರ್ಯವರ್ಧನ್ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಸಂಜು ಎಂದೇ ಎಲ್ಲರೂ ಆತನನ್ನು ಕರೆಯುತ್ತಿದ್ದಾರೆ. ಈಗ ಆತ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಅನುಮಾನ ಮೂಡಿಸಿದೆ. ಆತ ಯಾಕೆ ಈ ರೀತಿ ವರ್ತಿಸುತ್ತಿದ್ದಾನೆ ಎಂಬಿತ್ಯಾದಿ ಅನುಮಾನ ಮೂಡಿದೆ. ಈ ಮಧ್ಯೆ ಸಂಜುಗೆ ನಿಧಾನವಾಗಿ ಹಳೆಯ ನೆನಪುಗಳು ಬರುತ್ತಿವೆ. ಆತ ಗೊತ್ತಿಲ್ಲದೆ ಆರ್ಯವರ್ಧನ್ ರೀತಿಯಲ್ಲಿ ವರ್ತಿಸುತ್ತಿದ್ದಾನೆ.
ಆರ್ಯವರ್ಧನ್ ಎಂದು ಬರೆದ ಸಂಜು
ಸಂಜುಗೆ ನಿಧಾನವಾಗಿ ನೆನಪು ಮರಳಲಿದೆ ಎಂಬುದನ್ನು ವೈದ್ಯರು ಹೇಳಿದ್ದರು. ಅದು ನಿಜವಾಗುತ್ತಿದೆ. ಕೆಲವು ಕಡೆಗಳಲ್ಲಿ ಆತನಿಗೆ ಹಳೆಯ ನೆನಪು ಮರುಕಳಿಸುತ್ತಿದೆ. ಸಂಜು ಈಗ ಕಚೇರಿಗೆ ತೆರಳೋಕೆ ಶುರುಮಾಡಿದ್ದಾನೆ. ಅದೂ ಆರ್ಯವರ್ಧನ್ ಬಾಸ್ ಆಗಿದ್ದ ಕಚೇರಿಗೆ. ಹೀಗಾಗಿ, ಸಹಜವಾಗಿಯೇ ಹಳೆಯ ನೆನಪುಗಳು ಮರಳುತ್ತಿವೆ. ಆತ ಕಚೇರಿಗೆ ಬಂದ ಸಂದರ್ಭದಲ್ಲಿ ಎಂಟ್ರಿ ಬುಕ್ನಲ್ಲಿ ಹೆಸರು ಬರೆದು ಬರಬೇಕಿತ್ತು. ಈ ವೇಳೆ ಆತ ಆರ್ಯವರ್ಧನ್ ಎಂದು ಬರೆದು ಬಂದಿದ್ದ. ಎಲ್ಲರಿಗೂ ಪರಿಚಯ ಮಾಡಿಸುವಾಗ ಮೀರಾ ಹೆಗ್ಡೆ ‘ಈತ ವಿಶ್ವಾಸ್ ದೇಸಾಯಿ. ಎಲ್ಲರೂ ಈತನನ್ನು ಸಂಜು ಎಂದು ಕರೆಯುತ್ತಾರೆ’ ಎಂದಳು. ಆಗ ತಾನು ಆರ್ಯವರ್ಧನ್ ಎಂದು ಬರೆದು ಬಂದಿರುವ ವಿಚಾರ ಆತನಿಗೆ ನೆನಪಾಗಿದೆ.
ಅನುಗೆ ಅಪಾಯ ಇರುವ ವಿಚಾರ ರಿವೀಲ್ ಮಾಡಿದ ಸಂಜು
ಅನು ಸಿರಿಮನೆಯನ್ನು ಕೊಲ್ಲಲು ಝೇಂಡೆ ಪ್ಲ್ಯಾನ್ ರೂಪಿಸಿದ್ದ. ಆರ್ಯವರ್ಧನ್ನ ಕೊಲ್ಲೋಕೆ ಅನು ಸಂಚು ರೂಪಿಸಿದ್ದಳು ಎಂಬುದು ಆತನ ಊಹೆ. ಈ ಕಾರಣಕ್ಕೆ ಆಕೆಯನ್ನು ಕೊಲ್ಲಿಸಲು ಸುಪಾರಿ ನೀಡಿದ್ದ. ಈ ವಿಚಾರ ಸಂಜುಗೆ ತಿಳಿದೇ ಹೋಗಿದೆ. ಆರ್ಯವರ್ಧನ್ ಅಸ್ಥಿ ಬಿಡಲು ಇಡೀ ಕುಟುಂಬ ನದಿ ಸಮೀಪ ತೆರಳಿತ್ತು. ಆಗ ಸುಪಾರಿ ತೆಗೆದುಕೊಂಡ ವ್ಯಕ್ತಿಗಳು ಬಲೆ ಹಾಕಿ ಅನುನ ನದಿಗೆ ಬೀಳಿಸಿದ್ದರು. ಅನು ಕಾಲಿಗೆ ಸಿಕ್ಕ ಬಲೆಯ ತುಂಡು ಸಂಜುಗೆ ಸಿಕ್ಕಿದೆ. ಈ ರೀತಿ ಬಲೆ ಹಿಡಿದು ಬಂದವರನ್ನು ಸಂಜು ಮೊದಲೇ ನೋಡಿದ್ದ. ಹೀಗಾಗಿ ಅನುಮಾನ ಹೆಚ್ಚಾಗಿದೆ. ಅಲ್ಲದೆ, ಸುಪಾರಿ ತೆಗೆದುಕೊಂಡಿದ್ದ ವ್ಯಕ್ತಿ ಅನು ಮನೆಯ ಸುತ್ತಮುತ್ತ ಕಾಣಿಸಿಕೊಂಡಿದ್ದ. ಈ ಎಲ್ಲಾ ಕಾರಣಕ್ಕೆ ಅನುಮಾನ ಹೆಚ್ಚಾಗಿದೆ.
ಈ ವಿಚಾರವನ್ನು ಅನು ಅತ್ತೆ ಶಾರದಾ ದೇವಿ ಬಳಿ ಸಂಜು ಹೇಳಿಕೊಂಡಿದ್ದಾನೆ. ‘ಅನುಗೆ ಯಾರಾದರೂ ವೈರಿಗಳು ಇದ್ದಾರಾ? ನದಿ ಸಮೀಪ ಆಕೆ ಕಾಲು ಜಾರಿ ಬಿದ್ದಿಲ್ಲ. ಆಕೆಯನ್ನು ಯಾರೋ ಬೀಳಿಸಿದ್ದು. ಬಲೆ ಹಿಡಿದು ನಿಂತಿದ್ದ ವ್ಯಕ್ತಿ ಅನು ಮನೆಯ ಬಳಿಯೂ ನೋಡಿದೆ. ಇದ್ಯಾಕೋ ದೊಡ್ಡ ಅಪಾಯದ ಮುನ್ಸೂಚನೆ ಎನಿಸುತ್ತಿದೆ’ ಎಂದು ಸಂಜು ಎಲ್ಲವನ್ನೂ ವಿವರಿಸಿದ್ದಾನೆ.
ಶಾರದಾ ದೇವಿಗೂ ಇದು ನಿಜ ಎನಿಸಿದೆ. ‘ಅನುಗೆ ಶತ್ರುಗಳು ಇರಲಿಲ್ಲ. ಆದರೆ, ಆರ್ಯನಿಗೆ ಅನೇಕ ಶತ್ರುಗಳು ಇದ್ದರು. ನೀನು ಚಿಂತೆ ಮಾಡಬೇಡ. ಈ ವಿಚಾರವನ್ನು ನಾನು ನೋಡಿಕೊಳ್ತೀನಿ’ ಎಂದಿದ್ದಾಳೆ ಅವಳು. ಈ ಸಂಭಾಷಣೆ ನಡೆದ ಬಳಿಕ ಆಸ್ಪತ್ರೆಗೆ ಹೊರಟಿದ್ದಾನೆ ಸಂಜು. ಅದಕ್ಕೂ ಮೊದಲು ಶಾರದಾ ದೇವಿ ಕಾಲಿಗೆ ನಮಸ್ಕರಿಸಿದ್ದಾನೆ. ಆರ್ಯವರ್ಧನ್ ಕೂಡ ಇದೇ ರೀತಿ ಮಾಡುತ್ತಿದ್ದ. ಹೀಗಾಗಿ, ಆತನಲ್ಲಿ ಆರ್ಯವರ್ಧನ್ ಛಾಯೆ ಎಲ್ಲರಿಗೂ ಎದ್ದು ಕಾಣುತ್ತಿದೆ.
ಶ್ರೀಲಕ್ಷ್ಮಿ ಎಚ್.
Published On - 8:18 am, Sat, 15 October 22