ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಮದುವೆ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜೊತೆಯಾಗಿ ಕೆಲಸಕ್ಕೆ ಮರಳಿದ್ದಾರೆ. ‘ರಣಬಾಲಿ’ ಸಿನಿಮಾದ ಚಿತ್ರೀಕರಣಕ್ಕೆ ಬಂದ ಅವರಿಗೆ ಚಿತ್ರತಂಡದವರಿಂದ ಆತ್ಮೀಯ ಸ್ವಾಗತ ಸಿಕ್ಕಿದೆ. ‘ವೈವಾಹಿಕ ಜೀವನಕ್ಕೆ ಶುಭವಾಗಲಿ’ ಎಂದು ಶುಭ ಕೋರಿರುವ ಚಿತ್ರತಂಡದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
Ranabaali Film Sets

Updated on: Apr 12, 2026 | 11:46 AM

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆ ಸಲುವಾಗಿ ಇಷ್ಟು ದಿನ ಬ್ರೇಕ್ ಪಡೆದುಕೊಂಡಿದ್ದರು. ಈಗ ಅವರ ‘ರಣಬಾಲಿ’ (Ranabaali) ಸಿನಿಮಾದ ಚಿತ್ರೀಕರಣಕ್ಕೆ ಮರಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಚಿತ್ರತಂಡದ ಜೊತೆ ಅವರು ತೆಗೆದುಕೊಂಡ ಫೋಟೋ ವೈರಲ್ ಆಗಿದೆ. ವಿವಾಹದ ನಂತರ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹಾಜರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಚಿತ್ರತಂಡದವರು ಅತ್ಯಂತ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಗಿದೆ. ಇಡೀ ಚಿತ್ರತಂಡವು ವಿಜಯ್ ಮತ್ತು ರಶ್ಮಿಕಾ ಅವರಿಗೆ ಹೂಗುಚ್ಛ ನೀಡಿ, ಸುಖಿ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿತು. ‘ಹ್ಯಾಪಿ ಮ್ಯಾರೀಡ್ ಲೈಫ್, ಮಿಸ್ಟರ್ ಆ್ಯಂಡ್ ಮಿಸಸ್ ರಣಬಾಲಿ’ ಎಂದು ಹಾರೈಸಲಾಗಿದೆ. ‘ರಣಬಾಲಿ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.

ಈ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ‘ರಣಬಾಲಿ’ ಕೇವಲ ಪ್ರೇಮಕಥೆಯಲ್ಲ. ಇದು 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ವಿಜಯ್ ದೇವರಕೊಂಡ ಅವರು ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಮ್ಮ ಎಂಬ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಜನ ನಾಯಗನ್ ಲೀಕ್: ದೇವರಕೊಂಡ ಬೇಸರ

ದಳಪತಿ ವಿಜಯ್ ನಟನೆಯ ‘ಜನ ನಾಯಗನ’ ಸಿನಿಮಾ ಲೀಕ್ ಆಗಿದ್ದಕ್ಕೆ ವಿಜಯ್ ದೇವರಕೊಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜನ ನಾಯಕನ್ ಚಿತ್ರದ ಲೀಕ್ ವಿಚಾರ ನನಗೆ ತುಂಬಾ ಕೋಪ ತರುತ್ತಿದೆ. ವೃತ್ತಿಜೀವನದ ಆರಂಭದಲ್ಲಿ ಇಂತಹ ಘಟನೆಗಳಿಂದ ಆಗುವ ನೋವು ಮತ್ತು ನಷ್ಟದ ಅನುಭವ ನನಗೇ ಇದೆ. ಇದು ನನ್ನ ವಿಷಯ ಮಾತ್ರವಲ್ಲ, ಸಹನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ತಮ್ಮ ಕನಸುಗಳನ್ನು ಹೂಡಿಕೆ ಮಾಡಿದ ಅನೇಕ ಜನರ ವಿಚಾರವೂ ಆಗಿದೆ’ ಎಂದು ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ಮಗಳಿಗೆ ಬಂಗಲೆ ಗಿಫ್ಟ್ ಕೊಟ್ಟ ತಂದೆ

‘ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು ಮತ್ತು ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಬೇಕು. ಹಾಗಾಗದಿದ್ದರೆ ಅದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಜನರು ಎಷ್ಟು ಅನಾಸಕ್ತಿ ಹೊಂದಿರಬಹುದು ಮತ್ತು ಇನ್ನೊಬ್ಬರಿಗೆ ಹಾನಿ ಮಾಡಲು ಎಷ್ಟರ ಮಟ್ಟಿಗೆ ಹೋಗುತ್ತಾರೆ ಎಂಬುದನ್ನು ಇದು ಮತ್ತೆ ಮತ್ತೆ ನೆನಪಿಸುತ್ತದೆ’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us