World Pulses Day 2026: ಫೆ. 10ರಂದು ವಿಶ್ವ ದ್ವಿದಳ ಧಾನ್ಯ ದಿನ; ಪೌಷ್ಟಿಕಾಂಶ, ಆರ್ಥಿಕ ಮತ್ತು ಪರಿಸರ ಸ್ನೇಹಿ ಪ್ರಯೋಜನಗಳು
ಪ್ರತಿ ವರ್ಷ ಫೆಬ್ರವರಿ 10ರಂದು ವಿಶ್ವ ದ್ವಿದಳ ಧಾನ್ಯ ದಿನ ಆಚರಿಸಲಾಗುತ್ತದೆ. ದ್ವಿದಳ ಧಾನ್ಯಗಳು ಪ್ರೋಟೀನ್, ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಅತ್ಯುತ್ತಮ. ಇವು ಮಣ್ಣಿನ ಫಲವತ್ತತೆ ಹೆಚ್ಚಿಸಿ, ಕಡಿಮೆ ನೀರು ಬಳಸುವ ಮೂಲಕ ಪರಿಸರ ಸ್ನೇಹಿ ಕೃಷಿಗೆ ಸಹಕಾರಿ. ಅಲ್ಲದೆ, ಪೌಷ್ಟಿಕ ಆಹಾರ ಭದ್ರತೆ ಒದಗಿಸಿ ರೈತರಿಗೆ ಆರ್ಥಿಕ ಬೆಂಬಲ ನೀಡುತ್ತವೆ. ಈ ದಿನದ ಮೂಲಕ ದ್ವಿದಳ ಧಾನ್ಯಗಳ ಬಹುಮುಖಿ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಪ್ರತಿ ವರ್ಷ ಫೆಬ್ರವರಿ 10ರಂದು ವಿಶ್ವದಾದ್ಯಂತ ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ದ್ವಿದಳ ಧಾನ್ಯಗಳ ಪೌಷ್ಟಿಕ, ಪರಿಸರ ಮತ್ತು ಆರ್ಥಿಕ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಜನರಿಗೆ ತಿಳಿಸುವ ಉದ್ದೇಶದಿಂದ ಸಂಯುಕ್ತ ರಾಷ್ಟ್ರಸಂಘದ ಮಹಾಸಭೆಯು 2018ರಲ್ಲಿ ಈ ದಿನವನ್ನು ಘೋಷಿಸಿತು. 2019ರಲ್ಲಿ ಮೊದಲ ಬಾರಿಗೆ ಆಚರಣೆ ಪ್ರಾರಂಭವಾಯಿತು. ಇದಕ್ಕೂ ಮೊದಲು 2016 ಅನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯ ವರ್ಷದಾಗಿ ಆಚರಿಸಲಾಗಿದ್ದು, ಅದರ ಯಶಸ್ಸಿನ ಮುಂದುವರಿಕೆಯೇ ಈ ವಿಶೇಷ ದಿನ. ಸಾವಿರಾರು ವರ್ಷಗಳಿಂದ ಮಾನವ ಆಹಾರ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಧಾನ್ಯಗಳು ಇಂದು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿವೆ.
ಲೆಗ್ಯೂಮಿನೋಸೇ (Leguminosae) ಕುಟುಂಬಕ್ಕೆ ಸೇರಿದ ಸಸ್ಯಗಳ ಖಾದ್ಯ ಬೀಜಗಳನ್ನು ದ್ವಿದಳ ಧಾನ್ಯಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಹಾಗೂ ಮಾನವ ಮತ್ತು ಪಶು ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ತೊಗರಿ, ಹೆಸರು, ಕಡಲೆ, ಉದ್ದು, ಮಸೂರ, ಅವರೆಕಾಳು, ಹುರುಳಿ, ಅಲಸಂದೆ, ರಾಜ್ಮಾ ಮತ್ತು ಸೋಯಾಬೀನ್ಸ್ ಮುಂತಾದ ಧಾನ್ಯಗಳು ಸಾಮಾನ್ಯವಾಗಿ ಬಳಸಲ್ಪಡುತ್ತವೆ. ನಮ್ಮ ದೈನಂದಿನ ಊಟದ ತಟ್ಟೆಯಲ್ಲಿ ಬೇಳೆಸಾರು, ದಾಲ್, ತೊವ್ವೆ, ಬಿಸಿಬೇಳೆಬಾತ್, ವಡೆ, ಅಂಬೋಡೆ ಮತ್ತು ಪಾಯಸಗಳ ರೂಪದಲ್ಲಿ ಇವುಗಳ ಬಳಕೆ ಸಾಮಾನ್ಯವಾಗಿದೆ.
ಆರೋಗ್ಯದ ದೃಷ್ಟಿಯಿಂದ ದ್ವಿದಳ ಧಾನ್ಯಗಳು ಅತ್ಯಂತ ಪೌಷ್ಟಿಕ ಆಹಾರವಾಗಿವೆ. ಪ್ರೋಟೀನ್‌ಗಳ ಉತ್ತಮ ಮೂಲವಾಗಿರುವ ಇವು ಸಸ್ಯಾಹಾರಿಗಳಿಗೆ ವಿಶೇಷವಾಗಿ ಉಪಯುಕ್ತ. ಜೊತೆಗೆ ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ. ಕಬ್ಬಿಣ, ಜಿಂಕ್, ಫೋಲೇಟ್, ಮೆಗ್ನೀಸಿಯಂ ಮುಂತಾದ ಖನಿಜಗಳು ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ ಗುಣಗಳಿಂದ ಹೃದಯರೋಗ, ಮಧುಮೇಹ ಹಾಗೂ ತೂಕ ಹೆಚ್ಚಳದ ಅಪಾಯವನ್ನು ತಗ್ಗಿಸಲು ಸಹಾಯವಾಗುತ್ತದೆ. ಅಂದರೆ, ದ್ವಿದಳ ಧಾನ್ಯಗಳು “ಪೂರ್ಣ ಪೌಷ್ಟಿಕ ಆಹಾರ” ಎಂದೇ ಹೇಳಬಹುದು.
ಪರಿಸರದ ದೃಷ್ಟಿಯಿಂದಲೂ ಇವು ಬಹಳ ಮಹತ್ವದ್ದಾಗಿವೆ. ದ್ವಿದಳ ಬೆಳೆಗಳ ಬೇರುಗಳಲ್ಲಿ ಇರುವ ರೈಜೋಬಿಯಂ ಬ್ಯಾಕ್ಟೀರಿಯಾ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದರಿಂದ ರಾಸಾಯನಿಕ ರಸಗೊಬ್ಬರಗಳ ಅವಶ್ಯಕತೆ ಕಡಿಮೆಯಾಗುತ್ತದೆ. ಜೊತೆಗೆ ಇತರ ಬೆಳೆಗಳಿಗಿಂತ ಕಡಿಮೆ ನೀರು ಬೇಕಾಗುವುದು ಮತ್ತು ಕಡಿಮೆ ಹಸಿರುಮನೆ ಅನಿಲಗಳನ್ನು ಉತ್ಪತ್ತಿ ಮಾಡುವುದು ಪರಿಸರ ಸ್ನೇಹಿ ಕೃಷಿಗೆ ನೆರವಾಗುತ್ತದೆ. ಹೀಗಾಗಿ, ದ್ವಿದಳ ಧಾನ್ಯಗಳು ಸುಸ್ಥಿರ ಕೃಷಿಯ ಪ್ರಮುಖ ಭಾಗವಾಗಿವೆ.
ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ
ಆರ್ಥಿಕವಾಗಿ ಕೂಡ ದ್ವಿದಳ ಧಾನ್ಯಗಳು ಬಹಳ ಪ್ರಯೋಜನಕಾರಿ. ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಈ ಧಾನ್ಯಗಳು ಜನರಿಗೆ ಪೌಷ್ಟಿಕ ಆಹಾರ ಭದ್ರತೆಯನ್ನು ಒದಗಿಸುತ್ತವೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಉತ್ತಮ ಆದಾಯದ ಮೂಲವಾಗಿದ್ದು, ದೀರ್ಘಕಾಲ ಸಂಗ್ರಹಿಸಬಹುದಾದ ಗುಣದಿಂದ ಆಹಾರ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ. ಭಾರತವು ವಿಶ್ವದಲ್ಲೇ ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ ಹಾಗೂ ಗ್ರಾಹಕ ರಾಷ್ಟ್ರವಾಗಿದ್ದು, ಕರ್ನಾಟಕದಲ್ಲಿ ತೊಗರಿ, ಹೆಸರು, ಕಡಲೆ, ಉದ್ದು ಮತ್ತು ಅವರೆ ಬೆಳೆಗಳು ಪ್ರಮುಖ ಸ್ಥಾನ ಪಡೆದಿವೆ.
ಸರಳವಾಗಿ ಕಾಣುವ ಈ ಸಣ್ಣ ಬೀಜಗಳು ಆರೋಗ್ಯಕರ ಸಮಾಜ, ಸುರಕ್ಷಿತ ಪರಿಸರ ಮತ್ತು ಸ್ಥಿರ ಆರ್ಥಿಕತೆಯ ಅಡಿಪಾಯವಾಗಿವೆ. ನಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಹೆಚ್ಚು ಸೇರಿಸುವುದು ಕೇವಲ ಆರೋಗ್ಯಕ್ಕಲ್ಲ, ಭವಿಷ್ಯದ ಸುಸ್ಥಿರ ಬದುಕಿಗೆ ಸಹ ಮಹತ್ವದ ಹೆಜ್ಜೆಯಾಗಿದೆ. “ಸಣ್ಣ ಬೀಜಗಳು – ದೊಡ್ಡ ಶಕ್ತಿ” ಎಂಬ ಮಾತಿನಂತೆ, ದ್ವಿದಳ ಧಾನ್ಯಗಳೊಂದಿಗೆ ಆರೋಗ್ಯಕರ ಮತ್ತು ಸುಸ್ಥಿರ ನಾಳೆಯನ್ನು ನಿರ್ಮಿಸೋಣ.
ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ – 581401, ದೂರವಾಣಿ: 08384225836
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Tue, 10 February 26
