Weekend With Ramesh: 15 ವರ್ಷದ ಹಿಂದೆಯೇ ತಮ್ಮ ಸಾವಿನ ಬಗ್ಗೆ ಹೇಳಿದ್ದರು ಅಬ್ದುಲ್ ಕಲಾಂ: ಗುರುರಾಜ ಕರಜಗಿ ನೆನಪು
APJ Abdul Kalam: ವೀಕೆಂಡ್ ವಿತ್ ರಮೇಶ್ಗೆ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಕ್ಷೇತ್ರದ ಸಾಧಕ ಗುರುರಾಜ ಕರಜಗಿಯವರು ಎಪಿಜೆ ಅಬ್ದುಲ್ ಕಲಾಂ ಅವರೊಟ್ಟಿಗಿನ ಒಡನಾಟದ ಬಗ್ಗೆ ನೆನಪು ಮಾಡಿಕೊಂಡು, ಕಲಾಮರು ತಮ್ಮ ಸಾವಿನ ಬಗ್ಗೆ ಹೇಳಿದ್ದ ಅಪರೂಪದ ಸಂಗತಿಯನ್ನು ಬಹಿರಂಗಪಡಿಸಿದರು.
ವೀಕೆಂಡ್ ವಿತ್ ರಮೇಶ್ನ (Weekend With Ramesh) ಈ ವಾರದ ಅತಿಥಿಯಾಗಿ ಆಗಮಿಸಿದ್ದ ಉಪನ್ಯಾಸಕ, ಶಿಕ್ಷಕರ ಶಿಕ್ಷರ, ಅಂಕಣಕಾರ, ಶೈಕ್ಷಣಿಕ ಕ್ಷೇತ್ರದ ಸಾಧಕ ಗುರುರಾಜ ಕರಜಗಿ ಅವರು ತಮ್ಮ ಜೀವನದ ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. ಜೀವನದಲ್ಲಿ ಈವರೆಗೆ ತಮಗೆ ಸಿಕ್ಕ ಅದ್ಭುತವಾದ ಗುರುಗಳನ್ನು ಸ್ಮರಿಸಿಕೊಂಡು ಅವರಿಗೆಲ್ಲ ಮತ್ತೊಮ್ಮೆ ನಮಿಸಿದರು. ಮಾತಿನ ಮಧ್ಯೆ, ಅಬ್ದುಲ್ ಕಲಾಂ ಅವರೊಟ್ಟಿಗೆ ಕಳೆದ ಅದ್ಭುತ ಕ್ಷಣಗಳನ್ನು ನೆನಪು ಮಾಡಿಕೊಂಡ ಕರಜಗಿ, ಕಲಾಂರು ಹದಿನೈದು ವರ್ಷಗಳ ಹಿಂದೆಯೇ ತಮ್ಮ ಸಾವಿನ ಕುರಿತಾಗಿ ಆಡಿದ್ದ ಮಾತುಗಳನ್ನು ನೆನಪು ಮಾಡಿಕೊಂಡರು.
ವೈಸ್ ಚಾನ್ಸಲರ್ ಆಗಿದ್ದ ಗೆಳೆಯರೊಬ್ಬರ ಒತ್ತಾಯಕ್ಕೆ ಉಪನ್ಯಾಸ ನೀಡಲು ಹೋದಾಗ ಅವರು ಅಬ್ದುಲ್ ಕಲಾಂ ಅವರ ಬಳಿ ಗುರುರಾಜರನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಅಬ್ದುಲ್ ಕಲಾಂ ಅವರು ಅಲ್ಲಿ ವಿಶ್ರಾಂತ ಫ್ರೊಫೆಸರ್ ಆಗಿದ್ದರು. ಹದಿನೈದು ದಿನಕ್ಕೊಮ್ಮೆ ಉನ್ಯಾಸಕ್ಕೆ ಹೋದಾಗೆಲ್ಲ ಕಲಾಂರನ್ನು ಭೇಟಿಯಾಗುತ್ತಿದ್ದರಂತೆ ಗುರುರಾಜರು. ಕಲಾಂರು ತಮ್ಮ ಡಬ್ಬಿಯಲ್ಲಿ ಇಟ್ಟುಕೊಂಡಿರುತ್ತಿದ್ದ ಹುರಿಗಡಲೆಯನ್ನು ಗುರುರಾಜರಿಗೆ ಹಾಗೂ ಅವರ ವೈಸ್ ಚಾನ್ಸಲರ್ ಗೆಳೆಯರಿಗೆ ನೀಡಿ ಹಲವು ವಿಷಯಗಳನ್ನು ಮಾತನಾಡುತ್ತಿದ್ದರಂತೆ. ”ಆಗಿನ್ನೂ ಅವರು ರಾಷ್ಟ್ರಪತಿ ಆಗಿರಲಿಲ್ಲ. ಕೆಲವೇ ವರ್ಷದಲ್ಲಿ ತಾನು ರಾಷ್ಟ್ರಪತಿ ಆಗಲಿದ್ದೇನೆ ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಆದರೆ ಹೋದಾಗಲೆಲ್ಲ ಅದ್ಭುತವಾದ ಸುದ್ದಿಗಳನ್ನು ಕಲಾಮರು ಹೇಳುತ್ತಿದ್ದರು. ಅವರೊಟ್ಟಿಗೆ ಕಳೆದ ಪ್ರತಿಕ್ಷಣವೂ ನನ್ನ ಜೀವನದ ಮಹತ್ವದ ಕ್ಷಣಗಳು” ಎಂದರು ಗುರುರಾಜರು.
”ಒಮ್ಮೆ ಹೀಗೆ ಮಾತನಾಡುತ್ತಾ, ನೀವು ದೇವಸ್ಥಾನಕ್ಕೆ ಹೋಗುತ್ತೀರ? ಎಂದು ಕೇಳಿದರು. ಹೌದು ಎಂದೆ. ಏಕೆ ಎಂದರು, ಖುಷಿಯಾಗುತ್ತೆ ಎಂದೆ. ಏನು ಕೇಳಿಕೊಳ್ಳುತ್ತೀರಿ ಅಲ್ಲಿ ಎಂದು ಕೇಳಿದರು. ದೇವರಲ್ಲಿ ಏನೂ ಕೇಳಬಾರದಂತೆ, ಬೇರೊಬ್ಬರ ಬಳಿ ಬೇಡುವ ಸ್ಥಿತಿ ತರಬೇಡ, ಸುಖವಾದ ಸಾವು ಕೊಡು ಎಂದಷ್ಟೆ ಕೇಳಿಕೊಳ್ಳಬೇಕಂತೆ ಹಾಗಾಗಿ ನಾನು ಅದನ್ನೇ ಕೇಳಿಕೊಳ್ಳುತ್ತೇನೆ ಎಂದೆ. ಕೂಡಲೇ ತಮ್ಮ ಡೈರಿ ತೆಗೆದು ಅದನ್ನು ನೋಟ್ ಮಾಡಿಕೊಂಡರು. ಬಳಿಕ ಟೇಬಲ್ ಬಡಿಯುತ್ತಾ, ನಾನು ಪಾಠ ಮಾಡುತ್ತಾ ಸಾಯಬೇಕು ಎಂಬುದು ನನ್ನ ಆಸೆ ಎಂದರು” ಎಂದು 23 ವರ್ಷಗಳ ಹಿಂದಿನ ಮಾತು ನೆನಪು ಮಾಡಿಕೊಂಡರು ಕರಜಗಿ.
ಇದನ್ನೂ ಓದಿ:Weekend With Ramesh: ‘ಕರುಣಾಳು ಬಾ ಬೆಳಕೆ’ ಕತೆಗಾರನ ಜೀವನದ ಮೇಲೆ ಬೆಳಕು
”ಅದಾದ ಹದಿನೈದು ವರ್ಷಗಳ ಬಳಿಕ ಶಿಲಾಂಗ್ನಲ್ಲಿ ಪಾಠ ಮಾಡುತ್ತನೇ ನಿಧನ ಹೊಂದಿದರು. ಅವರು ಏನು ಬಯಸಿದ್ದರೊ ಅದೇ ಅವರಿಗೆ ದೊರಕಿತು. ಅವರೊಬ್ಬ ಅದ್ಭುತವಾದ ವ್ಯಕ್ತಿ. ಸಾಯುವವರೆಗೆ ಅದೇ ಮಗುವಿನ ಮುಗ್ಧತೆಯನ್ನು ಅವರು ಕಾಪಾಡಿಕೊಂಡಿದ್ದರು. ಅವರು ನಿಧನ ಹೊಂದುವ ಒಂದೂವರೆ ತಿಂಗಳ ಮೊದಲು ಅವರ ಮನೆಗೆ ಹೋಗಿ ಒಂದೂವರೆ ತಾಸು ಕುಳಿತು ಮಾತನಾಡಿದ್ದೆ. ನನ್ನನ್ನು ಸೇಂಟ್ ಇನ್ ಎ ಸೂಟ್ (ಸೂಟ್ ಧರಿಸಿದ ಸಂತ) ಎಂದು ಕಲಾಮರು ಹೇಳುತ್ತಿದ್ದರು. ನನ್ನ ಜೀವನದಲ್ಲಿ ನಾನು ಭೇಟಿಯಾದ ಅದ್ಭುತವಾದ ವ್ಯಕ್ತಿಗಳಲ್ಲಿ ಕಲಾಮ್ ಮೊದಲಿಗರು” ಎಂದರು ಕರಜಗಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ