
ಗುಜರಾತಿ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ‘ಲಾಲೋ’ ಸಿನಿಮಾ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಮೂಡಿಬಂದು ಬರೋಬ್ಬರಿ 100 ಕೋಟಿಗೂ ಅಧಿಕ ಗಳಿಕೆ ಕಂಡ ಈ ಭಕ್ತಿ ಪ್ರಧಾನ ಚಿತ್ರದ ತೆಲುಗು ಆವೃತ್ತಿಯಲ್ಲಿ ನಟ ವಿಜಯ್ ದೇವರಕೊಂಡ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಈ ಪಾತ್ರಕ್ಕೆ ರಾಮ್ ಚರಣ್ ಹೆಸರು ಕೇಳಿಬಂದಿತ್ತು.
ಆರಂಭದಲ್ಲಿ ರಾಮ್ ಚರಣ್ ಶ್ರೀಕೃಷ್ಣನಾಗಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಬಾಲಿವುಡ್ ಹಂಗಾಮ ವರದಿಯ ಪ್ರಕಾರ ವಿಜಯ್ ದೇವರಕೊಂಡ ಈ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಆಟೋ ಚಾಲಕನೊಬ್ಬ ಕಳ್ಳತನ ಮಾಡಲು ಹೋಗಿ ನಿರ್ಜನ ಬಂಗಲೆಯಲ್ಲಿ ಸಿಲುಕಿಕೊಳ್ಳುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಆಪತ್ತಿನಲ್ಲಿರುವಾಗ ಆತನಿಗೆ ಸಹಾಯ ಮಾಡಲು ಬರುವ ಅಪರಿಚಿತ ವ್ಯಕ್ತಿಯೇ ಕೊನೆಗೆ ಶ್ರೀಕೃಷ್ಣ ಎಂದು ತಿಳಿಯುತ್ತದೆ. ಈ ವಿಭಿನ್ನ ಹಾಗೂ ಭಾವನಾತ್ಮಕ ಕಥಾವಸ್ತುವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಂಕಿತ್ ಸಖಿಯಾ ನಿರ್ದೇಶಿಸಿದ್ದ ಮೂಲ ಗುಜರಾತಿ ಚಿತ್ರದಲ್ಲಿ ಕರಣ್ ಜೋಶಿ ಮತ್ತು ಶ್ರುಹದ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಯಾವುದೇ ದೊಡ್ಡ ತಾರಾಗಣವಿಲ್ಲದೆ ಬಿಡುಗಡೆಯಾಗಿದ್ದ ಈ ಸಿನಿಮಾ ಜನಪ್ರಿಯತೆಯಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈಗ ಅದೇ ಮ್ಯಾಜಿಕ್ ಅನ್ನು ತೆಲುಗಿನಲ್ಲೂ ಮರುಸೃಷ್ಟಿಸಲು ಚಿತ್ರತಂಡ ಸಜ್ಜಾಗಿದೆ.
ಇದನ್ನೂ ಓದಿ: ‘ಬ್ರೇಕಪ್ ಆಗಿತ್ತು, ಕುಡಿಯುತ್ತಿದ್ದೆ’ ಖಾಸಗಿ ಜೀವನದ ಬಗ್ಗೆ ವಿಜಯ್ ದೇವರಕೊಂಡ ಮಾತು
ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿರುವುದು ಅತ್ಯಂತ ವಿಶೇಷ ಹಾಗೂ ವಿಭಿನ್ನ ಪ್ರಯತ್ನವಾಗಿದೆ. ಸಾಲು ಸಾಲು ಆಕ್ಷನ್ ಸಿನಿಮಾಗಳಲ್ಲಿ ನಿರತರಾಗಿರುವ ವಿಜಯ್, ಈ ಭಕ್ತಿಪ್ರಧಾನ ಚಿತ್ರದ ಮೂಲಕ ಅಭಿಮಾನಿಗಳಿಗೆ ಹೊಸ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಈ ಸಿನಿಮಾ ತೆಲುಗು ಚಿತ್ರರಂಗದಲ್ಲೂ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Fri, 4 September 26