ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ಮಂಡ್ಯ ರಮೇಶ್ಗೆ ಮೊದಲು ಸಿಕ್ಕ ಸಂಭಾವನೆ ಎಷ್ಟು? ಶಿವಣ್ಣ ಹೇಳಿದ್ದೇನು?
Weekend With Ramesh: ರಂಗಭೂಮಿಯನ್ನು ಉಸಿರಾಗಿಸಿಕೊಂಡಿದ್ದ ಮಂಡ್ಯ ರಮೇಶ್ ಚಿತ್ರರಂಗದ ಕಡೆಗೆ ಬಂದಿದ್ದು ಹೇಗೆ? ಮೊದಲ ಸಿನಿಮಾ ಜನುಮದ ಜೋಡಿಗೆ ಸಿಕ್ಕ ಸಂಭಾವನೆ ಎಷ್ಟು? ಮಂಡ್ಯ ರಮೇಶ್ ಬಗ್ಗೆ ಶಿವಣ್ಣ ಏನು ಹೇಳಿದರು.
ವೀಕೆಂಡ್ ವಿತ್ ರಮೇಶ್ನ (Weekend With Ramesh) ಭಾನುವಾರದ ಎಪಿಸೋಡ್ನಲ್ಲಿ ಅತಿಥಿಯಾಗಿ ಆಗಮಿಸಿದ್ದ ರಂಗಕರ್ಮಿ, ಸಿನಿಮಾ ನಟ ಮಂಡ್ಯ ರಮೇಶ್ ಸಾಧಕರ ಕುರ್ಚಿಯಲ್ಲಿ ಕೂತು ತಮ್ಮದೇ ಜೀವನದ ಹಲವು ಘಟನೆಗಳನ್ನು ಪುನಃ ನೆನಪು ಮಾಡಿಕೊಂಡರು. ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಮಂಡ್ಯ ರಮೇಶ್ (Mandya Ramesh) ಚಿತ್ರರಂಗಕ್ಕೆ ಬಂದಿದ್ದು ಆ ನಂತರ ಜನಪ್ರಿಯ ಪೋಷಕ ನಟನಾಗಿ ಬೆಳೆದಿದ್ದು ಬಹಳ ಆಕಸ್ಮಿಕ. ಆ ಕುತೂಹಲಕಾರಿ ಸಂಗತಿಯನ್ನು ಮಂಡ್ಯ ರಮೇಶ್ ವೀಕೆಂಡ್ ವಿತ್ ರಮೇಶ್ನಲ್ಲಿ ಹಂಚಿಕೊಂಡರು.
ನೀನಾಸಂನಲ್ಲಿ ರಂಗತರಬೇತಿ ಮುಗಿಸಿ ಮೈಸೂರು ರಂಗಾಯಣದ ಮೊದಲ ಬ್ಯಾಚ್ಗೆ ಆಯ್ಕೆ ಆಗಿದ್ದರು ಮಂಡ್ಯ ರಮೇಶ್. ಆ ಸಮಯದಲ್ಲಿ ರಂಗಾಯಣದ ತಂಡವು ವಿವಿಧೆಡೆ ಕ್ಯಾಂಪ್ಗಳನ್ನು ಮಾಡಿ ನಾಟಕ, ಜನಪದ ಕಲೆಗಳನ್ನು ಪ್ರದರ್ಶಿಸುತ್ತಿತ್ತು. ಅದೇ ತಂಡದ ಭಾಗವಾಗಿದ್ದರು ಮಂಡ್ಯ ರಮೇಶ್. ಹೀಗೆಯೇ ಒಮ್ಮೆ ಬೆಂಗಳೂರಿನಲ್ಲಿ ಕ್ಯಾಂಪ್ ಮಾಡಿದ್ದಾಗ, ಎಚ್ಎನ್ ಕಲಾಕ್ಷೇತ್ರದಲ್ಲಿ ಮಂಡ್ಯ ರಮೇಶ್ ಹಾಗೂ ಇತರರು ಕಂಸಾಳೆಯ ವೇಷ ಧರಿಸಿ ಕಂಸಾಳೆ ಹಿಡಿದುಕೊಂಡು ನೃತ್ಯ ತರಬೇತಿ ಮಾಡುತ್ತಿದ್ದರಂತೆ ಅದೇ ಸಮಯದಲ್ಲಿ ‘ಜನುಮದ ಜೋಡಿ’ ಸಿನಿಮಾ ಮಾಡುವ ತಯಾರಿಯಲ್ಲಿದ್ದ ನಾಗಾಭರಣ ಅವರು ಹೊರಗೆ ಹೋಗುತ್ತಾ ಕಿಟಕಿಯಲ್ಲಿ ಇವರ ನೃತ್ಯ ನೋಡಿದ್ದಾರೆ. ನೋಡಿ ಸಿನಿಮಾದಲ್ಲಿ ನಟಿಸುವ ಆಫರ್ ನೀಡಿದ್ದಾರೆ. ನಾಗಾಭರಣ ಪರವಾಗಿ ಪ್ರಕಾಶ್ ರಾಜ್ ಮೆಹು ಬಂದು ಮಂಡ್ಯ ರಮೇಶ್ ಹಾಗೂ ಇನ್ನೊಂದಿಬ್ಬರನ್ನು ತೋರಿಸಿ ಇವರೆಲ್ಲ ಸಿನಿಮಾಕ್ಕೆ ಬೇಕಂತೆ ಎಂದಿದ್ದಾರೆ.
‘ಜನುಮದ ಜೋಡಿ’ ಸಿನಿಮಾ ಅವಕಾಶ ಬಂದಾಗ ಮಂಡ್ಯ ರಮೇಶ್ ತನ್ನ ಅಕ್ಕನ ಬಳಿ ಸಲಹೆ ಕೇಳಿದ್ದಾರೆ, ಅವರು ಹರ್ಷದ ಕೂಳಿನ ಆಸೆಗೆ ವರ್ಷದ ಕೂಳು ಕಳೆದುಕೊಳ್ಳಬೇಡ ನಾಟಕದಲ್ಲಿ ಮುಂದುವರಿ ಎಂದುಬಿಟ್ಟಿದ್ದಾರೆ. ನಾಟಕದಲ್ಲಿ ಎರಡು ಸಾವಿರ ಸಂಬಳ ಬರ್ತಿದೆ ಅಲ್ಲಿ ಹೋದರೆ ಎಷ್ಟು ಕೊಡುತ್ತಾರೋ ಏನೋ ಎಂದುಕೊಂಡು ಎಂದು ಮಂಡ್ಯ ರಮೇಶ್ ಹೋಗದೆ ಸುಮ್ಮನಾಗಿದ್ದಾರೆ. ಅದಾದ ಬಳಿಕ ಕೆಲವೇ ದಿನಗಳಲ್ಲಿ ನಾಗಾಭರಣ ಸಿಕ್ಕಿ ಮಂಡ್ಯ ರಮೇಶ್ಗೆ ಜೋರು ಮಾಡಿ ಏಕೆ ಬರಲಿಲ್ಲ ಎಂದು ಕೇಳಿದ್ದಾರೆ. ಆಗ ಮಂಡ್ಯ ರಮೇಶ್ ಸಂಬಳದ ಮಾತನಾಡಿದ್ದಾರೆ. ಈಗ ಎಷ್ಟು ಕೊಡುತ್ತಿದ್ದಾರೆ ಎಂದು ನಾಗಾಭರಣ ಕೇಳಿದ್ದಕ್ಕೆ ನನಗೆ ಎರಡು ಸಾವಿರ ಕೊಡ್ತಿದ್ದಾರೆ ಎಂದಿದ್ದಾರೆ. ಸರಿ ನಾಲ್ಕು ಸಾವಿರ ಕೊಡ್ತೀನಿ ಬರ್ತೀಯಾ ಎಂದು ಕೇಳಿದರಂತೆ ನಾಗಾಭರಣ, ಕೂಡಲೇ ಒಪ್ಪಿಕೊಂಡಿದ್ದಾರೆ ಮಂಡ್ಯ ರಮೇಶ್.
”ಆಗಷ್ಟೆ ನಮಗೆ ಮಗಳು ದಿಶಾ ಹುಟ್ಟಿದ್ದಳು. ಎರಡು ಸಾವಿರ ಜೀವನಕ್ಕೆ ಸಾಕಾಗುತ್ತದೆ ಉಳಿದ ಎರಡು ಸಾವಿರನ್ನು ಬ್ಯಾಂಕ್ನಲ್ಲಿ ಹಾಕಿದರೆ ಇಪ್ಪತ್ತು ವರ್ಷ ಆದ ಮೇಲೆ ಸ್ವಲ್ಪ ದುಡ್ಡಾಗುತ್ತೆ ಅದನ್ನು ಮಗಳ ಮದುವೆಗೆ ಬಳಸಿಕೊಳ್ಳಬಹುದು ಎಂಬ ಆಸೆಯಿಂದ ಬರುತ್ತೇನೆ ಎಂದು ಒಪ್ಪಿಕೊಂಡೆ. ಅದಾದ ಬಳಿಕ ಆ ಸಿನಿಮಾದ ನಿರ್ಮಾಪಕರು ರಾಜ್ಕುಮಾರ್ ಎಂಬುದು ಗೊತ್ತಾಯಿತು. ಅವರನ್ನು ನೋಡುವ ಆಸೆಯಿಂದ ಆ ಸಿನಿಮಾ ಮಾಡಲೇ ಬೇಕು ಎಂದು ನಿಶ್ಚಯ ಮಾಡಿದೆ. ಶೂಟಿಂಗ್ಗೆ ಹೋದಾಗಲೆಲ್ಲ ರಾಜ್ಕುಮಾರ್ ಬಂದಿದ್ದಾರಾ ಎಂದು ಹುಡುಕಾಡುತ್ತಿದ್ದೆ” ಎಂದು ಮಂಡ್ಯ ರಮೇಶ್ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೆನಪು ಮಾಡಿಕೊಂಡರು. ಮೊದಲ ಸಿನಿಮಾದಲ್ಲಿ ಶಿವಣ್ಣನಿಗೆ ಗೆಳೆಯನ ಪಾತ್ರ ಮಾಡಿ, ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರಿಗೂ ಪವರ್ ಸಿನಿಮಾದಲ್ಲಿ ಗೆಳೆಯನ ಪಾತ್ರದಲ್ಲಿ ನಟಿಸಿದೆ ಎಂದರು ಮಂಡ್ಯ ರಮೇಶ್.
ಶೋನಲ್ಲಿ ಮಂಡ್ಯ ರಮೇಶ್ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ಶಿವರಾಜ್ ಕುಮಾರ್, ಅವರೊಟ್ಟಿಗೆ ನಟಿಸಿದ ನೆನಪು ಹಂಚಿಕೊಂಡರು. ”ಕಣ್ಣುಗಳಲ್ಲೇ ಅವರು ಭಾವನೆಗಳನ್ನು ವ್ಯಕ್ತಪಡಿಸಲು ಯತ್ನಿಸುತ್ತಿದ್ದು, ನಟನೆಯಲ್ಲಿ ಮುಖಭಾವವನ್ನು ಹೆಚ್ಚಾಗಿ ಬಳಸುತ್ತಿದ್ದಿದ್ದು ನನಗೆ ಚೆನ್ನಾಗಿ ನೆನಪಿದೆ. ನಾನು ಡ್ಯಾನ್ಸರ್ ಆಗಿದ್ದರೂ ಕೋಲುಮಂಡೆ ಜಂಗಮದೇವ ಹಾಡಿನ ಕಂಸಾಳೆ ಕುಣಿತ ನನಗೆ ಬಹಳ ಕಷ್ಟವಾಗಿತ್ತು, ಆದರೆ ಆ ಸಂಸ್ಕೃತಿಯ ಪರಿಚಯ ಇದ್ದ ನೀವೆಲ್ಲ ಚೆನ್ನಾಗಿ ಡ್ಯಾನ್ಸ್ ಮಾಡಿದಿರಿ ನನಗೂ ಸರಿಯಾಗಿ ಕುಣಿಯಲು ಸಹಾಯ ಮಾಡಿದಿರಿ” ಎಂದು ನೆನಪು ಮಾಡಿಕೊಂಡರು.
ಶಿವಣ್ಣ ಅವರ ಮಾತಿಗೆ ಭಾವುಕರಾದ ಮಂಡ್ಯ ರಮೇಶ್, ”ನನ್ನಂಥಹಾ ನೂರಾರು, ಸಾವಿರಾರು ಪೋಷಕ ನಟರು ಅವರೊಟ್ಟಿಗೆ ನಟಿಸಿದ್ದಾರೆ. ನನ್ನನ್ನು ಅವರು ಲೆಕ್ಕಕ್ಕೆ ಹಿಡಿಯಬೇಕಿಲ್ಲ. ಆದರೆ ನನಗಾಗಿ ಎರಡು ಮಾತು ಆಡಬೇಕು ಎಂದು ಶಿವಣ್ಣ ಅಂದುಕೊಂಡರಲ್ಲ ಅದು ಅವರ ದೊಡ್ಡತನ ತೋರುತ್ತದೆ” ಎಂದು ನಮಿಸಿದರು ಮಂಡ್ಯ ರಮೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ