ಬೆಂಗಳೂರು ಅಥವಾ ಹೈದರಾಬಾದ್: ‘ಸಲಾರ್’ ಎಲ್ಲಿ ನೋಡ್ತಾರೆ ರಾಜಮೌಳಿ? ಗೊಂದಲಕ್ಕೆ ಕಾರಣವೇನು?
SS Rajamouli: ನಿರ್ದೇಶಕ ಎಸ್ಎಸ್ ರಾಜಮೌಳಿಗೆ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾವನ್ನು ಎಲ್ಲಿ ನೋಡಬೇಕು ಎಂಬ ಗೊಂದಲ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ.
ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ. 5 ಗಂಟೆಯಿಂದಲೇ ಸಿನಿಮಾದ ಮೊದಲ ಶೋಗಳು ಹಲವೆಡೆ ಆರಂಭವಾಗಲಿದೆ. ಪ್ರಭಾಸ್ ಅಭಿಮಾನಿಗಳು, ಪ್ರಶಾಂತ್ ನೀಲ್ ಅಭಿಮಾನಿಗಳು, ಪೃಥ್ವಿರಾಜ್ ಸುಕುಮಾರನ್ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಸಹ ಮೊದಲ ದಿನ ಮೊದಲ ಶೋ ನೋಡಲು ಕಾತರರಾಗಿದ್ದಾರೆ ಅದರಲ್ಲಿ ನಿರ್ದೇಶಕ ರಾಜಮೌಳಿ ಸಹ ಒಬ್ಬರು. ಆದರೆ ‘ಸಲಾರ್’ ಸಿನಿಮಾವನ್ನು ಬೆಂಗಳೂರಿನಲ್ಲಿ ನೋಡಬೇಕಾ? ಅಥವಾ ಹೈದರಾಬಾದ್ನಲ್ಲಿ ನೋಡಬೇಕಾ ಎಂಬ ಗೊಂದಲ ಸೃಷ್ಟಿಯಾಗಿದೆ. ಅದಕ್ಕೆ ಕಾರಣವೂ ಇದೆ…
ಪ್ರಭಾಸ್ರ ಯಾವುದೇ ಸಿನಿಮಾ ಬಿಡುಗಡೆ ಆದರೂ ಸಹ ರಾಜಮೌಳಿ ಅದನ್ನು ಮೊದಲ ದಿನವೇ ನೋಡುತ್ತಾರಂತೆ, ಅವರು ಮಾತ್ರವಲ್ಲ ಅವರ ಇಡೀ ಕುಟುಂಬವನ್ನು ಒಟ್ಟಿಗೆ ಹೋಗಿ ಪ್ರಭಾಸ್ರ ಸಿನಿಮಾವನ್ನು ಮೊದಲ ದಿನ ನೋಡುತ್ತಾರೆ. ಹಲವು ವರ್ಷಗಳಿಂದಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಆದರೆ ಈ ಬಾರಿ ಅದು ಮುರಿಯುವ ಸಾಧ್ಯತೆ ಇದೆ. ರಾಜಮೌಳಿ, ಇತ್ತೀಚೆಗಷ್ಟೆ ಪ್ರಭಾಸ್, ಪ್ರಶಾಂತ್ ನೀಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರನ್ನು ಸಂದರ್ಶನ ಮಾಡಿದ್ದು, ಸಂದರ್ಶನದಲ್ಲಿ ಈ ವಿಷಯ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್’ ಬಗ್ಗೆ ವ್ಯಂಗ್ಯವಾಡಿದ್ದ ನಿರ್ದೇಶಕ ಈಗ ಪ್ರಭಾಸ್ ಅಭಿಮಾನಿಗಳಿಗೂ ವಿಲನ್
ಪ್ರಭಾಸ್ರ ಯಾವುದೇ ಸಿನಿಮಾ ಬಿಡುಗಡೆ ಆದರೂ ನಮ್ಮ ಇಡೀ ಕುಟುಂಬ ಒಟ್ಟಿಗೆ ಹೋಗಿ ಮೊದಲ ದಿನವೇ ಮೊದಲ ಶೋ ನೋಡುವುದು ವಾಡಿಕೆ. ಆದರೆ ನನ್ನ ಪತ್ನಿ ಬೆಂಗಳೂರಿನಲ್ಲಿದ್ದಾರೆ, ಆಕೆ ಹೈದರಾಬಾದ್ಗೆ ಬರುವುದು ರಿಲೀಸ್ ದಿನ ಸಂಜೆ, ಅಲ್ಲಿಯವರೆಗೆ ಕಾಯಲಾ? ಅಥವಾ ಎಲ್ಲರನ್ನೂ ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿಯೇ ಸಿನಿಮಾ ನೋಡಲಾ ಎಂಬ ಗೊಂದಲ ಪ್ರಾರಂಭವಾಗಿದೆ. ಏನು ಮಾಡುವುದು ಎಂದು ಇನ್ನೂ ನಿರ್ಣಯ ಮಾಡಿಲ್ಲ ಎಂದಿದ್ದಾರೆ.
‘ನಿಮ್ಮ ಮಗ ಕಾರ್ತಿಕೇಯ ಮಾತ್ರ ನಿಮಗೆ ಕಾಯುವುದಿಲ್ಲ ಬಿಡಿ, ಅವನು ಮೊದಲ ಶೋ ನೋಡಿಕೊಂಡು ಬಿಡುತ್ತಾನೆ’ ಎಂದು ಪ್ರಭಾಸ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಾಜಮೌಳಿ, ‘‘ಹೌದು, ಅವನು ಈ ಬಾರಿ ಕಾಯುವುದಿಲ್ಲ ಅನಿಸುತ್ತೆ, ಬೆನ್ನಿಗೆ ಚೂರಿ ಹಾಕುವವನು’’ ಎಂದು ತಮಾಷೆಯಾಗಿ ಹೇಳಿದ್ದಾರೆ ರಾಜಮೌಳಿ. ಅಂದಹಾಗೆ, ‘ಸಲಾರ್’ ಸಿನಿಮಾದ ಮೊದಲ ಟಿಕೆಟ್ ಅನ್ನು ಹೊಂಬಾಳೆ ಫಿಲ್ಮ್ಸ್ನವರು ರಾಜಮೌಳಿಗೆ ನೀಡಿದ್ದಾರೆ. ಗೌರವಾರ್ಥ ಈ ಟಿಕೆಟ್ ಅನ್ನು ರಾಜಮೌಳಿಗೆ ನೀಡಲಾಗಿದೆ.
‘ಸಲಾರ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರ್, ಶ್ರುತಿ ಹಾಸನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜಗಪತಿ ಬಾಬು, ಕನ್ನಡಿಗರಾದ ಗರುಡ ರಾಮಚಂದ್ರ, ಗುರುಸ್ವಾಮಿ, ರತ್ನನ್ ಪ್ರಪಂಚ ಖ್ಯಾತಿಯ ಪಂಜು ಅವರುಗಳು ಸಹ ಇದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Thu, 21 December 23