ಜೈನರು ಅನುಸರಿಸುವ ಈ ಆಹಾರಕ್ರಮ ಪಾಲನೆ ಮಾಡಿದರೆ ರೋಗ ಹತ್ತಿರವೂ ಬರುವುದಿಲ್ಲ
ಊಟದ ಸಮಯವು ಬಹಳ ಮಹತ್ವದ್ದಾಗಿರುತ್ತದೆ. ಸಂಜೆ 7 ಗಂಟೆಯ ಮೊದಲು ಊಟ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಅಭ್ಯಾಸಗಳು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ತಡವಾಗಿ ಊಟ ಮಾಡುವುದರಿಂದ ಉಂಟಾಗುವ ಆಹಾರ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಜೈನರ ಆಹಾರ ಪದ್ದತಿ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.

ಆರೋಗ್ಯವಾಗಿರಲು ನಾವು ಆಹಾರ (Food) ಸೇವನೆ ಮಾಡುವ ಸಮಯ ಕೂಡ ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನವರು ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಊಟವನ್ನು ಬೇಗ ಮಾಡಬೇಕು ಇದರಿಂದ ಅನೇಕ ರೀತಿಯ ಆರೋಗ್ಯ (Health) ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಮನ್ಯವಾಗಿ ಜೈನರ (Jain) ಆಹಾರ ಪದ್ದತಿಯನ್ನು ನೀವು ಗಮನಿಸಿರಬಹುದು. ಅವರು ಸೂರ್ಯಾಸ್ತವಾಗುವುದರೊಳಗೆ ಊಟ (Meal) ಮಾಡುತ್ತಾರೆ. ಬಳಿಕ ಯಾವುದೇ ರೀತಿಯ ಆಹಾರ ಸೇವನೆ ಮಾಡುವುದಿಲ್ಲ. ಈ ರೀತಿ ಮಾಡುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಇದೊಂದು ಸಣ್ಣ ಅಭ್ಯಾಸ ಎನಿಸಿದರೂ ಕೂಡ ಇದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಹಾಗಾದರೆ ಬೇಗ ಊಟ ಮಾಡುವುದರಿಂದ ದೇಹಕ್ಕೆ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ರಾತ್ರಿ ಊಟ ಬೇಗ ಮಾಡಬೇಕು ಎನ್ನಲು ಇಲ್ಲಿದೆ ಕಾರಣ;
ಸಂಜೆಯ ನಂತರ, ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ ಅಂದರೆ ಚಯಾಪಚಯ ಕ್ರಿಯೆ ಸಜೆಯಾದಂತೆ ಕ್ರಮೇಣ ಕಡಿಮೆಯಾಗುತ್ತದೆ. ಆಗ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ, ಅದು ದೇಹದಲ್ಲಿ ಕೊಬ್ಬಾಗಿ ಬದಲಾಗುವ ಅಪಾಯವಿರುತ್ತದೆ. ಇದು ತೂಕ ಹೆಚ್ಚಳ, ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ರಾತ್ರಿಯ ಊಟ ಬೇಗ ಮಾಡುವುದರಿಂದ ಈ ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ. ದೇಹ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಹಾಗಾಗಿ ಈ ರೀತಿಯ ಅಭ್ಯಾಸ ನಾವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ನಮ್ಮ ದೇಹಕ್ಕೆ ರಾತ್ರಿ ಸಮಯದಲ್ಲಿ ವಿಶ್ರಾಂತಿ ಅವಶ್ಯಕತೆ ಇರುತ್ತದೆ. ಹಾಗಾಗಿ ಊಟ ವಿಳಂಬವಾದರೆ, ದೇಹವು ವಿಶ್ರಾಂತಿಯ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಸಂಜೆ ಸಮಯದಲ್ಲಿ ಆಹಾರ ಸೇವನೆ ಮಾಡಿದಾಗ ದೇಹವು ಚೆನ್ನಾಗಿ ವಿಶ್ರಾಂತಿ ಪಡೆಯುತ್ತದೆ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ತಡೆಯುತ್ತದೆ. ಅದರಲ್ಲಿಯೂ ರಾತ್ರಿ ಸಮಯದಲ್ಲಿ ಮಾಡುವ ನಿದ್ರೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ. ದೇಹದಲ್ಲಿನ ಲೆಪ್ಟಿನ್ ಮತ್ತು ಗ್ರೆಲಿನ್ ಎಂಬ ಹಾರ್ಮೋನುಗಳಿರುತ್ತದೆ. ಇದು ಹಸಿವು ಮತ್ತು ಸಂತೃಪ್ತಿಯನ್ನು ನಿಯಂತ್ರಿಸುತ್ತವೆ. ಹಾಗಾಗಿ ಊಟ ವಿಳಂಬವಾದಾಗ ಈ ಹಾರ್ಮೋನುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿದ್ರೆಗೆ ಅಗತ್ಯವಾದ ಮೆಲಟೋನಿನ್ ಎಂಬ ಹಾರ್ಮೋನ್ ನ ಕಾರ್ಯವೂ ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ, ನೀವು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಆಯಾಸವಾಗುತ್ತದೆ.
ಇದನ್ನೂ ಓದಿ: ಅಡುಗೆಯಲ್ಲಿ ಎಣ್ಣೆ ಬಳಕೆಯನ್ನು ಕಡಿಮೆ ಮಾಡಿದರೆ ಬೇಡ ಎಂದರೂ ತೆಳ್ಳಗಾಗುತ್ತೀರಿ
ಮಧುಮೇಹವನ್ನು ತಡೆಯುತ್ತದೆ
ನೀವು ತಡವಾಗಿ ಊಟ ಮಾಡುವವರಾಗಿದ್ದು ನಿಮ್ಮ ಆಹಾರದಲ್ಲಿ ಅತಿಯಾದ ಕಾರ್ಬೋಹೈಡ್ರೇಟ್ ಗಳಿದ್ದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರಾತ್ರಿ, ಊಟವನ್ನು ಮೊದಲೇ ಮಾಡಿದ್ದರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಉತ್ತಮವಾಗಿರುತ್ತದೆ. ಈ ಕ್ರಿಯೆಯು ಮಧುಮೇಹದಂತಹ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಸಂಜೆ 7 ಗಂಟೆಯ ಮೊದಲು ಊಟ ಮಾಡುವ ಅಭ್ಯಾಸ ಅನೇಕ ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಮಧ್ಯರಾತ್ರಿಯಲ್ಲಿ ಹಸಿವಾಗುವುದು ಮತ್ತು ಬೇಡದ ಆಹಾರಗಳ ಸೇವನೆ ಮಾಡುವುದನ್ನು ಇದು ತಡೆಯುತ್ತದೆ. ಹಾಗಾಗಿ ಜೈನರು ಈಗಲೂ ಅನುಸರಿಸುವ ಈ ಪದ್ದತಿಯನ್ನು ಸಾಧ್ಯವಾದರೆ ಅಳವಡಿಸಿಕೊಳ್ಳಿ, ಆರೋಗ್ಯವಾಗಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ