ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರ ವಲಯದಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಈ ಚಿತ್ರದ ಹೀರೋ. ಅವರ ಎದುರು ವಿಲನ್ ಆಗಿ ಅಬ್ಬರಿಸೋದು ಕನ್ನಡದ ನಟ ದುನಿಯಾ ವಿಜಯ್. ತೆಲುಗಿನಲ್ಲಿ ದುನಿಯಾ ವಿಜಯ್ ನಟಿಸಿದ ಮೊದಲ ಸಿನಿಮಾ ಇದು. ಆ ಕಾರಣದಿಂದ ಅವರ ಅಭಿಮಾನಿಗಳ ಮನದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ವೀರ ಸಿಂಹ ರೆಡ್ಡಿ’ ಟ್ರೇಲರ್ನಲ್ಲಿ ದುನಿಯಾ ವಿಜಯ್ (Duniya Vijay) ಅವರ ಉಗ್ರಾವತಾರ ಕಾಣಿಸಿದೆ. ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಂದಿನಂತೆ ಖಡಕ್ ಡೈಲಾಗ್ಗಳ ಮೂಲಕ ಬಾಲಯ್ಯ ಘರ್ಜಿಸಿದ್ದಾರೆ.
ಹೀರೋ ಆಗುವುದಕ್ಕೂ ಮುನ್ನ ದುನಿಯಾ ವಿಜಯ್ ಅವರು ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿಯೂ ಅವರು ವಿಲನ್ ರೋಲ್ ಮೂಲಕ ಖಾತೆ ತೆರೆಯುತ್ತಿದ್ದಾರೆ. ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಎದುರು ಅವರು ಮುಖಾಮುಖಿ ಆಗುವ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡು ಧೂಳೆಬ್ಬಿಸುತ್ತಿದೆ.
ಇದನ್ನೂ ಓದಿ: Duniya Vijay: ‘ಭೀಮ’ ಸೆಟ್ಗೆ ಭೇಟಿ ನೀಡಿ ದುನಿಯಾ ವಿಜಯ್ಗೆ ವಿಶ್ ಮಾಡಿದ ಶಿವಣ್ಣ-ಗೀತಾ ದಂಪತಿ
‘ವೀರ ಸಿಂಹ ರೆಡ್ಡಿ’ ಸಿನಿಮಾಗೆ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡಿದ್ದಾರೆ. ಎಸ್. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಪಿ. ರವಿಶಂಕರ್, ವರಲಕ್ಷ್ಮೀ ಶರತ್ಕುಮಾರ್, ಮುರಳಿ ಶರ್ಮಾ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಟ್ರೇಲರ್ನಲ್ಲಿ ಮೇಕಿಂಗ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಶ್ರೀಲೀಲಾ ನಟನೆ; ಯಾವ ಪಾತ್ರ? ಇಲ್ಲಿದೆ ಟ್ವಿಸ್ಟ್..
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಎಷ್ಟು ಕಮಾಯಿ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
2021ರ ಡಿಸೆಂಬರ್ನಲ್ಲಿ ಬಾಲಯ್ಯ ಅವರು ‘ಅಖಂಡ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದರು. 2022ರಲ್ಲಿ ಅವರ ಯಾವ ಚಿತ್ರವೂ ಬಿಡುಗಡೆ ಆಗಲಿಲ್ಲ. ಈಗ ‘ವೀರ ಸಿಂಹ ರೆಡ್ಡಿ’ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾದ ‘ಜೈ ಬಾಲಯ್ಯ..’ ಹಾಡು ಅವರ ಅಭಿಮಾನಿಗಳ ಮನ ಗೆದ್ದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.