ತಾಯ್ತನವೆಂಬುದು ಮಹಿಳೆಯರ ಪಾಲಿನ ದೊಡ್ಡ ಜವಾಬ್ದಾರಿಯೂ ಹೌದು. ಹೀಗಾಗಿ, ನೀವು ಗರ್ಭಿಣಿಯಾಗಲು ಬಯಸಿದರೆ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗರ್ಭ ಧರಿಸುವ ಪ್ಲಾನ್ ನಿಮ್ಮದಾದರೆ ಮುಂಚಿತವಾಗಿಯೇ ಒಮ್ಮೆ ಗೈನಕಾಲಜಿಸ್ಟ್ ಬಳಿ ನಿಮ್ಮ ತಪಾಸಣೆ ಮಾಡಿಸಿಕೊಳ್ಳಿ. ನಿಮ್ಮ ದೇಹ ಗರ್ಭ ಧರಿಸಲು ಸಿದ್ಧವಾಗಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೆಡಿಕಲ್ ಶಾಪ್ನಲ್ಲಿ ಪ್ರೆಗ್ನೆನ್ಸಿ ಕಿಟ್ ಖರೀದಿಸಿ ಚೆಕ್ ಮಾಡಿಕೊಳ್ಳುತ್ತಾ ಇರಿ. ಹೋಮ್ ಟೆಸ್ಟ್ನಲ್ಲಿ ಪಾಸಿಟಿವ್ ಎಂದು ಬಂದರೆ ನಂತರ ವೈದ್ಯರ ಬಳಿ ತೆರಳಿ ಖಚಿತಪಡಿಸಿಕೊಳ್ಳಿ.
ನೀವು ಗರ್ಭಿಣಿಯಾಗಿದ್ದೀರಿ ಎಂದು ಖಚಿತವಾದಾಗ ಮೊದಲು ನೀವು ಮಾಡಬೇಕಾದುದು ಏನು? ಎಂಬ ಮಾಹಿತಿ ಇಲ್ಲಿದೆ…
1. ಕುಟುಂಬದವರೊಂದಿಗೆ ಹೇಳಿ. ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಅಥವಾ ಟೆಸ್ಟಿಂಗ್ನಲ್ಲಿ ಪಾಸಿಟಿವ್ ಎಂದು ಬಂದರೆ ನಿಮ್ಮ ಸಂಗಾತಿ, ಹತ್ತಿರದ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಹೇಳಿ. ನೆನಪಿಡಿ, ನಿಮ್ಮ ಗರ್ಭಧಾರಣೆಯನ್ನು ಯಾವಾಗ ಮತ್ತು ಯಾವಾಗ ಬಹಿರಂಗಪಡಿಸಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಹಾಗಾಗಿ, ಈ ಸುದ್ದಿಯನ್ನು ಸದ್ಯಕ್ಕೆ ರಹಸ್ಯವಾಗಿಡಲು ನೀವು ಬಯಸಿದರೆ, ಅದು ನಿಮ್ಮ ಹಕ್ಕು. 3 ತಿಂಗಳಾದ ಬಳಿಕ ಎಲ್ಲರಿಗೂ ಹೇಳಿದರೂ ಒಳ್ಳೆಯದೇ.
2. ಯಾವ ವೈದ್ಯರನ್ನು ಭೇಟಿಯಾಗಬೇಕೆಂದು ನಿರ್ಧರಿಸಿ. ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಯಾವುದಾದರೂ ಸ್ತ್ರೀರೋಗ ವೈದ್ಯರು ಇದ್ದರೆ ಸಾಧ್ಯವಾದಷ್ಟು ಬೇಗ ಅವರಿಗೆ ಕರೆ ಮಾಡಿ. ಅವರನ್ನು ಒಮ್ಮೆ ಭೇಟಿಯಾಗಿ ರಕ್ತದ ಪರೀಕ್ಷೆ ಮಾಡಿಸಿ. ನಿಮಗೆ ಯಾವ ವೈದ್ಯರ ಪರಿಚಯವೂ ಇಲ್ಲಿದಿದ್ದರೆ ನಿಮ್ಮ ಸ್ನೇಹಿತರು, ಕುಟುಂಬದವರಲ್ಲಿ ಕೇಳಿ ಸಲಹೆ ಪಡೆಯಿರಿ. ನೀವು ಮೊದಲು ಯಾವ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅವರನ್ನೇ ಕಂಟಿನ್ಯೂ ಮಾಡುವುದು ಒಳ್ಳೆಯದು.
ಇದನ್ನೂ ಓದಿ: ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ
3. ನಿಮ್ಮ ಮೊದಲ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಿಕೊಳ್ಳಿ. ನಿಮ್ಮ ಮೊದಲ ಪ್ರಸವಪೂರ್ವ ಅಪಾಯಿಂಟ್‌ಮೆಂಟ್ ಆರಂಭಿಕ ಅಲ್ಟ್ರಾಸೌಂಡ್ ಅಥವಾ ರಕ್ತದ ಪರೀಕ್ಷೆ ಮೂಲಕ ಗರ್ಭಧಾರಣೆಯನ್ನು ದೃಢೀಕರಿಸುವುದನ್ನು ಒಳಗೊಂಡಿರುತ್ತದೆ. ಹಾಗೇ, ನಿಮ್ಮ ಅಂದಾಜಿನ ಡೆಲಿವರಿ ಡೇಟ್ ಕೂಡ ನೀಡಲಾಗುತ್ತದೆ. ಅಲ್ಲಿ ನಿಮಗಿರುವ ಎಲ್ಲ ಸಂದೇಹಗಳನ್ನೂ ಬಗೆಹರಿಸಿಕೊಳ್ಳಿ. ನೀವು ರಕ್ತಸ್ರಾವ, ಸೆಳೆತ ಅಥವಾ ನೋವಿನಂತಹ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ನಿಮ್ಮ ವೈದ್ಯರ ಬಳಿ ಹೇಳಿಕೊಳ್ಳಿ.
4. ಮಗುವಿನ ಬೆಳವಣಿಗೆಗೆ ಪೂರಕವಾದ ಕ್ಯಾಲ್ಸಿಯಂ, ಐರನ್, ವಿಟಮಿನ್ ಎ, ಸಿ, ಡಿ ಮತ್ತು ಇ, ವಿಟಮಿನ್ ಬಿ 12, ಸತು, ತಾಮ್ರ, ಮೆಗ್ನೀಸಿಯಮ್, ಫೋಲಿಕ್ ಆ್ಯಸಿಡ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಹಾಗೇ, ವೈದ್ಯರ ಬಳಿ ಸಪ್ಲಿಮೆಂಟ್ಗಳನ್ನು ಕೇಳಿ ಪಡೆಯಿರಿ. ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತು ಐರನ್ ಟ್ಯಾಬ್ಲೆಟ್ಗಳನ್ನು ವೈದ್ಯರು ನೀಡುತ್ತಾರೆ.
5. ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೂ ನಿಮ್ಮ ವೈದ್ಯರೊಂದಿಗೆ ಚರ್ಚಿಸದೆ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಔಷಧಿಗಳನ್ನು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವುದರಿಂದ ಮಗುವಿಗೆ ತೊಂದರೆಯಾಗುವ ಅಥವಾ ಅಬಾರ್ಷನ್ ಆಗುವ ಸಾಧ್ಯತೆಗಳಿರುತ್ತವೆ.
6. ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಪರಿಸ್ಥಿತಿಯ ಬಗ್ಗೆ ನಿಮ್ಮ ಬಾಸ್ಗೆ ತಿಳಿಸಿ. ವೈದ್ಯರ ಬಳಿ ತಪಾಸಣೆಗೆ ತೆರಳಲು ನಿಮಗೆ ಸಮಯ ಬೇಕಾಗಬಹುದು. ಆಗ ಕೆಲಸದಲ್ಲಿ ತೊಡಕು ಉಂಟಾಗುವುದನ್ನು ತಪ್ಪಿಸಲು ಮೊದಲೇ ನಿಮ್ಮ ಮೇಲ್ವಿಚಾರಕರಿಗೆ ಈ ಬಗ್ಗೆ ತಿಳಿಸಿರುವುದು ಉತ್ತಮ. ಹಾಗೇ, ನಿಮ್ಮ ಆಫೀಸಿನಲ್ಲಿ ಮೆಟರ್ನಿಟಿ ಲೀವ್ ಇದೆಯಾ? ಗರ್ಭಿಣಿಯಾದವರಿಗೆ ಏನೆಲ್ಲ ಸೌಲಭ್ಯ ನೀಡುತ್ತಾರೆ ಎಂಬುದರ ಮಾಹಿತಿ ಪಡೆದಿಟ್ಟುಕೊಳ್ಳಿ.
ಇದನ್ನೂ ಓದಿ: Tomato: ಮಧುಮೇಹಿಗಳು ಟೊಮೇಟೊ ತಿನ್ನಬಹುದೇ? ಗರ್ಭಿಣಿಯರೂ ಟೊಮೆಟೊಗಳನ್ನು ತಿನ್ನಬಹುದೇ?
7. ಆಲ್ಕೋಹಾಲ್ ಬಳಕೆಯನ್ನು ನಿಲ್ಲಿಸಿ. ಗರ್ಭಾವಸ್ಥೆಯಲ್ಲಿ ಯಾವುದೇ ಪ್ರಮಾಣದ ಆಲ್ಕೊಹಾಲ್ ಬಳಕೆ ಒಳ್ಳೆಯದಲ್ಲ. ವೈನ್ ಮತ್ತು ಬಿಯರ್ ಸೇರಿದಂತೆ ಎಲ್ಲ ರೀತಿಯ ಆಲ್ಕೋಹಾಲ್ಗಳೂ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡಬಹುದು. ಇದು ಗರ್ಭಪಾತ, ಹೆರಿಗೆಗೂ ಮುನ್ನ ಮಗುವಿನ ಸಾವು ಅಥವಾ ಮಗುವಿನ ಅಂಗವೈಕಲ್ಯಗಳಿಗೆ ಕಾರಣವಾಗಬಹುದು. ಧೂಮಪಾನವನ್ನು ಕೂಡ ಮಾಡಬೇಡಿ.
8. ನಿಮ್ಮ ಕೆಫೀನ್ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಗರ್ಭಿಣಿಯರು ಕೆಫೀನ್ ಅಂಶವಿರುವ ಚಹಾ, ಕಾಫಿ ಮುಂತಾದವುಗಳನ್ನು ಸೇವಿಸದಿರುವುದು ಉತ್ತಮ. ದಿನಕ್ಕೆ 200 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವನೆಯು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು 2008ರ ಸಂಶೋಧನೆ ತಿಳಿಸಿದೆ. ಹೀಗಾಗಿ, ಸೋಡಾ, ಡಾರ್ಕ್ ಚಾಕೊಲೇಟ್, ಕಾಫಿ, ಟೀ ಬಳಕೆ ಕಡಿಮೆಗೊಳಿಸಿ.
9. ಗರ್ಭಿಣಿಯರಿಗೆ ಉತ್ತಮ ಪೋಷಣೆ ಯಾವಾಗಲೂ ಮುಖ್ಯವಾಗಿದೆ. ನಿಮ್ಮ ಮಗುವಿಗೆ ಬೆಳೆಯಲು ಮತ್ತು ಅಭಿವೃದ್ಧಿಪಡಿಸಲು ಸರಿಯಾದ ಪ್ರಮಾಣದ ಪೋಷಕಾಂಶಗಳು ಬೇಕಾಗುತ್ತವೆ. ನೀವು ಗರ್ಭಿಣಿಯಾಗಿರುವಾಗ, ಹೆಚ್ಚು ನೀರು ಸೇವಿಸಿ. ಊಟದಲ್ಲಿ ಜೀವಸತ್ವಗಳು ಮತ್ತು ಖನಿಜಗಳು, ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ರೀತಿಯ ಕೊಬ್ಬು, ಪ್ರೋಟೀನ್, ಫೈಬರ್, ವಿಟಮಿನ್ ಅಂದರೆ, ಡ್ರೈ ಫ್ರೂಟ್ಸ್, ನಟ್ಸ್, ದ್ವಿದಳ ಧಾನ್ಯಗಳು, ಡೈರಿ ಉತ್ಪನ್ನ, ಹಣ್ಣುಗಳು, ತರಕಾರಿಗಳು, ಮೊಟ್ಟೆಯನ್ನು ಹೆಚ್ಚು ಸೇವಿಸಿ.
10. ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾರ್ನಿಂಗ್ ಸಿಕ್ನೆಸ್ ಅನುಭವಿಸುವುದಿಲ್ಲ. ಆದರೆ ಸುಮಾರು ಶೇ. 70 ರಿಂದ 80ರಷ್ಟು ಗರ್ಭಿಣಿಯರು ಮಾರ್ನಿಂಗ್ ಸಿಕ್ನೆಸ್ ಅನುಭವಿಸುತ್ತಾರೆ. 2ನೇ ತಿಂಗಳಿಂದ 5 ತಿಂಗಳವರೆಗೂ ವಾಂತಿ, ತಲೆಸುತ್ತುವಿಕೆ, ಊಟ ಸೇರದಿರುವುದು, ವಿಪರೀತ ಸುಸ್ತು ಮುಂತಾದ ಲಕ್ಷಣಗಳಿರುತ್ತವೆ. ನಿಮಗೆ ರಕ್ತಸ್ರಾವ, ಸೆಳೆತ, ನೋವು, ಅತಿಯಾದ ಮಲವಿಸರ್ಜನೆಯಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.