ಪದೇಪದೆ ಹೊರಗಡೆ ಊಟ-ತಿಂಡಿ ಮಾಡ್ತಿದ್ರೆ ಜೀವಕ್ಕೇ ಸಂಚಕಾರ.. ! ಯಾವುದಕ್ಕೂ ಮಿತಿಯಲ್ಲಿರಲಿ, ಮನೆಯೂಟಕ್ಕೇ ಪ್ರಾಶಸ್ತ್ಯವಿರಲಿ
ಮನೆಯ ಆಹಾರಕ್ಕಿಂತ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಕೊಬ್ಬು, ಸೋಡಿಯಂನಂತಹ ಅಂಶಗಳು ಹೆಚ್ಚಿರುತ್ತವೆ. ಆದರೆ ಹಣ್ಣು, ತರಕಾರಿ, ಕಾಳುಗಳು ಮತ್ತಿತರ ದೇಹದ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳ ಪ್ರಮಾಣ ಕಡಿಮೆ ಇರುತ್ತದೆ.
ವಾಷಿಂಗ್ಟನ್: ಮನೆಯೂಟ ರುಚಿ ಇರೋದಿಲ್ಲ, ಅಡುಗೆ ಮಾಡಲು ಬೇಸರ.. ಕೆಲಸದ ಮಧ್ಯೆ ಅಡುಗೆ ಮಾಡಲು ಸಮಯವಿಲ್ಲ.. ಹೀಗೆ ನೂರೆಂಟು ನೆಪ ಹೇಳಿ ಹೋಟೆಲ್, ರೆಸ್ಟೋರೆಂಟ್ಗಳಿಗೆ ಊಟಕ್ಕೆ ಹೋಗುವವರಿಗೆ ಒಂದು ಎಚ್ಚರಿಕೆ. ಪದೇಪದೆ ಹೊರಗೆ ಊಟ-ತಿಂಡಿ ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದು ಸ್ಪಷ್ಟಪಡಿಸಿದೆ. ಎಲ್ಲರಿಗೂ ಗೊತ್ತಿದೆ, ಹೊರಗೆ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಆದರೇನು ಮಾಡೋದು? ಅದನ್ನು ಬಿಡಲು ಮಾತ್ರ ಸಾಧ್ಯವಾಗುತ್ತಿಲ್ಲ. ಹೀಗೆ ಹೊರಗೆ ತಿನ್ನೋದು, ಊಟ ಮಾಡುವುದು ಜಗತ್ತಿನಾದ್ಯಂತ ಬೆಳೆದುಬಂದ ಒಂದು ಪರಿಪಾಠವಾಗಿಬಿಟ್ಟಿದೆ.
ಹೊರಗೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುದು ಗೊತ್ತಿದ್ದರೂ ನಿಜಕ್ಕೂ ಯಾವ ರೀತಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂಬ ಬಗ್ಗೆ ಅಷ್ಟೊಂದು ಆಳವಾದ ಅಧ್ಯಯನಗಳು ನಡೆದಿಲ್ಲ. ಇದೀಗ ಎಲ್ಸೆವಿಯರ್ ಸಂಸ್ಥೆ, ಜರ್ನಲ್ ಆಫ್ ಅಕಾಡೆಮಿ ಆಫ್ ನ್ಯೂಟ್ರಿಷನ್ ಆ್ಯಂಡ್ ಡಯೆಟಿಕ್ಸ್ ನಲ್ಲಿ ಪ್ರಕಟಿಸಿದ ವರದಿ ಕೆಲವು ವಿಷಯಗಳನ್ನು ಬಿಚ್ಚಿಟ್ಟಿದೆ. ಹೀಗೆ ಪದೇಪದೆ ಹೊರಗಡೆ ತಿನ್ನುತ್ತಿದ್ದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು , ಕ್ಯಾನ್ಸರ್ ರೋಗಗಳು ಬರುವ ಅಪಾಯ ಹೆಚ್ಚು. ಅಷ್ಟೇ ಅಲ್ಲ, ಸಾವಿನ ಅಪಾಯವೂ ಅಧಿಕ ಎಂದು ಅಧ್ಯಯನದಿಂದ ಗೊತ್ತಾಗಿದೆ.
ಅಮೆರಿಕದಲ್ಲಿ ಮನೆಯಿಂದ ಹೊರಗೆ ಊಟ-ತಿಂಡಿ ಸೇವನೆ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 1977-78ರಲ್ಲಿ ಅಂದಾಜು ಶೇ.17 ರಷ್ಟು ಅಮೆರಿಕನ್ನರು ಮಾತ್ರ ಹೊರಗಡೆ ಆಹಾರ ಸೇವನೆ ಮಾಡುತ್ತಿದ್ದರು. ಅದರು 2011-12ರಲ್ಲಿ ಶೇ.34ಕ್ಕೆ ಏರಿಕೆಯಾಯಿತು ಎಂದು ಯುಎಸ್ನ ಕೃಷಿ ಇಲಾಖೆ ಇತ್ತೀಚೆಗೆ ತಿಳಿಸಿದೆ. ಅಲ್ಲದೆ, ರೆಸ್ಟೋರೆಂಟ್, ಹೋಟೆಲ್ಗಳ ಸಂಖ್ಯೆಯೂ ಹೆಚ್ಚುತ್ತ ಹೋಯಿತು ಎಂದು ಹೇಳಿದೆ.
ಮನೆಯ ಆಹಾರಕ್ಕಿಂತ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಕೊಬ್ಬು, ಸೋಡಿಯಂನಂತಹ ಅಂಶಗಳು ಹೆಚ್ಚಿರುತ್ತವೆ. ಆದರೆ ಹಣ್ಣು, ತರಕಾರಿ, ಕಾಳುಗಳು ಮತ್ತಿತರ ದೇಹದ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳ ಪ್ರಮಾಣ ಕಡಿಮೆ ಇರುತ್ತದೆ. ನಾರಿನಾಂಶ ಮತ್ತು ಉತ್ಕರ್ಷಣ ನಿರೋಧಕ ಅಂಶಗಳೂ ಸಹ ಇರುವುದಿಲ್ಲ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅದಕ್ಕೆ ಪುರಾವೆಗಳೂ ಸಿಕ್ಕಿವೆ ಎಂದು ಜರ್ನಲ್ನಲ್ಲಿ ಪ್ರಕಟವಾಗಿದೆ.
ಹೀಗಾಗಿ ಪದೇಪದೆ ಹೊರಗೆ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ತಿನ್ನುವುದರಿಂದ ಬೊಜ್ಜು, ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು ಬರುತ್ತವೆ. ಕ್ಯಾನ್ಸರ್ಗೂ ಕಾರಣ ಆಗಬಹುದು ಎಂದು ಯುಎಸ್ಎಯ ಅಯೋವಾ ಯೂನಿವರ್ಸಿಟಿಯ ಪಬ್ಲಿಕ್ ಹೆಲ್ತ್ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವೀ ಬಾವೋ ತಿಳಿಸಿದ್ದಾರೆ. ಇವರು ಸಂಶೋಧನಾ ವಿಭಾಗದ ಮುಖ್ಯ ತನಿಖಾಧಿಕಾರಿಯಾಗಿದ್ದರು. ಇನ್ನು ಅಧ್ಯಯನದಲ್ಲಿ 20 ವರ್ಷ ಮೇಲ್ಪಟ್ಟ ಸುಮಾರು 35,084 ಜನರನ್ನು ಒಳಗೊಳ್ಳಲಾಗಿತ್ತು. ಅವರೊಂದಿಗೆ ಮುಖಾಮುಖಿ ಸಂದರ್ಶನವನ್ನೂ ನಡೆಸಿ, ಆಹಾರ ಕ್ರಮ, ಹೊರಗೆ ತಿನ್ನುವ ಪ್ರಮಾಣ, ಅವರು ಹೆಚ್ಚಾಗಿ ಸೇವಿಸುವ ಆಹಾರದ ಬಗ್ಗೆಯೂ ಕೇಳಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: Health Tips: ಲಾಕ್ಡೌನ್ನಲ್ಲಿ ತೂಕ ಹೆಚ್ಚಿಸಿಕೊಂಡ್ರಾ? ಆರೋಗ್ಯಕರವಾಗಿ ತೂಕ ಇಳಿಸಲು ಇಲ್ಲಿದೆ 6 ಅಂಶಗಳು