ಇನ್ನೆರಡೇ ವಾರದಲ್ಲಿ ‘ಜನ ನಾಯಗನ್’ ರಿಲೀಸ್; ವಿಜಯ್ ಸಿಎಂ ಆಗ್ತಿದ್ದಂತೆ ಅಪ್ಡೇಟ್ ಕೊಟ್ಟ ವೆಂಕಟ್ ಪ್ರಭು
ದಳಪತಿ ವಿಜಯ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಅವರ ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ವೆಂಕಟ್ ಪ್ರಭು ಪ್ರಕಾರ, ಸಿನಿಮಾ ಸೆನ್ಸಾರ್ ಅಂತಿಮ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಎರಡೇ ವಾರದಲ್ಲಿ ತೆರೆ ಕಾಣಲಿದೆ. ಸಿಎಂ ವಿಜಯ್ ಅವರ ಮೊದಲ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.

ದಳಪತಿ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ತೆರೆಗೆ ಬರಲು ಕೌಂಟ್ಡೌನ್ ಶುರುವಾಗಿದೆ. ಚಿತ್ರದ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿತ್ತು. ಆದರೆ ಈಗ ಸಿನಿಮಾದ ನಿರ್ಮಾಪಕ ಕೆ ವೆಂಕಟ್ ಪ್ರಭು ಬಿಡುಗಡೆಯ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ.
ಸೆನ್ಸಾರ್ ಮಂಡಳಿ ಜೊತೆ ಮಾತುಕತೆ
ಸಿನಿಮಾದ ವಿಳಂಬದ ಬಗ್ಗೆ ಮಾತನಾಡಿದ ವೆಂಕಟ್ ಪ್ರಭು, ‘ಚಿತ್ರವು ಸೆನ್ಸಾರ್ ಮಂಡಳಿಯಲ್ಲಿ ಕೊನೆಯ ಹಂತದ ಪ್ರಕ್ರಿಯೆಯಲ್ಲಿದೆ. ನಾವು ನಿರಂತರವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೇವಲ ಎರಡೇ ವಾರಗಳಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ’ ಎಂದು ಖಚಿತಪಡಿಸಿದ್ದಾರೆ. ಈ ಸುದ್ದಿಯು ಕಳೆದ ಕೆಲವು ದಿನಗಳಿಂದ ಸಿನಿಮಾ ರಿಲೀಸ್ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದೆ. ಟೈಟಲ್ ಕಾರ್ಡ್ ಅಲ್ಲಿ ‘ಸಿಎಂ ದಳಪತಿ ವಿಜಯ್’ ಎಂದು ಇರಲಿದೆಯಂತೆ.
இன்னும் 2 வாரத்தில் ஜனநாயகன் ரிலீஸ் முதல் அமைச்சர் டைட்டில கார்டடோட 🧨🎇🎆🇪🇸 pic.twitter.com/d0gOEGmkJE
— Anshitha🫶💖🍉 (@Anshithaprincey) May 10, 2026
ಇದೇ ಸಂದರ್ಭದಲ್ಲಿ ವಿಜಯ್ ಅವರ ರಾಜಕೀಯ ಜೀವನದ ಬಗ್ಗೆಯೂ ವೆಂಕಟ್ ಪ್ರಭು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ‘ತಮಿಳುನಾಡಿನಲ್ಲಿ ಹೊಸ ನಾಯಕತ್ವದೊಂದಿಗೆ ಹೊಸ ಯುಗ ಆರಂಭವಾಗಿದೆ. ನಾನು ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲೆ. ಅವರ ಶ್ರದ್ಧೆ ಮತ್ತು ಜನಪರ ಕಾಳಜಿಯಿಂದಾಗಿ ತಮಿಳುನಾಡು ಇನ್ನು ಮುಂದೆ ಉತ್ತಮವಾಗಲಿದೆ ಎಂಬ ಭರವಸೆ ನನಗಿದೆ. ಅವರು ಬೆಳ್ಳಿತೆರೆಯ ನಾಯಕನಾಗಿ ಮಾತ್ರವಲ್ಲದೆ, ಈಗ ಜನರ ನಿಜವಾದ ಜನ ನಾಯಕ ಆಗಿದ್ದಾರೆ’ ಎಂದು ಪ್ರಭು ತಿಳಿಸಿದ್ದಾರೆ. ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಗಿದ್ದು, ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಇದನ್ನೂ ಓದಿ: ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
ವಿಜಯ್ ಸಿಎಂ ಆದ ಮೇಲೆ ತೆರೆಗೆ ಬರುತ್ತಿರುವ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ. ಸಿನಿಮಾದಲ್ಲಿರುವ ರಾಜಕೀಯ ಸಂಭಾಷಣೆಗಳು ಮತ್ತು ವಿಜಯ್ ಅವರ ಹೊಸ ಅವತಾರವನ್ನು ನೋಡಲು ಇಡೀ ದಕ್ಷಿಣ ಭಾರತವೇ ಕಾಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




