ಮಹೇಶ್ ಬಾಬು-ರಾಜಮೌಳಿ ಸಿನಿಮಾದ ಬಜೆಟ್ ಎಷ್ಟು ಗೊತ್ತೆ?
Rajamouli: ಮುಂದಿನ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡಲಿದ್ದೇನೆ ಎಂದು ನಿರ್ದೇಶಕ ರಾಜಮೌಳಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ ಎಷ್ಟಾಗಲಿದೆ ಗೊತ್ತೆ?
‘ಆರ್ಆರ್ಆರ್’ (RRR) ಸಿನಿಮಾಕ್ಕೆ ಹಾಲಿವುಡ್ನಲ್ಲಿ ದೊರಕಿರುವ ಅಭೂತಪೂರ್ವ ಜನಪ್ರಿಯತೆ ರಾಜಮೌಳಿಯವರನ್ನು (Rajamouli) ಅಂತರಾಷ್ಟ್ರೀಯ ಶ್ರೇಣಿಯ ನಿರ್ದೇಶಕರನ್ನಾಗಿ ಮಾಡಿದೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಜಮೌಳಿ ಇನ್ನೇನು ಮಾಡಲಿದ್ದಾರೆ ಎಂಬ ಕುತೂಹಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಗರಿಗೆದರಿದೆ. ‘ಆರ್ಆರ್ಆರ್’ ಸಿನಿಮಾದ ಬಿಡುಗಡೆ ಮುನ್ನವೇ ರಾಜಮೌಳಿ, ತಾವು ಮಹೇಶ್ ಬಾಬು ಜೊತೆ ಮುಂದಿನ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಆ ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ ರಾಜಮೌಳಿ. ಅಂದಹಾಗೆ ಈ ಸಿನಿಮಾದ ಬಜೆಟ್ ದಾಖಲೆಯನ್ನೇ ನಿರ್ಮಿಸಲಿದೆ.
‘ಆರ್ಆರ್ಆರ್’ ಸಿನಿಮಾಕ್ಕೆ ದೊರೆತ ಅಭೂತಪೂರ್ವ ಯಶಸ್ಸು, ಜನಮನ್ನಣೆಯ ಬಳಿಕ ರಾಜಮೌಳಿ, ತಮ್ಮ ಮುಂದಿನ ಸಿನಿಮಾದ ಯೋಜನೆಗಳನ್ನು ‘ಸ್ಕೇಲ್ ಅಪ್’ ಮಾಡಿದ್ದಾರೆ. ಈ ಮೊದಲು ಯೋಜಿಸಿದ್ದ ಬಜೆಟ್ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗುತ್ತಿದ್ದು, ಸಿನಿಮಾದ ಕತೆಯಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಭಾರತೀಯ ಪ್ರೇಕ್ಷಕರ ಜೊತೆಗೆ ಅಂತರಾಷ್ಟ್ರೀಯ ಪ್ರೇಕ್ಷಕರನ್ನೂ ಸಹ ಗಮನದಲ್ಲಿರಿಸಿಕೊಂಡು ಕತೆಯನ್ನು ಬದಲಾಯಿಸಲಾಗಿದ್ದು, ಮೇಕಿಂಗ್ ಸಹ ಹಾಲಿವುಡ್ ಸಿನಿಮಾ ರೇಂಜ್ಗೆ ಇರಲಿದೆ.
ಮಹೇಶ್ ಬಾಬು-ರಾಜಮೌಳಿಯ ಮುಂದಿನ ಸಿನಿಮಾ ಸಾಹಸಮಯ ಯಾತ್ರೆಯ ಕತೆಯನ್ನು ಒಳಗೊಂಡಿರಲಿದೆ. ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’ ಸಿನಿಮಾಗಳಿಂದ ಪ್ರೇರೇಪಿತವಾಗಿದ್ದು, ಅರಣ್ಯದೊಳಗೆ ನಡೆವ ಸಾಹಸಮಯ ಯಾತ್ರೆಯ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದ ಚಿತ್ರೀಕರಣವನ್ನು ಅಮೆಜಾನ್ ಕಾಡುಗಳಲ್ಲಿ ಮಾಡಲು ರಾಜಮೌಳಿ ನಿಶ್ಚಯಿಸಿದ್ದಾರೆ. ಸಿನಿಮಾದ ಗ್ರಾಫಿಕ್ಸ್, ಸಿಜಿಐ, ಎಡಿಟಿಂಗ್ ಇನ್ನಿತರೆಗಳಿಗೆ ಹಾಲಿವುಡ್ನ ನುರಿತ ತಂತ್ರಜ್ಞರ ಸಹಾಯವನ್ನು ಪಡೆಯಲಿದ್ದು, ಹಾಲಿವುಡ್ನ ಜನಪ್ರಿಯ ಸ್ಟುಡಿಯೋ ಜೊತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಅಥವಾ ಹೈದರಾಬಾದ್: ‘ಸಲಾರ್’ ಎಲ್ಲಿ ನೋಡ್ತಾರೆ ರಾಜಮೌಳಿ? ಗೊಂದಲಕ್ಕೆ ಕಾರಣವೇನು?
ಮಹೇಶ್ ಬಾಬು-ರಾಜಮೌಳಿಯ ಸಿನಿಮಾದ ಬಜೆಟ್ ಸುಮಾರು 800 ಕೋಟಿ ಎಂದು ಯೋಜಿಸಲಾಗಿದೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಬಳಿಕ ಈ ಬಜೆಟ್ ಇನ್ನಷ್ಟು ಹೆಚ್ವಾಗುವ ಸಾಧ್ಯತೆಯೂ ಇದೆ. ಸಿನಿಮಾದ ಪ್ರೀ ಪ್ರೊಡಕ್ಷನ್ನಲ್ಲಿಯೇ ನೂರು ಕೋಟಿಯಷ್ಟು ಹಣ ಖರ್ಚಾಗಲಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಸಿನಿಮಾಕ್ಕಾಗಿ ಖರ್ಚು ಮಾಡಿದ ಉದಾಹರಣೆ ಇಲ್ಲ. ಆ ಮೂಲಕ ಭಾರತದ ಅತಿ ದೊಡ್ಡ ಬಜೆಟ್ನ ಸಿನಿಮಾ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಲಿದೆ.
ಮಹೇಶ್ ಬಾಬು ಪ್ರಸ್ತುತ ‘ಗುಂಟೂರು ಖಾರಂ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ‘ಗುಂಟೂರು ಖಾರಂ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯೇ ರಾಜಮೌಳಿ ಜೊತೆಗಿನ ಸಿನಿಮಾಕ್ಕೆ ತಯಾರಿ ಆರಂಭಿಸಿದ್ದರು ಮಹೇಶ್ ಬಾಬು. ರಾಜಮೌಳಿ-ಮಹೇಶ್ ಬಾಬು ಸಿನಿಮಾ 2024ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ