
ಮೊಳಕೆಕಾಳುಗಳು ಆರೋಗ್ಯಕರ ಆಹಾರದ ಪ್ರಮುಖ ಭಾಗವಾಗಿವೆ. ಇವುಗಳಲ್ಲಿ ಪ್ರೋಟೀನ್, ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ದೊರೆಯುತ್ತವೆ. ಜೀರ್ಣಕ್ರಿಯೆ, ದೇಹದ ಪೋಷಣೆ ಮತ್ತು ತೂಕ ನಿರ್ವಹಣೆಗೆ ಇವು ಸಹಾಯ ಮಾಡಬಹುದು. ಆದರೆ ಮೊಳಕೆಕಾಳುಗಳನ್ನು ಸರಿಯಾಗಿ ತಯಾರಿಸದೆ ಹಸಿಯಾಗಿ ಸೇವಿಸುವುದರಿಂದ ಕೆಲವರಿಗೆ ಆರೋಗ್ಯದ ಅಪಾಯ ಉಂಟಾಗಬಹುದು. ವಿಶೇಷವಾಗಿ ಕೆಲವು ವರ್ಗದವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು, ಸೇವನೆ ಮಾಡುವಾಗ ಯಾರು ಎಚ್ಚರ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಮೊಳಕೆಕಾಳುಗಳನ್ನು ಮೊಳಕೆಯೊಡೆಯಲು ಬೆಚ್ಚಗಿನ ಮತ್ತು ತೇವಾಂಶವಿರುವ ವಾತಾವರಣದಲ್ಲಿ ಇಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಲ್ಮೊನೆಲ್ಲಾ ಮತ್ತು ಇ.ಕೋಲಿ ಸೇರಿದಂತೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಕಲುಷಿತ ನೀರು ಅಥವಾ ಸ್ವಚ್ಛತೆಯ ಕೊರತೆಯೂ ಆಹಾರ ವಿಷಬಾಧೆಗೆ ಕಾರಣವಾಗಬಹುದು.
ಗರ್ಭಿಣಿಯರು: ಗರ್ಭಿಣಿಯರು ಕಚ್ಚಾ ಅಥವಾ ಅರ್ಧ ಬೇಯಿಸಿದ ಮೊಳಕೆಕಾಳುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಸೋಂಕು ಉಂಟಾದರೆ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯವಾಗಬಹುದು.
ಚಿಕ್ಕ ಮಕ್ಕಳು: ಮಕ್ಕಳ ರೋಗನಿರೋಧಕ ವ್ಯವಸ್ಥೆ ಸಂಪೂರ್ಣವಾಗಿ ಬೆಳವಣಿಗೆಯಾಗದಿರುವುದರಿಂದ ಕಚ್ಚಾ ಮೊಳಕೆಕಾಳುಗಳಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದನ್ನೂ ಓದಿ: ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
ವೃದ್ಧರು: ವಯಸ್ಸಾದವರು ಚೆನ್ನಾಗಿ ಬೇಯಿಸಿದ ಮೊಳಕೆಕಾಳುಗಳನ್ನು ಸೇವಿಸುವುದು ಉತ್ತಮ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು: ದೀರ್ಘಕಾಲದ ಕಾಯಿಲೆಗಳು ಅಥವಾ ಕೆಲವು ಔಷಧಿಗಳ ಕಾರಣದಿಂದ ರೋಗನಿರೋಧಕ ಶಕ್ತಿ ಕುಂದಿರುವವರು ಕಚ್ಚಾ ಮೊಳಕೆಕಾಳುಗಳನ್ನು ತಪ್ಪಿಸುವುದು ಸೂಕ್ತ.
ಜೀರ್ಣಕ್ರಿಯೆ ಸಮಸ್ಯೆ ಇರುವವರು: ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆ ಇರುವವರಿಗೆ ಹೆಚ್ಚಿನ ಪ್ರಮಾಣದ ಮೊಳಕೆಕಾಳುಗಳು ತೊಂದರೆ ಉಂಟುಮಾಡಬಹುದು. ಇವರು ಚೆನ್ನಾಗಿ ಬೇಯಿಸಿ ಮಿತವಾಗಿ ಸೇವಿಸಬೇಕು.
ಕೆಲವು ಮೊಳಕೆಕಾಳುಗಳಲ್ಲಿ ವಿಟಮಿನ್ ಕೆ ಇರುತ್ತದೆ. ವಾರ್ಫರಿನ್‌ನಂತಹ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಔಷಧಿ ಸೇವಿಸುವವರು ವಿಟಮಿನ್ ಕೆ ಇರುವ ಆಹಾರವನ್ನು ಏಕಾಏಕಿ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಸರಿಯಲ್ಲ. ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಇನ್ನು ಬ್ರೊಕೊಲಿ, ಮೂಲಂಗಿ ಮತ್ತು ಸಾಸಿವೆ ಕುಟುಂಬದ ಮೊಳಕೆಗಳಲ್ಲಿ ಗೈಟ್ರೋಜನ್ ಅಂಶಗಳಿರಬಹುದು. ಆದರೆ ಸಾಮಾನ್ಯ ಪ್ರಮಾಣದಲ್ಲಿ ಬೇಯಿಸಿ ಸೇವಿಸುವುದರಿಂದ ಹೆಚ್ಚಿನವರಿಗೆ ಸಮಸ್ಯೆಯಾಗುವುದಿಲ್ಲ. ಥೈರಾಯ್ಡ್ ಸಮಸ್ಯೆ ಇರುವವರು ಅತಿಯಾದ ಕಚ್ಚಾ ಸೇವನೆಯನ್ನು ತಪ್ಪಿಸುವುದು ಉತ್ತಮ.
ಮೊಳಕೆಕಾಳುಗಳನ್ನು ಸ್ವಚ್ಛ ನೀರಿನಿಂದ ತೊಳೆಯಬೇಕು. ಸಾಧ್ಯವಾದಷ್ಟು ಚೆನ್ನಾಗಿ ಬೇಯಿಸಿ ಸೇವಿಸಬೇಕು. ತೇವಾಂಶವಿರುವ ಪರಿಸರದಲ್ಲಿ ಹೆಚ್ಚು ಸಮಯ ಇಡಬಾರದು. ದುರ್ವಾಸನೆ ಅಥವಾ ಅಸಹಜ ಬದಲಾವಣೆ ಕಂಡುಬಂದರೆ ಬಳಸಬಾರದು. ಒಟ್ಟಿನಲ್ಲಿ, ಮೊಳಕೆಕಾಳುಗಳು ಪೌಷ್ಟಿಕ ಆಹಾರವಾಗಿದ್ದರೂ ಅವುಗಳನ್ನು ಸರಿಯಾದ ವಿಧಾನದಲ್ಲಿ ತಯಾರಿಸಿ ಸೇವಿಸುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ