ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಬೇಡ, ಅಪ್ಪಿತಪ್ಪಿಯೂ ಈ ಸಮಸ್ಯೆ ಇರುವವರು ತಿನ್ನಲೇಬೇಡಿ
ಮೊಟ್ಟೆ ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಬೇಸಿಗೆಯಲ್ಲಿ ಅತಿಯಾಗಿ ಮೊಟ್ಟೆ ತಿಂದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಏಕೆಂದರೆ ಮೊಟ್ಟೆ ಸೇವನೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ಬೇಸಿಗೆಯಲ್ಲಿ ಮೊಟ್ಟೆಗಳನ್ನು ಮಿತವಾಗಿ ತಿನ್ನುವುದು ಉತ್ತಮ ಎನ್ನಲಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದಾಗ ಕಂಡು ಬರುವ ಸಮಸ್ಯೆಗಳೇನು ತಿಳಿದುಕೊಳ್ಳಿ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

ಮೊಟ್ಟೆಗಳು (Eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಇವುಗಳಲ್ಲಿರುವ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ಇರುವುದರಿಂದ ಇವುಗಳ ಸೇವನೆಯಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗುತ್ತದೆ. ಆದರೆ ಇವುಗಳ ಸೇವನೆ ಮಾಡುವುದಕ್ಕೆ ಸರಿಯಾದ ಸಮಯವಿರುತ್ತದೆ. ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಬೇಸಿಗೆ (Summer) ಕಾಲದಲ್ಲಿ ಇವುಗಳನ್ನು ಹೆಚ್ಚು ಹೆಚ್ಚು ತಿನ್ನಬಾರದು. ಏಕೆಂದರೆ ಬೇಸಿಗೆಯಲ್ಲಿ ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ಕೆಲವು ರೀತಿಯ ಆರೋಗ್ಯ (Health) ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಈ ಸಮಯದಲ್ಲಿ ದೇಹದ ಉಷ್ಣತೆ ಸ್ವಾಭಾವಿಕವಾಗಿ ಹೆಚ್ಚಾಗಿರುತ್ತದೆ. ಹಾಗಾಗಿ ಮೊಟ್ಟೆಗಳ ಸೇವನೆ ಹೆಚ್ಚಾದಾಗ, ಅದು ಹೊಟ್ಟೆಯಲ್ಲಿ ಶಾಖದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಕೆಲವರಲ್ಲಿ ಅಜೀರ್ಣ (Indigestion) ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ, ಬೇಸಿಗೆಯಲ್ಲಿ ಮೊಟ್ಟೆಗಳನ್ನು ಮಿತವಾಗಿ ಸೇವಿಸುವುದು ಉತ್ತಮ ಎನ್ನಲಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ಮೊಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದಾಗ ಕಂಡು ಬರುವ ಸಮಸ್ಯೆಗಳೇನು ತಿಳಿದುಕೊಳ್ಳಿ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
ನೀರು, ಮಜ್ಜಿಗೆ ಕುಡಿಯಿರಿ
ಮೊಟ್ಟೆಗಳು ಮಾನವ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುತ್ತವೆ. ಆದರೆ, ಬೇಸಿಗೆಯಲ್ಲಿ ಅವುಗಳನ್ನು ಅತಿಯಾಗಿ ಸೇವನೆ ಮಾಡಿದಾಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಮಲಬದ್ಧತೆ, ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ಮೊಟ್ಟೆಗಳನ್ನು ಸೇವನೆ ಮಾಡಿದರೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ನೀರು ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿರುತ್ತದೆ. ಅಗತ್ಯವಿದ್ದರೆ, ಮಜ್ಜಿಗೆಯನ್ನು ಕೂಡ ನೀವು ಸೇವನೆ ಮಾಡಬಹುದು, ಇದು ಕೂಡ ನಮ್ಮ ಆರೋಗ್ಯ ಕಾಪಾಡಲು ಪ್ರಯೋಜನಕಾರಿಯಾಗಿದೆ. ಇನ್ನು ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಮಾಡುವುದರಿಂದ ಅವುಗಳಲ್ಲಿನ ಪ್ರೋಟೀನ್ ಪ್ರಮಾಣವು ಕೂಡ ದೇಹದ ಮೇಲೆ ಹೊರೆಯಾಗಬಹುದು. ವಿಶೇಷವಾಗಿ, ಮೂತ್ರಪಿಂಡಗಳು ಈ ಪ್ರೋಟೀನ್ ಅನ್ನು ಫಿಲ್ಟರ್ ಮಾಡಲು ಹೆಚ್ಚು ಶ್ರಮಿಸುವುದರಿಂದ ಇದು ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮೂತ್ರಪಿಂಡದ ಸಮಸ್ಯೆ ಇರುವವರು ಮೊಟ್ಟೆಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.
ಹೃದ್ರೋಗ ಇರುವವರು ಮೊಟ್ಟೆ ಸೇವನೆ ಮಾಡಬೇಡಿ
ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ, ದೇಹದ ಉಷ್ಣತೆಯೂ ಹೆಚ್ಚಾಗಿರುವ ಕಾರಣ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿಲ್ಲದಿದ್ದರೆ, ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ ಕಾರಣ, ಹೃದ್ರೋಗ ಇರುವವರು ಮೊಟ್ಟೆ ಸೇವನೆ ಮಾಡುವುದನ್ನು ಮಿತಿಗೊಳಿಸಬೇಕು. ಇನ್ನು ಅತಿಯಾಗಿ ಮೊಟ್ಟೆ ತಿನ್ನುವುದರಿಂದ ಅಲರ್ಜಿಯಾಗಬಹುದು. ಇದರಿಂದ ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ನೀರು ಬರುವುದು, ವಾಂತಿ ಮತ್ತು ಹೊಟ್ಟೆ ನೋವು ಮುಂತಾದ ಲಕ್ಷಣಗಳು ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ, ಮೊಟ್ಟೆ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಜೊತೆಗೆ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: Red or Green Apple: ಕೆಂಪು ಅಥವಾ ಹಸಿರು ಸೇಬು ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ಎಷ್ಟು ಮೊಟ್ಟೆ ತಿನ್ನಬೇಕು?
ಬೇಸಿಗೆಯಲ್ಲಿ, ಒಬ್ಬ ವ್ಯಕ್ತಿ ದಿನಕ್ಕೆ ಎರಡು ಮೊಟ್ಟೆಗಳಿಗಿಂತ ಹೆಚ್ಚು ಸೇವನೆ ಮಾಡಬಾರದು. ಇನ್ನು ದೇಹದ ಸ್ಥಿತಿಯನ್ನು ಅವಲಂಬಿಸಿ, ಕೆಲವರು ಒಂದು ಮೊಟ್ಟೆಯನ್ನು ಮಾತ್ರ ತಿನ್ನಬೇಕಾಗಬಹುದು. ಮಕ್ಕಳು, ವೃದ್ಧರು ಅಥವಾ ಜೀರ್ಣಕಾರಿ ಸಮಸ್ಯೆಗಳಿರುವವರು ಹೆಚ್ಚು ಜಾಗರೂಕರಾಗಿರಬೇಕು. ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಕೂಡ ಬೇಸಿಗೆ ಸಮಯದಲ್ಲಿ ಅವುಗಳ ಸೇವನೆ ಮಾಡುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅವರವರ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಮೊಟ್ಟೆಯ ಸೇವನೆ ಮಾಡಬೇಕು. ಈ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೆ, ತಜ್ಞರ ಸಲಹೆ ಪಡೆಯುವುದು ಉತ್ತಮ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








