Natural sleep remedies: ರಾತ್ರಿ ಬಾಳೆಹಣ್ಣು ತಿಂದರೆ ನಿದ್ದೆ ಚೆನ್ನಾಗಿ ಬರುತ್ತದೆ ಎಂಬುದು ನಿಜವೇ?
ನಿದ್ರಾಹೀನತೆ ಸಮಸ್ಯೆ: ಬಾಳೆಹಣ್ಣುಗಳು ಪೌಷ್ಠಿಕಾಂಶಗಳ ಆಗರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಬಾಳೆಹಣ್ಣು ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಸಕ್ತಿದಾಯಕ ಸಂಗತಿ ಬಿತ್ತರವಾಗುತ್ತಿದ್ದು, ಈ ಮಾಹಿತಿ ನಿಜವೋ, ಅಲ್ಲವೋ ಎಂಬುದನ್ನು ತಿಳಿಯಲು ಅಧ್ಯಯನವೊಂದು ನಡೆದಿದ್ದು ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಾಳೆಹಣ್ಣು (Banana) ತಿಂದರೆ ನಿದ್ರೆ ಚೆನ್ನಾಗಿ ಬರುತ್ತದೆ ಎಂಬ ಸುದ್ದಿ ಹರಡಿತ್ತು. ಈ ಅಭ್ಯಾಸ ಅನುಸರಿಸುವವರು ಕೂಡ ಇದು ನಿಜ ಎಂದಿದ್ದರು. ಅದರಲ್ಲಿಯೂ ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ (Potassium), ಮೆಗ್ನೀಸಿಯಮ್ ಮತ್ತು ಟ್ರಿಪ್ಟೋಫಾನ್ ನಂತಹ ಪೋಷಕಾಂಶಗಳಿರುವುದರಿಂದ ಇದನ್ನು ಸೇವನೆ ಮಾಡಿದರೆ ಉತ್ತಮ ನಿದ್ರೆ (Sleep) ಮಾಡುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಈ ಪೋಷಕಾಂಶಗಳು ದೇಹವನ್ನು ವಿಶ್ರಾಂತಿಗೊಳಿಸುತ್ತವೆ ಮತ್ತು ನಿದ್ರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ, ಇದು ಸತ್ಯವೇ? ನಿಜವಾಗಿಯೂ ಬಾಳೆಹಣ್ಣು ತಿಂದರೆ ಚೆನ್ನಾಗಿ ನಿದ್ರೆ ಮಾಡಬಹುದೇ ಎಂಬ ಗೊಂದಲ ಹಲವರನ್ನು ಕಾಡುತ್ತಿದ್ದು, ಇದಕ್ಕೆ ಪೂರಕವಾಗಿ ನ್ಯಾಷನಲ್ ಮೆಡಿಸಿನ್ ನ ಈ ಬಗ್ಗೆ ಅಧ್ಯಯನ (Study) ಮಾಡಿದ್ದು ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
ಬಾಳೆಹಣ್ಣು ನಿದ್ರೆ ಮಾಡಲು ಹೇಗೆ ಸಹಾಯ ಮಾಡುತ್ತದೆ?
ಈ ಹಣ್ಣಿನಲ್ಲಿರುವ ಟ್ರಿಪ್ಟೋಫಾನ್ ಎಂಬ ಅಂಶವು ದೇಹದಲ್ಲಿ ಸೆರೊಟೋನಿನ್ ಅನ್ನು ಮೆಲಟೋನಿನ್ ಆಗಿ ಪರಿವರ್ತಿಸುತ್ತದೆ ಮತ್ತು ಒಳ್ಳೆಯ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಕಾರಣಗಳಿಗಾಗಿ, ರಾತ್ರಿ ಸಮಯದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.
ಅಧ್ಯಯನದಲ್ಲಿ ಹೇಳಿರುವುದೇನು?
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾಳೆಹಣ್ಣು ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರಬಹುದು. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಅಥವಾ ಎಲ್ಲರಲ್ಲಿಯೂ ಒಂದೇ ರೀತಿಯಾಗಿ ಕೆಲಸ ಮಾಡುವುದಿಲ್ಲ. ಅವರವರ ಆಹಾರ ಪದ್ಧತಿ, ಮಲಗುವ ವಾತಾವರಣ ಮತ್ತು ವೈಯಕ್ತಿಕ ಜೀವನಶೈಲಿಯು ನಿದ್ರೆಯ ಗುಣಮಟ್ಟದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಕೆಲವರಿಗೆ, ಬಾಳೆಹಣ್ಣು ಸೇವನೆ ಮಾಡುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರಯೋಜನವಾಗಬಹುದು. ಅಲ್ಲದೆ ನಿದ್ರೆ ಮಾತ್ರೆಗಳನ್ನು ಸೇವನೆ ಮಾಡುವವರಿಗೆ ಇದು ಒಳ್ಳೆಯದು. ಏಕೆಂದರೆ ಪ್ರತಿನಿತ್ಯ ಮಾತ್ರೆ ಸೇವನೆ ಮಾಡಿ ನಿದ್ರೆ ಮಾಡುವುದು ಒಳ್ಳೆಯದಲ್ಲ ಹಾಗಾಗಿ ಈ ರೀತಿ ಬಾಳೆಹಣ್ಣುಗಳನ್ನು ಸೇವನೆ ಮಾಡಬಹುದು.
ಇದನ್ನೂ ಓದಿ: ಗೋಡಂಬಿ ಸೇವನೆ ಮಾಡಿದರೆ ದೇಹದ ತೂಕ ಹೆಚ್ಚಾಗುತ್ತದೆಯೇ ಅಥವಾ ಕಡಿಮೆಯಾಗುತ್ತಾ ತಿಳಿದುಕೊಳ್ಳಿ
ನೀವು ಕೂಡ ಈ ಅಭ್ಯಾಸ ರೂಢಿಸಿಕೊಳ್ಳುತ್ತೀರಾ?
ಬಾಳೆಹಣ್ಣು ಆರೋಗ್ಯಕರ ಆಹಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ರಾತ್ರಿ ಸಮಯದಲ್ಲಿ ತಿನ್ನುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಆದರೆ, ನಿದ್ರೆಯ ಸಮಸ್ಯೆಗಳಿಗೆ ಪರಿಹಾರವಾಗಿ ಇದನ್ನು ಸಂಪೂರ್ಣವಾಗಿ ಅವಲಂಬಿಸಬಾರದು. ಅದಲ್ಲದೆ ಇದು ಎಲ್ಲರಿಗೂ ಸೂಕ್ತವಲ್ಲ. ಸಮತೋಲಿತ ಆಹಾರ, ನಿಯಮಿತ ವೇಳಾಪಟ್ಟಿ ಮತ್ತು ಒತ್ತಡ ಮುಕ್ತ ಮನಸ್ಸು ಇವೆಲ್ಲವೂ ರಾತ್ರಿ ಒಳ್ಳೆಯ ನಿದ್ರೆಗೆ ಬಹಳ ಮುಖ್ಯ. ನೀವು ಇವುಗಳನ್ನು ಒಮ್ಮೆ ಪ್ರಯತ್ನಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ