ಫಿನಾಲೆ ಸಮೀಪಿಸಿದಾಗ ಎಡವಿದ ತ್ರಿವಿಕ್ರಂ: ಬಾಯಿಂದ ಬಂತು ಆಡಬಾರದ ಮಾತು; ಕ್ಷಮೆ ಕೇಳಿದ ಸ್ಪರ್ಧಿ
ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರತಿಕ್ರಿಯೆ ಬೇರೆ ಬೇರೆ ರೀತಿ ನಡೆಯುತ್ತದೆ. ಈ ವಾರ ‘ಟಿಕೆಟ್ ಟು ಫಿನಾಲೆ’ ಮತ್ತು ‘ಟಿಕೆಟ್ ಹೋಮ್’ ಎಂದು ವಿಂಗಡಿಸಿ ಟಾರ್ಗೆಟ್ ನೀಡಲಾಗಿದೆ. ತ್ರಿವಿಕ್ರಂ ಅವರಿಗೆ ಫಿನಾಲೆ ಟಿಕೆಟ್ ತಪ್ಪಿದೆ. ಅವರು ಸಂಯಮ ಕಳೆದುಕೊಂಡು ಮಂಜು ವಿರುದ್ಧ ಕೋಪ ಹೊರಹಾಕಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ನಲ್ಲಿ ಇನ್ನು 20ಕ್ಕೂ ಕಡಿಮೆ ದಿನಗಳು ಉಳಿದಿವೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಯಾವ ಸ್ಪರ್ಧಿ ಗೆಲ್ಲುತ್ತಾರೆ, ಯಾವ ಸ್ಪರ್ಧಿ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಸಂದರ್ಭದಲ್ಲಿ ತುಂಬಾನೇ ಎಚ್ಚರಿಕೆ ವಹಿಸಬೇಕು. ಮಾತುಗಳನ್ನು ಆಡುವಾಗ ಎಚ್ಚರಿಕೆಯಿಂದ ಇರಬೇಕು. ಕೊಂಚ ಎಚ್ಚರಿಕೆ ತಪ್ಪಿದರೂ ಸಾಕಷ್ಟು ನಷ್ಟ ಎದುರಿಸಬೇಕಾಗುತ್ತದೆ. ಈಗ ತ್ರಿವಿಕ್ರಂ ಅವರಿಗೂ ಅದೇ ರೀತಿ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಸಂಯಮ ಕಳೆದುಕೊಂಡ ಅವರು ಹದ್ದುಮೀರಿ ನಡೆದುಕೊಂಡಿದ್ದಾರೆ.
ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆದಿದೆ. ಯಾರು ಉತ್ತಮ, ಯಾರು ಉತ್ತಮ ಅಲ್ಲ ಎನ್ನುವ ಚರ್ಚೆ ಬಂತು. ಆಗ ತ್ರಿವಿಕ್ರಂ ಹಾಗೂ ಮಂಜು ಪರಸ್ಪರ ಮಾತುಕತೆ ನಡೆಸಿದರು. ಅಂತಿಮವಾಗಿ ತ್ರಿವಿಕ್ರಂ ಅವರು ಆಟದಿಂದ ಹೊರಗುಳಿಯುವುದು ಎಂದಾಯಿತು. ಅವರು ನಾಮಿನೇಟ್ ಆಗಿದ್ದು ಮಾತ್ರವಲ್ಲ, ಫಿನಾಲೆ ಟಿಕೆಟ್ ಪಡೆಯಲು ವಂಚಿತರಾದರು. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಮಂಜು ಜೊತೆ ಮಾತನಾಡುವಾಗ ಹದ್ದುಮೀರಿ ನಡೆದುಕೊಂಡಿದ್ದಾರೆ.
ತ್ರಿವಿಕ್ರಂ ಅವರು ಮಂಜುಗೆ ಏಕವಚನ ಬಳಕೆ ಮಾಡಿದ್ದಾರೆ. ‘ಹೋಗಲೋ, ಹೋಗಲೇ’ ಎಂದೆಲ್ಲ ಕರೆದಿದ್ದಾರೆ. ಇದು ಮಂಜುಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಮತ್ತೆ ಏನನ್ನೂ ಮಾತನಾಡಲು ಹೋಗಿಲ್ಲ. ಈ ವಾದ ಮುಗಿದ ಬಳಿಕ ಮಂಜಣ್ಣ ಎಂದು ತ್ರಿವಿಕ್ರಂ ಕರೆಯಲು ಹೋದರು. ಇದಕ್ಕೆ ಮಂಜು ಪ್ರತಿಕ್ರಿಯಿಸಿದರು. ‘ಮಂಜಣ್ಣ ಎನ್ನಬೇಡ. ಹೋಗೋ ಬಾರೋ ಎಂದೇ ಕರಿ. ಒಮ್ಮೆ ಅದನ್ನು ಕೇಳಿದ ಮೇಲೆ ಇದನ್ನು ಕೇಳಿಸಿಕೊಳ್ಳೋಕೆ ಆಗಲ್ಲ’ ಎಂದರು. ಆಗ ತ್ರಿವಿಕ್ರಂ ಅವರು ‘ಎಷ್ಟೊತ್ತಿಗೆ ತೆಗೆಯಬೇಕೋ ಮಂಜು’ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ಆಟದಲ್ಲಿ ಎಷ್ಟೇ ಕಷ್ಟಪಟ್ಟರೂ ಈ ಸ್ಪರ್ಧಿಗಳಿಗೆ ಕಾಣುತ್ತಿದೆ ಮನೆ ದಾರಿ
ಆ ಬಳಿಕ ತ್ರಿವಿಕ್ರಂ ಅವರಿಗೆ ತಪ್ಪಿನ ಅರಿವಾಗಿದೆ. ಅವರು ನೇರವಾಗಿ ಹೋಗಿ ಮಂಜು ಬಳಿ ಕ್ಷಮೆ ಕೇಳಿದರು. ‘ನನ್ನ ತಂದೆ ಹೆಸರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಕ್ಷಮೆ ಇರಲಿ’ ಎಂದರು ತ್ರಿವಿಕ್ರಂ. ಫಿನಾಲೆ ಸಮೀಪಿಸಿದಾಗ ತ್ರಿವಿಕ್ರಂ ಅವರು ಈ ರೀತಿ ಎಡವಿದ್ದು ಸರಿ ಅಲ್ಲ ಎಂಬ ಮಾತು ಅನೇಕ ಕಡೆಗಳಲ್ಲಿ ಕೇಳಿ ಬಂದಿದೆ. ಈ ವಾರ ಅವರು ನಾಮಿನೇಟ್ ಕೂಡ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆಯಲ್ಲಿ ಇರಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.