ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೆಟ್ರಿಮಾರನ್ಗೆ ಒದಗಿದೆ ಸಂಕಷ್ಟ
ತಮಿಳು ನಿರ್ದೇಶಕ ವೆಟ್ರಿಮಾರನ್ ಅವರ ಇತ್ತೀಚಿನ ವಿಡಿಯೋ ವೈರಲ್ ಆಗಿತ್ತು. ಇದನ್ನು ಮೀಮ್ಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗ ಅವರ ಸಿನಿಮಾ ಯೋಜನೆಗಳು ಸಂಕಷ್ಟಕ್ಕೆ ಸಿಲುಕಿವೆ. 'ವಡಿವಾಸಲ್', 'ವಾಡಾ ಚೆನ್ನೈ 2', 'ಅರಸನ್' ನಂತಹ ಬಹುನಿರೀಕ್ಷಿತ ಚಿತ್ರಗಳು ನಿರ್ಮಾಣ ಹಂತದಲ್ಲಿ ವಿಳಂಬವಾಗಿವೆ ಅಥವಾ ಸ್ಥಗಿತಗೊಂಡಿವೆ.

ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್ ಹೆಸರನ್ನು ಅನೇಕರು ಕೇಳಿರುತ್ತೀರಿ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಆ್ಯಕ್ಷನ್ ವೈರಲ್ ಆಗಿತ್ತು. ಯಾವುದೋ ಸಿನಿಮಾ ಈವೆಂಟ್ನಲ್ಲಿ ಅವರು ಭಾಗಿ ಆಗಿದ್ದರು. ಆರಂಭದಲ್ಲಿ ಸಿಟ್ಟಾಗೋ ಅವರು ನಂತರ ಏಕಾಕಿ ಮುಖಭಾವ ಬದಲಿಸಿಕೊಂಡು ನಗುವಿನಿಂದ ಮಾತನಾಡುವುದನ್ನು ಕಾಣಬಹುದು. ಈ ವಿಡಿಯೋನ ಮೀಮ್ಗಳಿಗೆ ಬಳಕೆ ಮಾಡಲಾಗಿತ್ತು. ಈಗ ಅವರ ಸಿನಿಮಾಗಳಿಗೆ ತೊಂದರೆ ಉಂಟಾಗಿದೆ. ಹಾಗಂತ ಅವರ ಆ್ಯಕ್ಷನ್ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.
ವೆಟ್ರಿಮಾರನ್ ಅವರು 2007ರಲ್ಲಿ ನಿರ್ದೇಶನಕ್ಕೆ ಬಂದರು. ಆ ಬಳಿಕ ಸಾಲು ಸಾಲು ಹಿಟ್ ಸಿನಿಮಾ ನೀಡಿದರು. ‘ವಿಡುದಲೈ ಪಾರ್ಟ್ 1’ ಹಾಗೂ ‘ವಿಡುದಲೈ ಪಾರ್ಟ್ 2’ ಅವರ ನಿರ್ದೇಶನದ ಕೊನೆಯ ಸಿನಿಮಾಗಳು. ಅವರ ಬಳಿ ಇರೋ ಸಿನಿಮಾಗಳೆಲ್ಲ ನಿಂತು ಹೋಗುತ್ತಿವೆ ಎಂದು ಹೇಳಲಾಗುತ್ತಿದೆ.
ಈ ಮೊದಲು ಅವರು ಸೂರ್ಯ ಜೊತೆ ಸಿನಿಮಾ ಮಾಡಬೇಕಿತ್ತು. ಇದಕ್ಕೆ ‘ವಡಿವಾಸಲ್’ ಎಂದು ಟೈಟಲ್ ಇಡಲಾಗಿತ್ತು. ಆದರೆ ಸಿನಿಮಾ ನಿಂತು ಹೋಯಿತು. ಆ ಬಳಿಕ ಅವರು ಧನುಷ್ ಜೊತೆ ‘ವಾಡಾ ಚೆನ್ನೈ 2’ ಮಾಡಬೇಕಿತ್ತು. ಆದರೆ, ಇದು ವಿಳಂಬ ಆಗಿದೆ. ಹೀಗಾಗಿ, ಸಿಂಬು ಜೊತೆ ಸಿನಿಮಾ ಮಾಡಲು ಅವರು ಮುಂದಾದರು.
‘ಅರಸನ್’ ಎಂಬುದು ಈ ಚಿತ್ರದ ಟೈಟಲ್. ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಆಗಲೇ ಚಿತ್ರಕ್ಕೆ ಸಾಕಷ್ಟು ತೊಂದರೆ ಎದುರಾಗಿದೆ ಎನ್ನಲಾಗಿದೆ. ಸಿಂಬು ಹಾಗೂ ನಿರ್ಮಾಣ ಸಂಸ್ಥೆ ಮಧ್ಯೆ ಕಿರಿಕ್ ಆಗಿದೆಯಂತೆ. ಹೀಗಾಗಿ ಅಂದುಕೊಂಡಂತೆ ಸಿನಿಮಾ ಸೆಟ್ಟೇರುತ್ತಿಲ್ಲ. ಸದ್ಯಕ್ಕೆ ಈ ಸಿನಿಮಾ ನಿಲ್ಲಿಸಲಾಗಿದೆಯಂತೆ. ಈ ಚಿತ್ರದ ಕೆಲಸ ಆರಂಭ ಆಗಲು ನಿರ್ಮಾಪಕರೇ ಮನಸ್ಸು ಮಾಡಬೇಕಿದೆ.
ಇದನ್ನೂ ಓದಿ: ಉತ್ತರ ಚೆನ್ನೈನಿಂದ ಮತ್ತೊಂದು ರಕ್ತ ಸಿಕ್ತ ಕತೆ ಹೊತ್ತು ತಂದ ವೆಟ್ರಿಮಾರನ್
ವೆಟ್ರಿಮಾರನ್ ಅವರು ಪ್ರತಿಭಾನ್ವಿತ ನಿರ್ದೇಶಕ. ಅವರ ಬಳಿ ಸಾಕಷ್ಟು ಟ್ಯಾಲೆಂಟ್ ಇದೆ. ಆದರೆ, ಈ ರೀತಿ ಸಿನಿಮಾ ಅರ್ಧಕ್ಕೆ ನಿಲ್ಲುವುದರಿಂದ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಹಿನ್ನಡೆ ಉಂಟಾಗುತ್ತಿದೆ ಎಂದೇ ಹೇಳಬಹುದು. ಅಲ್ಲದೆ, ಸ್ಕ್ರಿಪ್ಟ್ಗಳಿಗೆ ಅವರು ಹಾಕಿದ ಶ್ರಮ ಕೂಡ ಸಾಕಷ್ಟು ವ್ಯರ್ಥವಾಗುತ್ತಿದೆ. ಈ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:08 am, Tue, 25 November 25



