ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ?
ಆಟಿಸಂ ಬಗ್ಗೆ ನಿಮಗೆ ತಿಳಿದಿರಬಹುದು. ಇದು ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆಯಿಂದ ಉಂಟಾಗುವ ಕಾಯಿಲೆಯಾಗಿದ್ದು ವ್ಯಕ್ತಿಯ ಸಾಮಾಜಿಕ ಸಂವಹನ, ಆಸಕ್ತಿ ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಯಿಂದ ಮಕ್ಕಳ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಬಹುದಾಗಿತ್ತು. ಆದರೆ ಹೊಸ ಅಧ್ಯಯನವೊಂದು ಮೂತ್ರ ಪರೀಕ್ಷೆ ಮಾಡುವ ಮೂಲಕ, 2 ವರ್ಷ ವಯಸ್ಸಿನ ಮಕ್ಕಳಲ್ಲಿಯೇ ಆಟಿಸಂಗೆ ಸಂಬಂಧಿಸಿದ ಸಂಭಾವ್ಯ ಲಕ್ಷಣಗಳನ್ನು ಗುರುತಿಸಬಹುದು ಎಂದು ಹೇಳಿದೆ. ಹಾಗಾದರೆ ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ, ಈ ಅಧ್ಯಯನದಿಂದ ಯಾವ ರೀತಿ ಲಾಭವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಒಂದು ನ್ಯೂರೋಡೆವಲಪ್ಮೆಂಟಲ್ ಸಮಸ್ಯೆಯಾಗಿದ್ದು, ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಹಲವು ಬಾರಿ ಇದರ ಆರಂಭಿಕ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಹೊಸ ಅಧ್ಯಯನವೊಂದು, ಯೂರಿನ್ ಟೆಸ್ಟ್ ಮೂಲಕ ಕೇವಲ 2 ವರ್ಷದ ಮಕ್ಕಳಲ್ಲೇ ಆಟಿಸಂಗೆ ಸಂಬಂಧಿಸಿದ ಸೂಚನೆಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದೆ. ಮೊಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಹಾಗಾದರೆ ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ, ಈ ಅಧ್ಯಯನದಿಂದ ಯಾವ ರೀತಿ ಲಾಭವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ?
ಸಾಮಾನ್ಯವಾಗಿ ಆಟಿಸಂ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಮಕ್ಕಳಿಗೆ ಸಮಯಕ್ಕೆ ಸರಿಯಾದ ಥೆರಪಿ, ಚಿಕಿತ್ಸೆ ಮತ್ತು ತಜ್ಞರ ಮಾರ್ಗದರ್ಶನ ದೊರೆಯಬಹುದು. ಆಟಿಸಂ ಪತ್ತೆ ಮಾಡಲು ಮಕ್ಕಳ ವರ್ತನೆ, ಮಾತಿನ ಬೆಳವಣಿಗೆ, ಸಾಮಾಜಿಕ ಪ್ರತಿಕ್ರಿಯೆ ಮತ್ತು ದೈನಂದಿನ ಚಟುವಟಿಕೆಗಳನ್ನು ಗಮನಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಕಡಿಮೆ ವೆಚ್ಚದ, ಸರಳ ಯೂರಿನ್ ಟೆಸ್ಟ್ ಆರಂಭಿಕ ತಪಾಸಣೆಗೆ ಸಹಾಯವಾದರೆ ಅನೇಕ ಕುಟುಂಬಗಳಿಗೆ ಇದು ಉಪಯುಕ್ತವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಯನ ಹೇಳುವುದೇನು?
ಈ ಅಧ್ಯಯನದಲ್ಲಿ ಸಂಶೋಧಕರು ಆಟಿಸಂ ಇರುವ ಮತ್ತು ಆಟಿಸಂ ಇಲ್ಲದ ಮಕ್ಕಳ ಯೂರಿನ್ ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದಾರೆ. ಪರೀಕ್ಷೆಯ ವೇಳೆ ಕೆಲವು ವಿಶೇಷ ಜೈವಿಕ ಸೂಚನೆಗಳು (Biological Markers) ಎರಡು ಗುಂಪುಗಳಲ್ಲಿ ವಿಭಿನ್ನ ಮಟ್ಟದಲ್ಲಿ ಕಂಡುಬಂದಿದ್ದು ಈ ವ್ಯತ್ಯಾಸಗಳ ಆಧಾರದ ಮೇಲೆ ಆಟಿಸಂಗೆ ಸಂಬಂಧಿಸಿದ ಸಾಧ್ಯ ಲಕ್ಷಣಗಳನ್ನು ಗುರುತಿಸಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಅಧ್ಯಯನದ ಪ್ರಕಾರ, ಈ ಯೂರಿನ್ ಟೆಸ್ಟ್ ಆಟಿಸಂ ಇರುವ ಮಕ್ಕಳನ್ನು ಗುರುತಿಸುವಲ್ಲಿ ಸಾಕಷ್ಟು ನಿಖರತೆ ಕಂಡುಬಂದಿದೆ. ಆದರೆ, ಇದರ ಪರಿಣಾಮಕಾರಿತ್ವವನ್ನು ದೃಢೀಕರಿಸಲು ಇನ್ನಷ್ಟು ದೊಡ್ಡ ಮಟ್ಟದ ಅಧ್ಯಯನಗಳು ಅಗತ್ಯವಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?
ಯೂರಿನ್ ಟೆಸ್ಟ್ ಹೇಗೆ ಕೆಲಸ ಮಾಡುತ್ತದೆ?
ಈ ಪರೀಕ್ಷೆಯಲ್ಲಿ ಮೂತ್ರದಲ್ಲಿರುವ ಕೆಲವು ವಿಶೇಷ ರಾಸಾಯನಿಕಗಳು ಮತ್ತು ಜೈವಿಕ ಸೂಚನೆಗಳನ್ನು ಪರಿಶೀಲಿಸಲಾಗುತ್ತದೆ. ಇವು ದೇಹ ಹಾಗೂ ಅಂತರಗಳಲ್ಲಿ ಇರುವ ಮೈಕ್ರೋಬ್ಸ್ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಯೂರಿನ್ ಸ್ಯಾಂಪಲ್ ಅನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿ, ಅದರಲ್ಲಿರುವ ವಿಶೇಷ ರಾಸಾಯನಿಕ ಮಾದರಿಗಳನ್ನು ವಿಶ್ಲೇಷಿಸಲಾಗುತ್ತದೆ. ಈ ಮಾದರಿಗಳು ಆಟಿಸಂಗೆ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸಂಶೋಧಕರ ಪ್ರಕಾರ, ಈ ವಿಧಾನ ಸರಳವಾಗಿದ್ದು, ಕೇವಲ ಯೂರಿನ್ ಸ್ಯಾಂಪಲ್ ಸಾಕಾಗುತ್ತದೆ ಎಂಬುದು ಇದರ ಪ್ರಮುಖ ವಿಶೇಷತೆ. ಪ್ರಸ್ತುತ ಈ ಯೂರಿನ್ ಟೆಸ್ಟ್ ಇನ್ನೂ ಸಂಶೋಧನಾ ಹಂತದಲ್ಲಿದ್ದು, ಸಾಮಾನ್ಯ ವೈದ್ಯಕೀಯ ಪರೀಕ್ಷೆಯ ಭಾಗವಾಗಿಲ್ಲ. ತಜ್ಞರ ಪ್ರಕಾರ, ಆಟಿಸಂ ಪತ್ತೆಗಾಗಿ ಈಗಲೂ ಮಕ್ಕಳ ವರ್ತನೆ, ಬೆಳವಣಿಗೆ ಮತ್ತು ವೈದ್ಯರ ಪರಿಶೀಲನೆಯನ್ನೇ ಮುಖ್ಯವಾಗಿ ಅವಲಂಬಿಸಲಾಗುತ್ತಿದೆ. ಈ ಅಧ್ಯಯನದ ಫಲಿತಾಂಶಗಳು ಆಶಾದಾಯಕವಾಗಿದ್ದರೂ, ಇದನ್ನು ಅಧಿಕೃತ ವೈದ್ಯಕೀಯ ಪರೀಕ್ಷೆಯಾಗಿ ಬಳಸಲು ಇನ್ನಷ್ಟು ಸಂಶೋಧನೆ ಮತ್ತು ದೃಢೀಕರಣ ಅಗತ್ಯವಿದೆ.
ಪೋಷಕರು ಗಮನಿಸಬೇಕಾದ ಆರಂಭಿಕ ಲಕ್ಷಣಗಳು:
- ಮಗು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡದೇ ಇರಬಹುದು
- ಹೆಸರು ಕರೆದಾಗ ಪ್ರತಿಕ್ರಿಯೆ ಕಡಿಮೆ ಇರಬಹುದು
- ಮಾತಿನ ಬೆಳವಣಿಗೆ ತಡವಾಗಬಹುದು
- ಇತರ ಮಕ್ಕಳೊಂದಿಗೆ ಬೆರೆಯಲು ಆಸಕ್ತಿ ತೋರದೇ ಇರಬಹುದು
- ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುವ ಸ್ವಭಾವ ಕಂಡುಬರಬಹುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




