The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಗಳೂರಲ್ಲಿ ಮೊದಲ ದಿನ 150 ಶೋ ಮೀಸಲು; ಟಿಕೆಟ್ ಬುಕಿಂಗ್ ನೀರಸ
The Kerala Story Advance Booking: ಟ್ರೇಲರ್ ಮೂಲಕ ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಟಿಕೆಟ್ ಬುಕಿಂಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಮೊದಲ ದಿನ ಹೆಚ್ಚು ಕಲೆಕ್ಷನ್ ಆಗುವುದು ಅನುಮಾನ.
ಭಾರಿ ಚರ್ಚೆ ಹುಟ್ಟುಹಾಕಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿ ಉಳಿದುಕೊಂಡಿವೆ. ಮೇ 5ರಂದು ದೇಶಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಬುಕಿಂಗ್ ಓಪನ್ ಆಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಬರೋಬ್ಬರಿ 150 ಶೋಗಳು ಮೀಸಲಾಗಿವೆ. ಆದರೆ ಪ್ರೇಕ್ಷಕರು ಟಿಕೆಟ್ ಬುಕ್ ಮಾಡುವಲ್ಲಿ ಹೆಚ್ಚೇನೂ ಆಸಕ್ತಿ ತೋರಿಸುತ್ತಿಲ್ಲ. ಬಹುತೇಕ ಎಲ್ಲ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿ ಮೊದಲ ದಿನ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ (The Kerala Story Box Office Collection) ಆಗುವುದು ಅನುಮಾನ ಎನ್ನಲಾಗುತ್ತಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸುದೀಪ್ತೋ ಸೇನ್ (Sudipto Sen) ಅವರು ನಿರ್ದೇಶನ ಮಾಡಿದ್ದಾರೆ.
ಕೇರಳದಲ್ಲಿ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ, ನಂತರ ಅವರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲಾಗುತ್ತಿದೆ ಎಂಬ ವಿಷಯದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾ ಸಿದ್ಧಗೊಂಡಿದೆ. ಟ್ರೇಲರ್ನಲ್ಲೇ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮಾಹಿತಿ ನಿಜವಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ. ಸಿನಿಮಾದಲ್ಲಿ ತೋರಿಸಿರುವುದು ನಿಜವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯಲು ಪ್ರೇಕ್ಷಕರಲ್ಲಿ ಭಾರಿ ಕೌತುಕ ಸೃಷ್ಟಿ ಆಗಿದೆ.
ಇದನ್ನೂ ಓದಿ: Adah Sharma: ‘ಮೊದಲು ಸಿನಿಮಾ ನೋಡಿ, ಆಮೇಲೆ ಮಾತಾಡಿ’: ‘ದಿ ಕೇರಳ ಸ್ಟೋರಿ’ ವಿವಾದಕ್ಕೆ ಅದಾ ಶರ್ಮಾ ಪ್ರತಿಕ್ರಿಯೆ
ಶುಕ್ರವಾರ (ಮೇ 5) ದೆಹಲಿಯಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ 450ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಮುಂಬೈನಲ್ಲಿ 320ಕ್ಕೂ ಅಧಿಕ ಶೋಗಳು ಮೀಸಲಾಗಿವೆ. ಕೇರಳದ ಕೊಚ್ಚಿಯಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಗೊಂದಲ ಏರ್ಪಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಈ ಚಿತ್ರದ ಬಿಡುಗಡೆ ಬಳಿಕ ಗಲಭೆ ಉಂಟಾಗುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಯಾ ಸರ್ಕಾರಗಳು ಎಚ್ಚರಿಕೆ ವಹಿಸುತ್ತಿವೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿನ ಮಾಹಿತಿ ನಿಜ ಅಂತ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 2022ರಲ್ಲಿ ಬಿಡುಗಡೆ ಆದಾಗ ಮೊದಲ ದಿನ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ನಂತರದ ದಿನಗಳಲ್ಲಿ ಬಾಯಿ ಮಾತಿನ ಪ್ರಚಾರ ಸಿಕ್ಕಿದ್ದರಿಂದ ಆ ಸಿನಿಮಾ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ‘ದಿ ಕೇರಳ ಸ್ಟೋರಿ’ ಕೂಡ ಮುಂದಿನ ದಿನಗಳಲ್ಲಿ ಉತ್ತಮ ಕಮಾಯಿ ಮಾಡುವ ಸಾಧ್ಯತೆ ಇದೆ. ಮೊದಲ ದಿನ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.