Weekly Horoscope: 2023ರ ಹೊಸ ವರ್ಷದ ಮೊದಲ ವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿ
ವಾರ ಭವಿಷ್ಯ: 2023ರ ಹೊಸ ವರ್ಷದ ಮೊದಲ ವಾರದ ಭವಿಷ್ಯದಲ್ಲಿ ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಬದಲಾವಣೆಯಾಗಲಿದೆ? ವರ್ಷದ ಮೊದಲ ವಾರ ನಿಮ್ಮ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಹೊಸ ವರ್ಷದ ಮೊದಲ ವಾರ ಅಂದರೆ ಜನವರಿ 01ರಿಂದ ಜನವರಿ 07ವರೆಗೆ ನಿಮ್ಮ ವಾರ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿಯಿರಿ.
ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?
- ಮೇಷ ವ್ಯಯಸ್ಥಾನದಲ್ಲಿರುವ ಗುರುವು ನಿಮಗೆ ಅಷ್ಟು ಅನುಕೂಲಕರನಾಗಿಲ್ಲ. ಅಪಮಾನವನ್ನೂ ಗುರು-ಹಿರಿಯರ ಅಲಕ್ಷ್ಯಕ್ಕೂ ಕಾರಣವಾಗಬಹುದು. ಮನಸ್ತಾಪವನ್ನೂ ತರಬಹುದು. ರಾಹುವು ನಿಮ್ಮ ರಾಶಿಯಲ್ಲೇ ಇರುವನು. ಆತ ದೇಹಾಲಸ್ಯವನ್ನು ನೀಡುವನು. ಬುದ್ಧಿವಂತಿಕೆಯಿಂದ ಕೆಲಸವನ್ನು ಮಾಡುವಿರಿ. ಕುಲಗುರುವಿನ ದರ್ಶನವನ್ನು ಮಾಡಿ ಬನ್ನಿ. ವಿಷ್ಣುಸಹಸ್ರನಾಮ ಸ್ತೋತ್ರವನ್ನು ಹಾಗೂ ನಾಗಾರಾಧನೆಯನ್ನು ಮಾಡಿ.
- ವೃಷಭ ಈ ವಾರ ಸ್ವಲ್ಪ ಆಪತ್ತಿನ ಕಾಲವೂ ಹೌದು. ಅಪಘಾತ ಆಯುಧಗಳಿಂದ ತಲೆ ಭಾಗಕ್ಕೆ ಪೆಟ್ಟುವ ಬೀಳುವ ಸಾಧ್ಯತೆ ಇದೆ. ಗುರುವು ಏಕಾದಶನಾಗಿ ಅನುಗ್ರಹಿಸಲಿದ್ದಾನೆ. ವ್ಯಯದ ರಾಹುವು ಅನಾರೋಗ್ಯವನ್ನೂ ಸಂಪತ್ತಿನ ವ್ಯಯವನ್ನೂ ಮಾಡಿಸಬಹುದು. ಸುಬ್ರಹ್ಮಣ್ಯನ ಅಷ್ಟೋತ್ತರವನ್ನೋ ಸ್ತೋತ್ರವನ್ನೋ ಪಠಿಸಿ. ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆಯುವುದು ಒಳ್ಳೆಯದು.
- ಮಿಥುನ ದ್ವಾದಶದ ಕುಜನು ಶಸ್ತ್ರಚಿಕಿತ್ಸೆಗಳ ಮೂಲಕ ಧನವನ್ನು ಖರ್ಚಾಗುವಂತೆ ಮಾಡಿಯಾನು. ವಾತ ಹಾಗೂ ಕಫಸಂಬಂಧಿಯಾದ ದೇಹಪೀಡೆ ಇರುವುದು. ನಿರ್ಲಕ್ಷ್ಯ ಮಾಡಬೇಡಿ. ಶಿಕ್ಷಕರಾಗಿದ್ದರೆ ನಿಮ್ಮ ವೃತ್ತಿಯಲ್ಲಿ ಗೌರವಗಳು ಸಿಗಲಿವೆ. ಗಣಪತಿಯ ದರ್ಶನವನ್ನೂ ಶಿವನ ಸ್ತೋತ್ರವನ್ನೂ ಕಾರ್ತಿಕೇಯನ ಸ್ಮರಣೆಯನ್ನು ಪ್ರಾಯಃಕಾಲದಲ್ಲಿ ಮಾಡಿ. ಇವರೆಲ್ಲರಿಗೂ ಪೂಜೆಯನ್ನು ಸಲ್ಲಿಸಿ.
- ಕರ್ಕಾಟಕ ತಂದೆ ಹಾಗೂ ಅಣ್ಣ, ತಮ್ಮಂದಿರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ವಿವಾಹಕ್ಕೆ ತಯಾರಿ ನಡೆಸುತ್ತಿದ್ದರೆ ವಿಳಂಬವಾಗಬಹುದು. ಗುರುವಿನ ದೃಷ್ಟಿ ನಿಮ್ಮ ಮೇಲಿರುವಾಗ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಿ. ಯಂತ್ರಜ್ಞರಿಗೆ, ತಂತ್ರಜ್ಞರಿಗೆ ಲಾಭವಾಗಲಿದೆ. ವಿವಾಹ ಕಾರ್ಯಗಳು ವಿಳಂಬವಾಗಬಹುದು. ತೊಡೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಮಹಾವಿಷ್ಣುವನ್ನೂ ಉಮಾಮಹೇಶ್ವರನನ್ನು ಆರಾಧಿಸಿ.
- ಸಿಂಹ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವಿರಿ. ಸ್ವಯಾರ್ಜಿತವಾದ ಸಂಪತ್ತನ್ನು ಮಕ್ಕಳಿಗೆ ನೀಡುವ ಮನಸ್ಸು ಮಾಡುವಿರಿ. ಕಾಲುಗಳಲ್ಲಿ ನೋವು ಕಾಣಿಸಿಕೊಂಡೀತು. ಧರ್ಮಕಾರ್ಯದಲ್ಲಿ ನಿಮ್ಮ ಆಸಕ್ತಿ ಕಡಿಮೆ ಇರುವುದು. ಪೂರ್ವಜರ ಕಾರ್ಯಗಳು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಿರುತ್ತದೆ. ತಂತ್ರಜ್ಞರಿಗೆ, ಕಲಾವಿದರಿಗೆ ತಕ್ಕಮಟ್ಟಿನ ಲಾಭವಿದೆ. ಶಿವಸ್ತೋತ್ರ, ಪಿತೃಗಳ ಶ್ರಾದ್ಧಾದಿಗಳನ್ನು ಮಾಡಿ. ಗುರುಗಳ ದರ್ಶನ ಹಾಗೂ ಆಶೀರ್ವಾದವನ್ನು ಪಡೆಯಿರಿ. ಗೋಗ್ರಾಸವನ್ನು ಕೊಡಿ.
- ಕನ್ಯಾ ವಿವಾಹದ ಚಿಂತೆಯಲ್ಲಿದ್ದರೆ ಉತ್ತಮ ವಧೂ ವರರು ಸಿಗಲಿದ್ದಾರೆ. ಮಕ್ಕಳಿಂದ ನೋವನ್ನು ಅನುಭವಿಸುವಿರಿ. ಮರಣಕ್ಕೆ ಸದೃಶವಾದ ಸಂಕಟಗಳು ನಿಮ್ಮ ಪಾಲಿಗೆ ಎದುರಾದೀತು. ಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ಸಮುದ್ರದ ಅಲೆಯಂತೆ ಒಮ್ಮೆಲೆ ಪ್ರಳಯದಂತೆ ಕಾಣಬಹುದು. ಅನಂತರ ಶಾಂತವಾಗುವುದು. ಧರ್ಮಕಾರ್ಯದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಿರಿ.ಕುಟುಂಬಕ್ಕೆ ಅಥವಾ ಬಂಧುಗಳಿಗೆ ಧನಸಹಾಯ ನೀಡಬೇಕಾಗಬಹುದು. ನಾಗದೇವರ ಪೂಜೆಯನ್ನು ಮಾಡಿ. ಸುಬ್ರಹ್ಮಣ್ಯನ ದರ್ಶನವನ್ನು ಮಾಡಿ.
- ತುಲಾ ಮಾನಸಿಕ ಉದ್ವೇಗಕ್ಕೆ ಒಳಗಾಗುವಿರಿ. ದೇಹಾರೋಗ್ಯ ಕೆಡಬಹುದು. ಪಾದವೇದನೆಯಿಂದ ಬಳಲುವಿರಿ. ವಾಹನದ ಚಾಲನೆಯಿಂದ ಅಪಘಾತವಾಗಬಹುದು. ಸಹೋದರನ ಜೊತೆ ಅನ್ಯೋನ್ಯವಾಗಿ ಮಾತುಕತೆಗಳನ್ನು ಆಡುವಿರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿಸುವುದಕ್ಕೆ ಸಮಯ ಬೇಕಾಗಬಹುದು. ಗಣಪತಿಯ ಸ್ತುತಿ, ರಾಮಧ್ಯಾನ ಮಾಡಿ. ಲಕ್ಷ್ಮೀನಾರಾಯಣ ಸೋತ್ರ ಮಾಡಿ.
- ವೃಶ್ಚಿಕ ಪ್ರೀತಿಸಿ ಆಗುವ ವಿವಾಹದ ಮಾತುಕತೆಯನ್ನು ಮಾಡಲು ಹೋಗಬೇಡಿ. ಶತ್ರುಗಳಿಂದ ತೊಂದರೆಯನ್ನು ಅನುಭವಿಸಬೇಕಾಗಬಹುದು. ಪಿತ್ತವಿಕಾರದಿಂದ ಅನಾರೋಗ್ಯವುಂಟಾಗಿ ಸಂಪತ್ತಿನ ನಷ್ಟವಾಗುವ ಸಾಧ್ಯತೆಯಿದೆ. ರತ್ನಸಂಬಂಧದ ವ್ಯಾಪಾರಗಳಿಂದ ಲಾಭವಿದೆ. ಮಕ್ಕಳಿಂದ ಧನಸಹಾಯವು ಆಗಬಹುದು. ನಿಮಗೆ ಬರಬೇಕಾದ ಸಂಪತ್ತು ನಿಧಾನವಾಗಿ ಬರಬಹುದು. ಕಾರ್ತಿಕೇಯನ ಸ್ತೋತ್ರ, ಪೂಜೆಗಳನ್ನು ಮಾಡಿ. ನಾಗರಾಜನನ್ನು ಪೂಜಿಸಿ.
- ಧನು ತಂದೆಯಿಂದ ವಿವಾಹಕ್ಕೆ ಸಂಬಂಧಿಸಿದ ಪ್ರಸ್ತಾಪಗಳಾಗಬಹುದು. ದೇಹಪೀಡೆಯಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ಅದರ ಪರಿಹಾರಕ್ಕೆ ಕುಟುಂಬದ ಸಹಕಾರ ಸಿಕ್ಕೀತು. ವಿದೇಶಗಮನವು ಅನಾರೋಗ್ಯದ ಕಾರಣಾಂತರಗಳಿಂದ ನಿಲ್ಲಬಹುದು.ತಂದೆಯಿಂದ ಒಳ್ಳೆಯದನ್ನು ನಿರೀಕ್ಷಿಸಬಹುದು. ಕಲಾವಿದರಿಗೆ ಉತ್ತಮ ದಿನ. ಆಯಾಸದಿಂದ ಸಂಪತ್ತನ್ನು ಪಡೆಯಬೇಕಾಗಬಹುದು. ದುರ್ಗಾದೇವಿಯನ್ನು ಸ್ಮರಿಸಿ.
- ಮಕರ ದೇಹಾಲಸ್ಯದಿಂದ ಪೀಡಿತರಾಗುತ್ತೀರಿ. ಅನಾರೋಗ್ಯದಿಂದ ಸಂಪತ್ತನ್ನು ಕಳೆದುಕೊಳ್ಳುವ ಅನಿವಾರ್ಯತೆ ಎದುರಾದೀತು. ವೈವಾಹಿಕ ಸಂಬಂಧವು ಸಹೋದರನ ಮೂಲಕ ಏರ್ಪಡಬಹುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಸಂಪತ್ತನ್ನು ವ್ಯಯಿಸುವ ಪರಿಸ್ಥಿತಿ ಬರಬಹುದು. ಪೂರ್ವಾರ್ಜಿತ ಕರ್ಮದ ಕಾರಣದಿಂದ ಧರ್ಮದ ಕೆಲಸಕ್ಕೆ ಮನಸ್ಸು ಮಾಡುವಿರಿ. ಶಿವಾರಾಧನೆಯನ್ನು ಮಾಡಿ.
- ಕುಂಭ ಆಲಸ್ಯದಿಂದ ನಿಮಗೆ ಸಿಗಬೇಕಾಗಿರುವ ಸಂಪತ್ತನ್ನು ಕಳೆದುಕೊಳ್ಳುವಿರಿ. ಪ್ರಭಾವಿಗಳಾಗಿದ್ದರೂ ಅದು ಮೋಡದ ಒಳಗಿರುವ ಸೂರ್ಯನಂತೆ. ಸ್ತ್ರೀಸಂಬಂಧೀ ಶತ್ರುಗಳು ಇರಲಿದ್ದಾರೆ. ಪತಿಯಿಂದ ಧನಸಹಾಯವಾಗಲಿದೆ. ಸೊಂಟದ ನೋವನ್ನು ಅನುಭವಿಸುವಿರಿ. ಕೆಟ್ಟ ಕರ್ಮಗಳಿಂದ ಸಂಪತ್ತು ನಾಶವಾಗಲಿದೆ. ಪಿತ್ರಾರ್ಜಿತ ಸ್ವತ್ತಿನ ಉಪಭೋಗವಗಲಿದೆ. ಗೌರಿಯನ್ನು ಸ್ತುತಿಸಿ. ವಿಷ್ಣುಸಹಸ್ರನಾಮವನ್ನು ಪಠಿಸಿ.
- ಮೀನ ಉತ್ತಮ ಕಾರ್ಯದಲ್ಲಿ ನೀವು ಈ ವಾರ ತೊಡಗಲಿದ್ದೀರಿ. ಪುತ್ರೋತ್ಸವದ ಆನಂದವನ್ನು ಅನುಭವಿಸುವಿರಿ. ಪಿತ್ತಸಂಬಂಧದ ರೋಗಗಳು ಕಾಣಿಸಿಕೊಳ್ಳುವುವು. ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಶಿಕ್ಷಕರಿಗೆ ಪ್ರಶಂಸೆ, ಸಂಶೋಧಕರಿಗೆ ಉತ್ತಮಸ್ಥಾನ. ಸಂಪತ್ತಿನ ಆಗಮನ ನಿಧಾನವಾಗಬಹುದು. ವ್ಯಯವೂ ಆಗುತ್ತದೆ. ತ್ರ್ಯಂಬಕನನ್ನು ವಂದಿಸಿ. ಹನುಮಾನ್ ಚಾಲೀಸ್ ಪಠಿಸಿ. ರಾಜರೇಶ್ವರಿಯ ಆರಾಧನೆ ಮಾಡಿ.
ಲೇಖನ: ಲೋಹಿತ ಶರ್ಮಾ, ಇಡುವಾಣಿ
Published On - 6:30 am, Sun, 1 January 23