Kamal Haasan: ಕಮಲ್ ಹಾಸನ್ಗೆ ಮತ್ತೆ ರಾಜಕೀಯದ ಸೆಳೆತ; ‘ವಿಕ್ರಮ್’ ಗೆಲುವಿನ ಬೆನ್ನಲ್ಲೇ ದೊಡ್ಡ ಅನೌನ್ಸ್ಮೆಂಟ್
Kamal Haasan Politics: ರಾಜಕೀಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಮುಂಬರುವ ತಮಿಳುನಾಡು ಅಸೆಂಬ್ಲಿ ಎಲೆಕ್ಷನ್ನಲ್ಲಿ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ನಟ ಕಮಲ್ ಹಾಸನ್ (Kamal Haasan) ಅವರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ದಿಗ್ಗಜ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ರಾಜಕೀಯದಲ್ಲೂ ಅವರಿಗೆ ಆಸಕ್ತಿ ಇದೆ. ಆದರೆ ಆ ಕ್ಷೇತ್ರದಲ್ಲಿ ಅವರಿಗೆ ಜಯ ಸಿಕ್ಕಿಲ್ಲ. ತಮ್ಮದೇ ‘ಮಕ್ಕಳ್ ನೀದಿ ಮೈಯಂ’ ಪಾರ್ಟಿ (Makkal Needhi Maiam) ಸ್ಥಾಪನೆ ಮಾಡಿಕೊಂಡು ಕಳೆದ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಸೋಲು ಕಂಡರು. ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆದರು. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ‘ವಿಕ್ರಮ್’ ಸಿನಿಮಾ (Vikram Movie) ಮೂಲಕ ಕಮಲ್ ಹಾಸನ್ ಅವರು ಜಯಭೇರಿ ಬಾರಿಸಿದ್ದಾರೆ. ಈ ಖುಷಿಯಲ್ಲೇ ಅವರಿಗೆ ರಾಜಕೀಯದ ಸೆಳೆತ ಶುರುವಾಗಿದೆ. ಮತ್ತೆ ಪಾಲಿಟಿಕ್ಸ್ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರ..
ಸಿನಿಮಾ ನಟ-ನಟಿಯರು ರಾಜಕೀಯದಲ್ಲಿ ತೊಡಗಿಕೊಳ್ಳುವುದು ಹೊಸ ಟ್ರೆಂಡ್ ಏನೂ ಅಲ್ಲ. ರಾಜಕೀಯಕ್ಕೆ ಬಂದು ಯಶಸ್ಸು ಕಂಡ ಸೆಲೆಬ್ರಿಟಿಗಳು ಹಲವರಿದ್ದಾರೆ. ಸೋತವರ ಸಂಖ್ಯೆಯೂ ದೊಡ್ಡದಿದೆ. ಕಮಲ್ ಹಾಸನ್ ಅವರು 2021ರ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ಕೊಂಚ ದೂರು ಉಳಿದುಕೊಂಡಿದ್ದರು. ‘ವಿಕ್ರಮ್’ ಸಿನಿಮಾದ ಕೆಲಸಗಳಲ್ಲಿ ಅವರು ಮಗ್ನರಾಗಿದ್ದರು. ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿರುವುದರಿಂದ ಅವರು ಇನ್ಮುಂದೆ ರಾಜಕೀಯ ಬಿಟ್ಟು ಕೇವಲ ಸಿನಿಮಾ ಕೆಲಸಗಳಲ್ಲಿಯೇ ಬ್ಯುಸಿ ಆಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಕಮಲ್ ಹಾಸನ್ ಟ್ವಿಸ್ಟ್ ನೀಡಿದ್ದಾರೆ. ಸಿನಿಮಾ ಯಶಸ್ವಿ ಆಗಿದೆ ಎಂದಮಾತ್ರಕ್ಕೆ ರಾಜಕೀಯದಿಂದ ದೂರ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್ ಹಾಸನ್
ಕಮಲ್ ಹಾಸನ್ ಸ್ಥಾಪಿಸಿದ ‘ಮಕ್ಕಳ್ ನೀದಿ ಮೈಯಂ’ ಪಕ್ಷ 5ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ರಾಜಕೀಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿರುವ ಕಮಲ್ ಹಾಸನ್ ಅವರು ಮುಂಬರುವ ತಮಿಳುನಾಡು ಅಸೆಂಬ್ಲಿ ಎಲೆಕ್ಷನ್ನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ರಾಜಕೀಯದಲ್ಲಿ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುವ ಭರವಸೆ ಅವರಿಗೆ ಇದೆ. ಹಾಗಾಗಿ ಸತತ ಪ್ರಯತ್ನ ಮಾಡುವತ್ತ ಅವರು ಗಮನ ಹರಿಸಿದ್ದಾರೆ. ಕಮಲ್ ಹಾಸನ್ ಅವರ ಈ ಹೇಳಿಕೆಯಿಂದ ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಅವರಿಗೆ ಜಯ ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Fri, 10 June 22