ವಿಜಯ್ ಸೇತುಪತಿ ಮಗನ ವರ್ತನೆಗೆ ಫ್ಯಾನ್ಸ್ ಅಸಮಾಧಾನ; ಕ್ಷಮೆ ಕೇಳಿದ ಸ್ಟಾರ್ ನಟ
ವಿಜಯ್ ಸೇತುಪತಿ ಮಗ ಸೂರ್ಯ ಸೇತುಪತಿ ‘ಫೀನಿಕ್ಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲೇ ಅವರ ಒಂದು ವಿಡಿಯೋ ವಿವಾದಕ್ಕೆ ಕಾರಣ ಆಗಿದೆ. ಆ ಬಗ್ಗೆ ಪ್ರಶ್ನೆ ಎದುರಾಗಿದೆ. ವಿಜಯ್ ಸೇತುಪತಿ ಅವರು ಮಗನ ಪರವಾಗಿ ಕ್ಷಮೆ ಕೇಳಿದ್ದಾರೆ. ವೈರಲ್ ವಿಡಿಯೋ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ವಿಜಯ್ ಸೇತುಪತಿ (Vijay Sethupathi) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುಬೇಡಿಕೆಯ ನಟನಾಗಿ ಅವರು ಬೆಳೆದು ನಿಂತಿದ್ದಾರೆ. ಈಗ ಅವರ ಮಗ (Vijay Sethupathi Son) ಸೂರ್ಯ ಸೇತುಪತಿ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸೂರ್ಯ ಅವರು ‘ಫೀನಿಕ್ಸ್’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದಾರೆ. ಈ ಸಿನಿಮಾ ಜುಲೈ 4ರಂದು ಬಿಡುಗಡೆ ಆಗಿದೆ. ಇದರ ನಡುವೆ ಸೂರ್ಯ ಒಂದು ವಿವಾದ ಮಾಡಿಕೊಂಡಿದ್ದಾರೆ. ಸೂರ್ಯ ಸೇತುಪತಿ (Surya Sethupathi) ಅವರ ಒಂದು ವಿಡಿಯೋ ವೈರಲ್ ಆಗಿದೆ. ಅದನ್ನು ಕಂಡು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಆ ವಿಡಿಯೋಗೆ ಸಂಬಂಧಿಸಿದಂತೆ ಮಗನ ಪರವಾಗಿ ವಿಜಯ್ ಸೇತುಪತಿ ಕ್ಷಮೆ ಕೇಳಿದ್ದಾರೆ.
ಅಷ್ಟಕ್ಕೂ ವಿಜಯ್ ಸೇತುಪತಿ ಮಗ ಸೂರ್ಯ ಮಾಡಿದ ತಪ್ಪೇನು? ಅಭಿಮಾನಿಗಳ ಜೊತೆ ಮಾತನಾಡುವ ಅವರು ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಆ ಸಂದರ್ಭದ ವಿಡಿಯೋಗಳು ವೈರಲ್ ಆಗಿವೆ. ಅದು ದುರಹಂಕಾರದ ವರ್ತನೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ನೆಪೋಟಿಸಂ ಕಾರಣದಿಂದ ಈ ರೀತಿ ಅವರು ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡಿದ್ದಾರೆ.
ಮಗನ ವಿಡಿಯೋ ವೈರಲ್ ಆಗಿರುವುದು ವಿಜಯ್ ಸೇತುಪತಿ ಅವರ ಗಮನಕ್ಕೆ ಬಂದಿದೆ. ಅಂತಹ ವಿಡಿಯೋಗಳನ್ನು ಡಿಲೀಟ್ ಮಾಡಿ ಎಂದು ಅವರು ಕೆಲವರಿಗೆ ಒತ್ತಾಯ ಹೇರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪತ್ರಕರ್ತರಿಂದ ಪ್ರಶ್ನೆ ಎದುರಾಗಿದೆ. ಅದಕ್ಕೆ ವಿಜಯ್ ಸೇತುಪತಿ ಕೂಡಲೇ ಪ್ರತಿಕ್ರಿಯೆ ನೀಡಿದರು.
‘ಆ ರೀತಿ ಏನಾದರೂ ಆಗಿದ್ದರೆ ಅದು ಗೊತ್ತಿಲ್ಲದೇ ಆಗಿರುತ್ತದೆ ಅಥವಾ ಬೇರೆ ಯಾರೋ ಮಾಡಿರಬಹುದು. ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ’ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.
ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ದುನಿಯಾ ವಿಜಯ್ ಸಿನಿಮಾ; ಪುರಿ ಜಗನ್ನಾಥ್ ನಿರ್ದೇಶನ
‘ಫಿನಿಕ್ಸ್’ ಸಿನಿಮಾಗೆ ಅರಸು ಮಾಸ್ಟರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಕ್ಸಿಂಗ್ ಕುರಿತಾದ ಕಹಾನಿ ಇದೆ. ವರಲಕ್ಷ್ಮಿ ಶರತ್ಕುಮಾರ್, ಸಂಪತ್ ರಾಜ್, ಅಭಿನಕ್ಷತ್ರ, ವಿಘ್ನೇಶ್, ದೇವದರ್ಶಿನಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸಿದ್ದಾರ್ಥ್ ನಟನೆಯ ‘3 ಬಿಹೆಚ್ಕೆ’ ಸಿನಿಮಾದ ಎದುರು ‘ಫೀನಿಕ್ಸ್’ ಚಿತ್ರ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Sun, 6 July 25