Fungal skin infections: ಫಂಗಲ್ ಇನ್ಫೆಕ್ಷನ್ ಹೆಚ್ಚಳ; ಸಾಮಾನ್ಯ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ ರೋಗಿ, ತಜ್ಞರ ಆತಂಕ!
ಕಳೆದ 7 ರಿಂದ 8 ವರ್ಷಗಳಲ್ಲಿ ಪುನರಾವರ್ತಿತ ಫಂಗಲ್ ಇನ್ಫೆಕ್ಷನ್ಗಳ ಹರಡುವಿಕೆ ರೋಗಿಗಳಲ್ಲಿ ಹೆಚ್ಚಾಗಿದೆ. ಕಳೆದ ಹಲವು ವರ್ಷಗಳಲ್ಲಿ ಸಾಮಾನ್ಯ ಸಂಖ್ಯೆಗಿಂತ ಕನಿಷ್ಠ 30 ರಿಂದ 40% ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೆ ಸಾಮಾನ್ಯ ಔಷಧಿಗಳಿಗೆ ಈ ಸೋಂಕು ಈಗ ಪ್ರತಿಕ್ರಿಯಿಸುತ್ತಿಲ್ಲ ಎಂಬುದೇ ತಜ್ಞರ ಆತಂಕವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಫಂಗಲ್ (Fungal) ಸೋಂಕು ಮಾನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತದ್ದು. ದೇಹದಲ್ಲಿ ತೇವಾಂಶ ಅಧಿಕವಾಗಿರುವ ಪ್ರದೇಶಗಳಲ್ಲಿ ಈ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಇನ್ನು ಶ್ವಾಸಕೋಶ, ಮೆದುಳಿಗೆ ಫಂಗಸ್ಸಿನ ಸೋಂಕು ತಗುಲಿದರೆ ಅಪಾಯಕಾರಿ. ಇವು ಹೆಚ್ಚಾಗಿ ಚರ್ಮದ ಮೂಲಕ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚರ್ಮದ ಸ್ವಚ್ಛತೆಯ ಕಡೆಗೆ ಅತ್ಯಂತ ಹೆಚ್ಚು ಗಮನ ಹರಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಡೆದ ಅಧ್ಯಯನಗಳು ಈ ಬಗ್ಗೆ ಹೆಚ್ಚಿನ ಆತಂಕ ಮೂಡಿಸಿದೆ. ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಜೊತೆಗೆ, ಇದಕ್ಕೆ ಸಂಬಂಧಿಸಿದಂತೆ ಕೆಲವು ತಜ್ಞರು ಅಭಿಪ್ರಾಯಗಳನ್ನು ತಿಳಿಸಿದ್ದು, ನೈಜ ಘಟನೆಗಳನ್ನು ಆದರಿಸಿ ಸೋಂಕು ಎಷ್ಟು ತೀವ್ರವಾದದ್ದು ಎಂಬುದನ್ನು ತಿಳಿಸಿದ್ದಾರೆ.
ಪ್ರತೀದಿನ ಬೂಟುಗಳನ್ನು ಧರಿಸುವ ಒಬ್ಬ 37 ವರ್ಷದ ವ್ಯಕ್ತಿ, ಚಿತ್ತರಂಜನ್ ದಾಸ್ (ಹೆಸರು ಬದಲಾಯಿಸಲಾಗಿದೆ) ಅವರ ಬಲಗಾಲಿನ ಕಾಲ್ಬೆರಳುಗಳ ನಡುವೆ ತೀವ್ರ ತುರಿಕೆ ಕಾಣಿಸಿಕೊಂಡಿದ್ದರಿಂದ ಅವರು ಗಾಬರಿಗೊಂಡರು. ಬಳಿಕ ಕಾಲ್ಬೆರಳುಗಳ ಮಧ್ಯದಲ್ಲಿ ಸಣ್ಣ ಕೆಂಪು ತೇಪೆಗಳನ್ನು ಸಹ ಗಮನಿಸಿದರು, ಇದು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಾಯಿತು. ರೋಗಲಕ್ಷಣಗಳು ಉಲ್ಬಣಗೊಂಡಾಗ, ಅವರು ಸ್ನೇಹಿತನ ಸಲಹೆಯನ್ನು ಕೇಳಿದರು ಮತ್ತು ಫಾರ್ಮಸಿಯಿಂದ ಮುಲಾಮು ತಂದರು. ಇದು ಆರಂಭದಲ್ಲಿ ಸಹಾಯ ಮಾಡಿತು. ಆದರೆ ಎರಡು ವಾರಗಳ ನಂತರ, ಅವು ಮತ್ತೆ ಕಾಣಿಸಿಕೊಂಡವು. ಆ ಬಳಿಕ ಅವರು ಚರ್ಮರೋಗ ತಜ್ಞರನ್ನು ಭೇಟಿಯಾದರು, ವೈದ್ಯರು ಅವರನ್ನು ಪರೀಕ್ಷಿಸಿದರು ಕೆಲವು ಮಾದರಿಗಳನ್ನು ತೆಗೆದುಕೊಂಡರು.
ಚರ್ಮದ ಮೇಲೆ ಪರಿಣಾಮ ಬೀರುವ ಶಿಲೀಂಧ್ರದ ಅಥವಾ ಫಂಗಲ್ (ಡರ್ಮಟೊಫೈಟ್) ಮಾದರಿಗೆ ಧನಾತ್ಮಕವಾಗಿತ್ತು, ನಿರ್ವಹಣಾ ಪ್ರೋಟೋಕಾಲ್ ಬಗ್ಗೆ ಅವರಿಗೆ ಭರವಸೆ ನೀಡಲಾಯಿತು ಮತ್ತು ಪಾದರಕ್ಷೆಗಳು, ಸಾಕ್ಸ್ ಸೇರಿದಂತೆ ಪಾದದ ಆರೈಕೆಯ ಬಗ್ಗೆ ಸಲಹೆ ನೀಡಲಾಯಿತು. ಅವರಿಗೆ ಸುಮಾರು ಎಂಟು ವಾರಗಳ ಕಾಲ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿತ್ತು ಎಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಐಸಿಎಂಆರ್ ದಕ್ಷಿಣ ವಲಯ ಎಎಂಡಿಆರ್ಸಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಮತ್ತು ಪ್ರಧಾನ ತನಿಖಾಧಿಕಾರಿ ಡಾ. ಜಯಂತಿ ಸವಿಯೋ ಹೇಳಿದ್ದಾರೆ. ಜೊತೆಗೆ ಶಿಲೀಂಧ್ರಗಳಿಂದ ಉಂಟಾಗುವ ಡರ್ಮಟೊಫೈಟೋಸಿಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ ಎಂದಿದ್ದಾರೆ.
ಮಳೆಗಾಲದಲ್ಲಿ ಚರ್ಮದ ಸೋಂಕು ಗಮನಾರ್ಹವಾಗಿ ಹೆಚ್ಚಾಗಿದೆ. ರೋಗಿಗಳು ವ್ಯಾಪಕವಾಗಿ ಸೋಂಕಿನೊಂದಿಗೆ ಆಸ್ಪತ್ರೆಗೆ ಬರುತ್ತಿದ್ದಾರೆ, ಅದು ದೇಹದ ದೊಡ್ಡ ಪ್ರದೇಶಗಳನ್ನು ಆವರಿಸಿಕೊಳ್ಳುತ್ತಿದ್ದು ನಿಯಮಿತ ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಬೆಂಗಳೂರಿನ ಅಬ್ರಹಾಮ್ಸ್ ಸ್ಕಿನ್ & ಹೇರ್ ಕ್ಲಿನಿಕ್ನ ಚರ್ಮರೋಗ ತಜ್ಞ ಡಾ. ಅನಿಲ್ ಅಬ್ರಹಾಂ ತಿಳಿಸಿದ್ದಾರೆ. ಅವರು ತಮ್ಮ 30 ವರ್ಷಗಳ ಅವಧಿಯಲ್ಲಿ ಪ್ರತಿದಿನ ಕನಿಷ್ಠ 2 ರಿಂದ 3 ಫಂಗಲ್ ಇನ್ಫೆಕ್ಷನ್ ಪ್ರಕರಣಗಳನ್ನು ನೋಡುತ್ತಿದ್ದರು, ಆದರೆ ಈಗ ಈ ಸಂಖ್ಯೆ 8 ರಿಂದ 10 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಅವು ತೀವ್ರವಾದ ತುರಿಕೆಯನ್ನು ಉಂಟುಮಾಡುತ್ತವೆ, ಜೊತೆಗೆ ವೇಗವಾಗಿ ದೇಹದಾದ್ಯಂತ ಹರಡುತ್ತವೆ. ಸೌಮ್ಯ ಅಥವಾ ಸಾಮಾನ್ಯ ಔಷಧಿಗಳಿಗೆ ಕಳಪೆಯಾಗಿ ಪ್ರತಿಕ್ರಿಯಿಸುತ್ತವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ತಪ್ಪು ಯಾವತ್ತೂ ಮಾಡದಿರಿ
ಬೆಂಗಳೂರಿನ ಥೆರಪಿಯಾ ಸ್ಕಿನ್ ಹೇರ್ ಮತ್ತು ಇಎನ್ಟಿ ಸೆಂಟರ್ನ ಸ್ಥಾಪಕ, ನಿರ್ದೇಶಕ ಮತ್ತು ಸಲಹೆಗಾರ ಚರ್ಮರೋಗ ತಜ್ಞ ಗೋವಿಂದ್ ಎಸ್ ಮಿತ್ತಲ್ ಈ ಬಗ್ಗೆ ಕೆಲವು ಸಲಹೆ ನೀಡಿದ್ದು, ಕಳೆದ 7 ರಿಂದ 8 ವರ್ಷಗಳಲ್ಲಿ ಪುನರಾವರ್ತಿತ ಫಂಗಲ್ ಗಳ ಹರಡುವಿಕೆ ರೋಗಿಗಳಲ್ಲಿ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸಾಮಾನ್ಯ ಸಂಖ್ಯೆಗಿಂತ ಕನಿಷ್ಠ 30 ರಿಂದ 40% ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಒಂದೇ ಕುಟುಂಬದ ಅನೇಕ ಸದಸ್ಯರು ಸುಲಭವಾಗಿ ಗುಣಮುಖರಾಗುತ್ತಿಲ್ಲ ಮತ್ತು ಆಂಟಿ ಫಂಗಲ್ಗಳ ಅಲ್ಪಾವಧಿಯ ಕೋರ್ಸ್ಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಇನ್ನು ಸ್ನೇಹಪರ ಮೆಡಿಕಲ್ ಸ್ಟೋರ್ಗಳು ನೀಡುವ ಓವರ್- ದಿ- ಕೌಂಟರ್ ಕ್ರೀಮ್ಗಳು ಮತ್ತು ಸ್ಟೀರಾಯ್ಡ್ ಹೊಂದಿರುವ ಕ್ರೀಮ್ಗಳಲ್ಲಿ ಉಪಯೋಗಕ್ಕಿಂತ ದುರುಪಯೋಗವೇ ಜಾಸ್ತಿಯಾಗುತ್ತಿದೆ.
ಬಿಗಿಯಾದ ಜೀನ್ಸ್ ಮತ್ತು ಬೂಟುಗಳನ್ನು ದಿನವಿಡೀ ಧರಿಸುವ ಜನರು ಡರ್ಮಟೊಫೈಟೋಸಿಸ್ಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಪಿಜಿಐಎಂಇಆರ್ ಚಂಡೀಗಢದ ಮೈಕಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಉಸ್ತುವಾರಿ ಡಾ. ಶಿವಪ್ರಕಾಶ್ ಎಂ. ರುದ್ರಮೂರ್ತಿ ಹೇಳಿದ್ದಾರೆ. ಸ್ನಾನದ ನಂತರ ತಮ್ಮ ದೇಹದಿಂದ ನೀರನ್ನು ಒರೆಸದೆ ಬಟ್ಟೆಗಳನ್ನು ಧರಿಸುವವರೂ ಸಹ ಇದ್ದಾರೆ ಅಂಥವರಲ್ಲಿ ಈ ರೀತಿಯ ಸೋಂಕು ಹೆಚ್ಚಾಗಿ ಕಂಡು ಬಂದಿದೆ ಎಂದಿದ್ದಾರೆ. ವಾಡಿಕೆಯಂತೆ ಬಳಸುವ ಆಂಟಿಫಂಗಲ್ ಗಳು ಕೆಲವೊಮ್ಮೆ ಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು, ಹೀಗಾಗಿ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಡಾ. ಸವಿಯೋ ತಿಳಿಸಿದ್ದಾರೆ. ಸ್ವಯಂ ಔಷಧೋಪಚಾರವನ್ನು ತಪ್ಪಿಸುವುದು ಮತ್ತು ತಜ್ಞರೊಂದಿಗೆ ಸಮಾಲೋಚನೆಯು, ಸೋಂಕನ್ನು ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: