ಭಾರತದಲ್ಲಿ ಪತ್ತೆಯಾದ ಈ ‘ಸೂಪರ್​ಬಗ್’ ಮುಂದಿನ ಮಹಾಪಿಡುಗು ಎನ್ನುತ್ತಿದೆ ವೈದ್ಯ ವಿಜ್ಞಾನ ಲೋಕ: ಹೊಸಿಲಲ್ಲಿದೆಯೇ ಮತ್ತೊಂದು ಸಾಂಕ್ರಾಮಿಕ?

ಸಕ್ಕರೆ ಕಾಯಿಲೆಯಿಂದ ಕಾಲಿನ ಹುಣ್ಣು (ಅಲ್ಸರ್) ಅನುಭವಿಸುತ್ತಿರುವ ಜನರಲ್ಲಿ ಸಿ.ಔರಿಸ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಕೆನಡಾದ ಮೆಕ್​ಗಿಲ್ ವಿಶ್ವವಿದ್ಯಾಲಯದ ಡಾ.ಡೊನಾಲ್ಡ್​ ಶೆಫರ್ಡ್​ ಹೇಳಿದ್ದಾರೆ. ಬ್ರಿಟನ್​ಗೆ ಬಂದು-ಹೋಗಿ ಮಾಡುವ ಏಷ್ಯಾ ಮತ್ತು ಆಫ್ರಿಕಾ ದೇಶಗಳ ಜನರಲ್ಲಿಯೂ ಸೋಂಕು ಪತ್ತೆಯಾಗಿದೆ.

ಭಾರತದಲ್ಲಿ ಪತ್ತೆಯಾದ ಈ ‘ಸೂಪರ್​ಬಗ್’ ಮುಂದಿನ ಮಹಾಪಿಡುಗು ಎನ್ನುತ್ತಿದೆ ವೈದ್ಯ ವಿಜ್ಞಾನ ಲೋಕ: ಹೊಸಿಲಲ್ಲಿದೆಯೇ ಮತ್ತೊಂದು ಸಾಂಕ್ರಾಮಿಕ?
ಸೂಪರ್​ಬಗ್ (ಪ್ರಾತಿನಿಧಿಕ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 18, 2021 | 5:10 PM

ದೆಹಲಿ: ಹಲವು ಔಷಧಿಗಳಿಗೆ ಈಗಾಗಲೇ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ‘ಸೂಪರ್​ಬಗ್’ (ಸೂಕ್ಷ್ಮಜೀವಿ) ಒಂದನ್ನು ವಿಜ್ಞಾನಿಗಳು ಭಾರತದ ದ್ವೀಪವೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮಾಹಾಪಿಡುಗಾಗಿ ಜಗತ್ತಿಗೆ ಮತ್ತೊಂದು ಸಾಂಕ್ರಾಮಿಕ ರೋಗ ಹರಡಬಲ್ಲದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸಿ-ಔರಿಸ್ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಸೂಕ್ಷ್ಮಾಣುಜೀವಿಯ ಪೂರ್ಣ ಹೆಸರು ಕ್ಯಾಂಡಿಡಾ ಔರಿಸ್. ಶಿಲೀಂಧ್ರ (ಫಂಗಸ್) ಜಾತಿಗೆ ಸೇರಿದ ಈ ಸೂಕ್ಷ್ಮಾಣುಜೀವಿ ಈಗಾಗಲೇ ಹಲವು ಔಷಧಿಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿದೆ. ಈ ಮಹತ್ವದ ಸಂಶೋಧನಾ ವರದಿಯು ‘ಎಂ-ಬಯೊ’ ನಿಯತಕಾಲಿಕೆಯಲ್ಲಿ ಮಂಗಳವಾರ (ಮಾರ್ಚ್ 16) ಪ್ರಕಟವಾಗಿದೆ.

ಕೋವಿಡ್-19 ಮಹಾಪಿಡುಗು ಸಿ ಔರಿಸ್​ನಂಥ ಮತ್ತೊಂದು ಸಾಂಕ್ರಾಮಿಕ ಹರಡಲು ಬೇಕಾದ ಭೂಮಿಕೆ ಸಿದ್ಧಪಡಿಸಿದೆ ಎಂದು ಈಚೆಗಷ್ಟೇ ತಜ್ಞರೊಬ್ಬರು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದೆಹಲಿ ವಿಶ್ವವಿದ್ಯಾಲಯದ ಡಾ.ಅನುರಾಧಾ ಚೌಧರಿ ನೇತೃತ್ವದ ತಂಡವು ಅಂಡಮಾನ್ ದ್ವೀಪಗಳ ಸುತ್ತಮುತ್ತಲ ಪ್ರದೇಶಗಳಿಂದ ಸಂಗ್ರಹಿಸಿದ್ದ 48 ನೀರು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿತ್ತು. ಮರಳು ತುಂಬಿದ ಬೀಚ್​ಗಳು, ಬಂಡೆಗಳಿರುವ ಸಮುದ್ರ ತೀರ, ಅಲೆಗಳು ನುಗ್ಗಿ ಬರುವ ಪೊದೆಗಳು ಮತ್ತು ಸದಾ ನೀರು ನಿಂತಿರುವ ಕಾಂಡ್ಲಾ ಕಾಡಿನ ಪ್ರದೇಶಗಳಿಂದ ಈ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಈ 48 ಸ್ಥಳಗಳ ಪೈಕಿ ಎರಡು ಸ್ಥಳಗಳಿಂದ ಸಂಗ್ರಹಿಸಿದ ಮಾದರಿಯನ್ನು ಪ್ರತ್ಯೇಕಿಸಿ, ಸಿ.ಔರಿಸ್ ಸೂಕ್ಷ್ಮಜೀವಿಯನ್ನು ಸಂಶೋಧಕರು ಗುರುತಿಸಿದರು. ಈ ಪೈಕಿ ಒಂದು ಸ್ಥಳವು ಜೌಗು ಪ್ರದೇಶವಾಗಿದ್ದು ಮನುಷ್ಯರು ಅಲ್ಲಿಗೆ ಎಂದಿಗೂ ಹೋಗಿರದ ತಾಣವಾಗಿತ್ತು. ಮತ್ತೊಂದು ಪ್ರದೇಶವು ಬೀಚ್​ ಆಗಿದ್ದು, ಅಲ್ಲಿ ಮಾನವ ಚಟುವಟಿಕೆಗಳು ಸಾಮಾನ್ಯವಾಗಿದ್ದವು. ಮಾನವ ಚಟುವಟಿಕೆ ಇದ್ದ ಪ್ರದೇಶದಲ್ಲಿ ಕಂಡುಬಂದಿದ್ದ ಸಿ.ಔರಿಸ್ ಸೂಕ್ಷ್ಮಜೀವಿಯ ಚಹರೆ ಈಗಾಗಲೇ ಆಸ್ಪತ್ರೆಗಳಲ್ಲಿ ಕಂಡುಬರುತ್ತಿದ್ದ ಮಾದರಿಗಳನ್ನೇ ಬಹುತೇಕ ಹೋಲುತ್ತಿತ್ತು. ಸಿ.ಔರಿಸ್​ನ ಈ ಪ್ರಭೇದವು ಈಗಾಗಲೇ ಹಲವು ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನೂ ಬೆಳೆಸಿಕೊಂಡಿತ್ತು.

ಮಾನವ ಚಟುವಟಿಕೆ ಹೆಚ್ಚು ಇರದ ಜೌಗು ಪ್ರದೇಶದಲ್ಲಿ ಪತ್ತೆಯಾದ ಸಿ.ಔರಿಸ್ ಪ್ರಭೇದವು ಇನ್ನೂ ಔಷಧಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರಲಿಲ್ಲ. ಆದರೆ ಹೆಚ್ಚಿನ ತಾಪಮಾನದಲ್ಲಿಯೂ ಬೆಳೆಯುವ ಶಕ್ತಿ ಪಡೆದುಕೊಂಡಿತ್ತು. ಸಿ.ಔರಿಸ್​ನ ಈ ಪ್ರಭೇದವು ಉಳಿದ ರೂಪಾಂತರಿ ಸೂಕ್ಷ್ಮಜೀವಿಗಳ ಮೂಲವಾಗಿರಬಹುದು ಎಂಬ ಸಂಶೋಧಕಿ ಚೌಧರಿ ಅವರ ಅಭಿಪ್ರಾಯವನ್ನು ಲೈವ್​ ಸೈನ್ಸ್​ ನಿಯತಕಾಲಿಕ ಉಲ್ಲೇಖಿಸಿದೆ.

ವಿಶ್ವದ ಹಲವು ದೇಶಗಳ ವಿಜ್ಞಾನಿಗಳಲ್ಲಿ ಆತಂಕ ಉಂಟುಮಾಡಿರುವ ಈ ಸೂಕ್ಷ್ಮಾಣುಜೀವಿಯ ಮೂಲ ಪ್ರಭೇದವು ಇನ್ನೂ ಮನುಷ್ಯರು ಅಥವಾ ಇತರ ಸಸ್ತನಿಗಳ ದೇಹದಲ್ಲಿ ಬದುಕುವ ಸಾಮರ್ಥ್ಯ ಬೆಳೆಸಿಕೊಂಡಿಲ್ಲ ಎಂದು ಬಾಲ್ಟಿಮೋರ್​ನ ಜಾನ್ಸ್​ ಹಾಪ್​ಕಿನ್ಸ್​ ಬ್ಲೂಮ್​ಬರ್ಗ್​​ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಅರ್ತರೊ ಕ್ಯಾಸಡೆವಾಲ್ ಅಭಿಪ್ರಾಯಪಟ್ಟಿದ್ದಾರೆ. ಈ ಸೂಕ್ಷ್ಮಜೀವಿಯು ಅಂಡಮಾನ್​ನಲ್ಲಿಯೇ ವಿಕಾಸಗೊಂಡಿದ್ದೇ? ಅಂಡಮಾನ ದ್ವೀಪಗಳೇ ಇದರ ಮೂಲನೆಲೆಯೇ ಎಂಬ ಬಗ್ಗೆ ಈ ಅಧ್ಯಯನವು ಹೆಚ್ಚಿನ ಬೆಳಕು ಚೆಲ್ಲಿಲ್ಲ. ವಿವಿಧ ಭೂಪ್ರದೇಶಗಳ ಜನರು ಅಂಡಮಾನ್​ಗೆ ತೆರಳಿದ್ದಾಗ ಈ ಸೂಕ್ಷ್ಮಜೀವಿಯು ಅಲ್ಲಿ ನೆಲೆ ನಿಂತಿರಬೇಕು ಎಂದು ಸದ್ಯದ ಮಟ್ಟಿಗೆ ವಿಶ್ಲೇಷಿಸಲಾಗುತ್ತಿದೆ.

ರೋಗಲಕ್ಷಣಗಳೇನು? ಸೂಪರ್​ಬಗ್​ ಎಂದು ಕರೆಸಿಕೊಂಡಿರುವ ಸಿ.ಔರಿಸ್ ಸೂಕ್ಷ್ಮಜೀವಿಯಿಂದ ಬರುವ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬ ಬಗ್ಗೆಯೂ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ತೀವ್ರ ಜ್ವರ ಮತ್ತು ಚಳಿ ಕಾಣಿಸಿಕೊಳ್ಳುವವರೆಗೂ ಸೋಂಕು ತಗುಲಿರುವ ಬಗ್ಗೆ ತಿಳಿಯುವುದಿಲ್ಲ. ಈ ಹಂತದಲ್ಲಿ ಸೋಂಕು ಪತ್ತೆಯಾದರೂ ಅದು ಬಹುತೇಕ ಔಷಧಿಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವುದರಿಂದ, ಸೋಂಕಿತ ರೋಗಿ ಸಾವನ್ನಪ್ಪುತ್ತಾನೆ ಎಂದು ಬ್ರಿಟನ್​ನ ಸನ್ ದಿನಪತ್ರಿಕೆ ವರದಿ ಮಾಡಿದೆ.

ಸಾಮಾನ್ಯವಾಗಿ ಮನಷ್ಯನ ಚರ್ಮದ ಮೇಲೆ ಕೂರುವ ಈ ಸೂಕ್ಷ್ಮಾಣು, ಗಾಯಗಳ ಮೂಲಕ ದೇಹದೊಳಗೆ ಪ್ರವೇಶಿಸುತ್ತವೆ. ರಕ್ತಪರಿಚಲನಾ ವ್ಯವಸ್ಥೆಯೊಂದಿಗೆ ಬೆರೆತುಕೊಂಡ ನಂತರ ಒಮ್ಮೆಲೆ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ದೇಹದ ಪ್ರತಿಕಾಯ ವ್ಯವಸ್ಥೆಯು ಸೋಂಕಿನ ವಿರುದ್ಧ ಹೋರಾಡಲು ಹೆಣಗಾಡಿ, ಸೋತು ಸೆಪ್ಸಿಸ್ ಸ್ಥಿತಿಗೆ ತಲುಪುತ್ತದೆ. ಒಮ್ಮೆ ದೇಹವು ಸ್ಥಿತಿಗೆ ತಲುಪಿದರೆ ಸೋಂಕಿನ ವಿರುದ್ಧ ಹೋರಾಡಲು ರೂಪುಗೊಂಡಿರುವ ದೇಹದ ಆಂತರಿಕ ವ್ಯವಸ್ಥೆಯು ದೇಹದ ಆರೋಗ್ಯಕರ ಜೀವಕೋಶಗಳನ್ನೇ ಕೊಲ್ಲುತ್ತಾ ಕೊನೆಗೆ ಸೋಂಕಿತನ ಜೀವವನ್ನೇ ತೆಗೆಯುತ್ತದೆ. ಪ್ರತಿವರ್ಷವು ಸೆಪ್ಸಿಸ್​ನಿಂದ 1.1 ಕೋಟಿ ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಸೂಕ್ಷ್ಮಜೀವಿಯು ರಕ್ತನಾಳಗಳ ಸೋಂಕು ಅನುಭವಿಸುವ ವ್ಯಕ್ತಿಗಳಿಗೆ ಮಾರಣಾಂತಿಕವಾಗಬಹುದು. ಅದರಲ್ಲಿಯೂ ಮೂತ್ರವನ್ನು ದೇಹದ ಹೊರಗೆ ಸಂಗ್ರಹಿಸುವ ಕ್ಯಾತೆಟ್ರಾ, ಅನ್ನನಾಳಕ್ಕೆ ಹೊರಗಿನಿಂದ ಪೈಪ್ ಹಾಕಿಕೊಂಡಿರುವವರು ಮತ್ತು ಉಸಿರಾಟಕ್ಕೂ ಟ್ಯೂಬ್ ಅಳವಡಿಸಿಕೊಂಡಿರುವ ರೋಗಿಗಳಿಗೆ ಅಪಾಯ ಹೆಚ್ಚು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವ ಸಂಸ್ಥೆ ಎಚ್ಚರಿಸಿದೆ. ‘ವಾತಾವರಣದ ಸಹಜ ಸ್ಥಿತಿಯಲ್ಲಿ ಬದುಕುವ ಸಾಮರ್ಥ್ಯ ಹೊಂದಿರುವ ಈ ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಸೋಂಕಿಗೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟ. ಶಿಲೀಂಧ್ರನಾಶಕ ಔಷಧಿಗಳೂ ಈ ಸೂಕ್ಷ್ಮಾಣು ಜೀವಿಯ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಲೈವ್​ ಸೈನ್ಸ್​ ವರದಿ ಮಾಡಿದೆ.

ಸೋಂಕು ಹರಡುವುದು ಹೇಗೆ? ಸಿ.ಔರಿಸ್ ಸೋಂಕು ಹೇಗೆ ಹರಡುತ್ತದೆ ಎನ್ನುವುದು ವಿಜ್ಞಾನಿಗಳ ಪಾಲಿಗೆ ಒಂದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ‘ವಾತಾವರಣದ ಬದಲಾವಣೆಯಿಂದಾಗಿ ಸಿ.ಔರಿಸ್ ಹೆಚ್ಚಿನ ಉಷ್ಣಾಂಶದಲ್ಲಿಯೂ ಬದುಕುವ ಸಾಮರ್ಥ್ಯ ಪಡೆದುಕೊಂಡಿದೆ. ಹೀಗಾಗಿಯೇ ಇದು ಮಾನವ ದೇಹ ಪ್ರವೇಶಿಸಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಯಾವುದೇ ಶಿಲೀಂಧ್ರ ಮಾನವ ದೇಹದಲ್ಲಿ ಹೆಚ್ಚು ಸಮಯ ಬದುಕುವುದಿಲ್ಲ. ಏಕೆಂದರೆ ಮನುಷ್ಯನ ದೇಹದ ತಾಪಮಾನವು ಯಾವುದೇ ಶಿಲೀಂಧ್ರಗಳು ಸಾಮಾನ್ಯವಾಗಿ ಬದುಕಬಲ್ಲ ತಾಪಮಾನಕ್ಕಿಂತಲೂ ಹೆಚ್ಚಾಗಿರುತ್ತದೆ. ‘ಈಗಾಗಲೇ ಸಿ.ಔರಿಸ್ ಸೋಂಕು ವಿಶ್ವದ ಮೂಲೆಮೂಲೆಗಳನ್ನು ತಲುಪಿದೆ. ಕಾಳ್ಗಿಚ್ಚಿನಂತೆ ಹರಡುತ್ತಿದೆ’ ಎಂದು ಸನ್ ದಿನಪತ್ರಿಕೆ ವರದಿ ಮಾಡಿ, ಎಚ್ಚರಿಸಿದೆ.

ಈ ಹಿಂದೆಯೂ ಸೋಂಕು ಕಾಣಿಸಿಕೊಂಡಿತ್ತೆ? ಸಿ.ಔರಿಸ್ ಸೋಂಕು 10 ವರ್ಷಗಳ ಹಿಂದೆಯೇ ಕೆಲ ಆಸ್ಪತ್ರೆಗಳಲ್ಲಿ ಪತ್ತೆಯಾಗಿತ್ತು. 2009ರಲ್ಲಿ ಮೊದಲ ಬಾರಿಗೆ ಜಪಾನ್​ನ ರೋಗಿಯೊಬ್ಬರಲ್ಲಿ ಈ ನಿಗೂಢ ಸೂಪರ್​ಬಗ್ ಪತ್ತೆಯಾಗಿತ್ತು. ಬ್ರಿಟನ್​ನ ಒಟ್ಟು 270 ಮಂದಿಯಲ್ಲಿ 2019ರವರೆಗೂ ಈ ಸೋಂಕು ಪತ್ತೆಯಾಗಿದೆ. ಸೋಂಕಿನಿಂದ 8 ರೋಗಿಗಳು ಮೃತಪಟ್ಟಿದ್ದರು. ಆದರೆ ಇದು ಬ್ರಿಟನ್​ಗೆ ಹೇಗೆ ಬಂತು ಎಂಬುದು ಮಾತ್ರ ಈವರೆಗೆ ತಿಳಿಯಲಿಲ್ಲ ಎಂದು ಬ್ರಿಟನ್​ನ ಸಾರ್ವಜನಿಕ ಆರೋಗ್ಯ ಇಲಾಖೆಯ ತಜ್ಞರು ಹೇಳಿದ್ದರು.

ಮುಂದಿನ ಮಹಾಪಿಡುಗು ಈಗಾಗಲೇ ಕಾಣಿಸಿಕೊಂಡಿದೆಯೇ? ಸಕ್ಕರೆ ಕಾಯಿಲೆಯಿಂದ ಕಾಲಿನ ಹುಣ್ಣು (ಅಲ್ಸರ್) ಅನುಭವಿಸುತ್ತಿರುವ ಜನರಲ್ಲಿ ಸಿ.ಔರಿಸ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಕೆನಡಾದ ಮೆಕ್​ಗಿಲ್ ವಿಶ್ವವಿದ್ಯಾಲಯದ ಡಾ.ಡೊನಾಲ್ಡ್​ ಶೆಫರ್ಡ್​ ಹೇಳಿದ್ದಾರೆ. ಬ್ರಿಟನ್​ಗೆ ಬಂದು-ಹೋಗಿ ಮಾಡುವ ಏಷ್ಯಾ ಮತ್ತು ಆಫ್ರಿಕಾ ದೇಶಗಳ ಜನರಲ್ಲಿಯೂ ಸೋಂಕು ಪತ್ತೆಯಾಗಿದೆ.

ಕೊರೊನಾವೈರಸ್​ ಪಿಡುಗು ವ್ಯಾಪಕವಾಗಿ ಹರಡಿದ ನಂತರ ವಿಜ್ಞಾನಿಗಳು ತಮ್ಮ ಗಮನವನ್ನು ಮುಂದಿನ ಮಹಾ ಪಿಡುಗನ್ನು ಮೊದಲೇ ಗುರುತಿಸುವ ಸಾಧ್ಯತೆಯ ಬಗ್ಗೆ ಕೇಂದ್ರೀಕರಿಸಿದರು. ಹೀಗಾಗಿ ಇಂಥದ್ದೊಂದು ಸೂಕ್ಷ್ಮಾಣುಜೀವಿಯ ಅಪಾಯ ಪತ್ತೆಯಾಗಿದೆ. ಒಮ್ಮೆ ಕೊರೊನಾ ವೈರಸ್ ವಿರುದ್ಧ ಹೆಣಗಿರುವ ಜಗತ್ತಿಗೆ ಮತ್ತೊಮ್ಮೆ ಅಂಥದ್ದೇ ಪರಿಸ್ಥಿತಿ ಕಾಣಿಸಿಕೊಂಡರೆ ಹೇಗೆ ನಿರ್ವಹಿಸಬೇಕು ಎಂಬ ಅಂದಾಜು ಬಂದಿದೆ. ಒಂದು ವೇಳೆ ಸೂಪರ್​ಬಗ್ ಸಹ ಮಹಾಪಿಡುಗಾಗಿ ಕಾಡಲು ಆರಂಭಿಸಿದರೆ ಅದನ್ನು ನಿರ್ವಹಿಸಲು ಸಮಾಜ ಮತ್ತು ಸರ್ಕಾರಗಳು ಇದೇ ಮಾದರಿಯಲ್ಲಿ ಯೋಚಿಸಬೇಕು ಎಂದು ಅವರು ಸಲಹೆ ಮಾಡುತ್ತಾರೆ.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ 4 ದಿನದಿಂದ ಕೊರೊನಾ ಕೇಸ್ ಹೆಚ್ಚಳ

ಇದನ್ನೂ ಓದಿ: ಕೊರೊನಾ ಸೋಂಕು ವಿಜಯಪುರಕ್ಕೆ ಕಾಲಿಡುವುದಕ್ಕೂ ಮೊದಲೇ ಹೋರಾಟಕ್ಕೆ ಸಜ್ಜಾಗಿದ್ದರು ಡಾ.ಚೆನ್ನಮ್ಮಾ ಕಟ್ಟಿ..

Published On - 5:07 pm, Thu, 18 March 21