Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಮಾರ್ಚ್ 5ರಿಂದ ಮಾರ್ಚ್ 11ರ ತನಕ ವಾರಭವಿಷ್ಯ

ಸಂಖ್ಯಾಶಾಸ್ತ್ರ ವಾರ ಭವಿಷ್ಯ: 2023ರ ಮಾರ್ಚ್ 05ರಿಂದ ಮಾರ್ಚ್ 11ರ ವರೆಗಿನ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಮಾರ್ಚ್ 5ರಿಂದ ಮಾರ್ಚ್ 11ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರ
Follow us
Rakesh Nayak Manchi
|

Updated on: Mar 05, 2023 | 5:59 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಮಾರ್ಚ್ 5ರಿಂದ ಮಾರ್ಚ್ 11ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತಗಳು ತಪ್ಪುತ್ತವೆ. ಮೇಲಧಿಕಾರಿಗಳಿಂದ ಪ್ರಶಂಸೆ ಕೇಳಿಬರಲಿದೆ. ಮಾತನಾಡುವಾಗ ಅಳೆದು- ತೂಗಿ ನೋಡಿ. ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ. ದೇವತಾಕಾರ್ಯಗಳಿಗೆ ನಿಮ್ಮಿಂದ ದೇಣಿಗೆ ಮತ್ತ್ಯಾವುದಾದರೂ ನೆರವು ಕೇಳಿಕೊಂಡು ಬರಬಹುದು. ನಿಮ್ಮಿಂದ ಸಾಧ್ಯವಾದಲ್ಲಿ ಖಂಡಿತಾ ನೆರವಾಗಿ. ಇದು ಆ ದೇವರ ಸೇವೆ ಮಾಡುವುದಕ್ಕೆ ನಿಮಗೆ ದೊರೆಯುವ ಅವಕಾಶ ಆಗಿರಲಿದೆ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರು ಕಾರ್ಮಿಕರ ಜತೆಗೆ ಒಂದಲ್ಲಾ ಒಂದು ವಿಷಯಕ್ಕೆ ಮನಸ್ತಾಪವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ಕೆಲಸ ಆಗಬೇಕಾಗಿರುವುದರಿಂದ ಅವರು ಏನು ಹೇಳುತ್ತಿದ್ದಾರೆ ಅಥವಾ ಕೇಳುತ್ತಿದ್ದಾರೆ ಎಂಬ ಬಗ್ಗೆ ಸರಿಯಾಗಿ ಆಲೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ವೃತ್ತಿನಿರತರು ಹೊಸ ಕೋರ್ಸ್ ಮಾಡುವಂಥ ಯೋಗ ಇದೆ. ವಿದ್ಯಾರ್ಥಿಗಳಿಗೆ ಬೇಕೆಂತಲೇ ಕೆಲವರು ತಪ್ಪು ಅಭಿಪ್ರಾಯ ಮೂಡಿಸುವಂಥ ಪ್ರಯತ್ನ ಮಾಡಲಿದ್ದಾರೆ. ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಬಗ್ಗೆ ಆಲೋಚಿಸಿ, ಅದನ್ನು ಬಿಟ್ಟು ಕೂಗಾಟ- ಕಿರುಚಾಟ ಮಾಡಿದಲ್ಲಿ ನೀವೇ ಸಮಸ್ಯೆ ಮಾಡಿಕೊಂಡಂತೆ ಆಗುತ್ತದೆ. ಮಹಿಳೆಯರು ಇತರರ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಣಕಾಸಿನ ವಿಚಾರಕ್ಕೆ ಪ್ರಾಶಸ್ತ್ಯ ಹೆಚ್ಚಾಗಲಿದೆ. ಸ್ವಂತ ವ್ಯವಹಾರ ಮಾಡುವಂಥವರು ವೆಚ್ಚ ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಜನೆಗಳನ್ನು ರೂಪಿಸಲಿದ್ದೀರಿ. ಜಿಎಸ್ ಟಿ, ಆದಾಯ ತೆರಿಗೆಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ. ಊಟ- ತಿಂಡಿ ವಿಚಾರದಲ್ಲಿ ಸ್ವಚ್ಛತೆ- ಶುದ್ಧತೆ ಮತ್ತು ಗುಣಮಟ್ಟದ ಕಡೆಗೆ ಲಕ್ಷ್ಯ ಕೊಡಿ, ಇಲ್ಲದಿದ್ದಲ್ಲಿ ಫುಡ್ ಪಾಯಿಸನ್ ಆದೀತು. ಕೃಷಿ ವಲಯದಲ್ಲಿ ಇರುವವರಿಗೆ ಫಸಲಿಗೆ ಸರಿಯಾದ ಬೆಲೆ ದೊರೆಯದಂತೆ ಆಗಬಹುದು ಅಥವಾ ಹುಳು ಅಥವಾ ಕೀಟಗಳ ಬಾಧೆ ಕಾಡಬಹುದು. ಆದ್ದರಿಂದ ಜಾಗ್ರತೆಯನ್ನು ವಹಿಸಿ. ವೃತ್ತಿನಿರತರು ಹೊಸ ಸೇವೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹಾಗೂ ಈಗ ನೀಡುತ್ತಿರುವ ಸೇವೆಗಳಿಗೆ ದರ ಹೆಚ್ಚಳ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ಏಕಾಗ್ರತೆ ಕೊರತೆಯನ್ನು ಅನುಭವಿಸಲಿದ್ದೀರಿ. ಪೋಷಕರು ಮುಖ್ಯವಾದ ವಿಷಯವನ್ನು ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಅವರ ಮಾತಿನ ಕಡೆಗೆ ಗಮನ ನೀಡಿ. ಕಿರು ಪ್ರವಾಸಗಳನ್ನು ತೆರಳುವಂತಿದ್ದಲ್ಲಿ ಸಿದ್ಧತೆಯನ್ನು ಸರಿಯಾಗಿ ಮಾಡಿಕೊಂಡು, ಆ ನಂತರ ಮುಂದುವರಿಯಿರಿ. ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಗಾಯ ಆಗುವಂಥ ಸಾಧ್ಯತೆಗಳು ಇವೆ. ಆದ್ದರಿಂದ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರ ದೃಷ್ಟಿಯಲ್ಲಿ ನಿಮ್ಮ ಕೆಲಸ ಬಲು ಸಲೀಸು ಅಂತಲೋ ಅಥವಾ ಈಗ ಎಷ್ಟು ಮಂದಿ ಕೆಲಸ ಮಾಡುತ್ತೀದ್ದೀರೋ ಅದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಜನರಿದ್ದರೂ ಸಹ ಕೆಲಸ ಮುಗಿಯುತ್ತದೆ ಅಂತಲೋ ಭಾವನೆ ಮೂಡುತ್ತದೆ. ಇದನ್ನು ನಿಮ್ಮೆದುರೇ ಹೇಳಿಯೂ ಹೇಳ್ತಾರೆ. ನಿಮ್ಮ ಶ್ರಮಕ್ಕೆ, ಪ್ರಯತ್ನಕ್ಕೆ ಬೆಲೆಯೇ ಸಿಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳಲಿದ್ದೀರಿ. ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದಕ್ಕೆ ಮುಂಚೆ ಅಥವಾ ಅನುಷ್ಠಾನಕ್ಕೆ ತರುವ ಮುಂಚೆ ನಿಮ್ಮಿಂದ ಶಿಸ್ತುಪಾಲನೆ ಸಾಧ್ಯವೇ ಎಂಬ ಬಗ್ಗೆ ಆಲೋಚನೆಯನ್ನು ಮಾಡಿ. ಕೈಯಲ್ಲಿ ಹಣವಿಲ್ಲದ ಪಕ್ಷದಲ್ಲಿ ಮುಂದೆ ಬರುವ ಆದಾಯವೋ ಅಥವಾ ಸಾಲವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗದಿರಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವಂಥ ಯೋಗ ಇದೆ. ಇಷ್ಟು ಸಮಯ ಯಾವುದನ್ನು ನೀವು ವೃಥಾ ಹೂಡಿಕೆ ಆಯಿತು ಎಂದುಕೊಂಡಿದ್ದಿರೋ ಅದರಲ್ಲಿ ಲಾಭ ಬರುವುದಕ್ಕೆ ಶುರು ಆಗಲಿದೆ ಅಥವಾ ಅದು ಲಾಭದಾಯಕ ಬೆಲೆಗೆ ಮಾರಾಟ ಆಗಬಹುದು. ವೃತ್ತಿನಿರತರು ಕಾರು ಅಥವಾ ವೃತ್ತಿಗೆ ಅಗತ್ಯವಾದ ಸಲಕರಣೆಗಳು ಖರೀದಿ ಮಾಡಲಿದ್ದೀರಿ. ಪ್ರಚಾರದ ಸಲುವಾಗಿ ಒಂದಿಷ್ಟು ಮೊತ್ತವನ್ನು ಖರ್ಚು ಮಾಡುವಂಥ ಯೋಗ ಇದೆ. ವಿದ್ಯಾರ್ಥಿಗಳು ಇತರರಿಗೆ ಬೆರಗು ಮೂಡುವಂಥ ಕೆಲಸ ಮಾಡಲಿದ್ದಾರೆ. ಇನ್ನು ಉತ್ತಮ ಸಂಸ್ಥೆಯಲ್ಲಿ ಇಂಟರ್ನ್ ಷಿಪ್ ಸಿಗುವಂಥ ಯೋಗ ಸಹ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ವೇತನ ಹೆಚ್ಚಳದಂಥದ್ದು ಆಗುವ ಯೋಗ ಇದೆ. ಆದರೆ ಖರ್ಚಿನ ಮೇಲೆ ಹಿಡಿತ ಇರಲಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಎಲ್ಲ ಸಮಯದಲ್ಲೂ ನೇರವಂತಿಕೆ ಕೆಲಸಕ್ಕೆ ಬರುವುದಿಲ್ಲ. ಹೇಳುವ ವಿಚಾರ ಸರಿಯೇ ಇರಬಹುದು, ಅದರಿಂದ ಲಾಭವೇ ಆಗಬಹುದು. ಆದರೆ ಹೇಗೆ ಎದುರಿಗಿರುವವರಿಗೆ ದಾಟಿಸುತ್ತೀರಿ ಎಂಬುದು ಬಹಳ ಮುಖ್ಯವಾದ ಸಂಗತಿ. ಈ ವಾರ ಸಾಧ್ಯವಾದಷ್ಟೂ ಸಿಟ್ಟು ಕಡಿಮೆ ಮಾಡಿಕೊಳ್ಳಿ. ಪದಗಳನ್ನು ಆಡುವಾಗ ಅದರ ಪರಿಣಾಮದ ಬಗ್ಗೆ ಮುಂಚಿತವಾಗಿಯೇ ಅಂದಾಜು ಮಾಡಿಕೊಳ್ಳಿ. ಯಾರದೋ ಉದ್ಧಾರ ನಾನು ಮಾಡಿಬಿಡ್ತೀನಿ ಎಂಬ ಭ್ರಮೆ ಬೇಡ. ಇತರರ ಆತ್ಮಗೌರವಕ್ಕೆ ಚ್ಯುತಿ ಆಗುವಂಥ ಮಾತುಗಳನ್ನು ಆಡಬೇಡಿ. ಇದರಿಂದ ನಿಮ್ಮದೇ ಕೆಲಸಕ್ಕೆ ಪೆಟ್ಟು ಬೀಳಬಹುದು. ಇನ್ನು ಪೂರ್ತಿ ಮಾಹಿತಿ ಇಲ್ಲದ ಹೊರತು ಯಾವುದೇ ವಸ್ತುವಿನ ಬೆಲೆಯನ್ನು ಹೇಳಲಿಕ್ಕೆ ಹೋಗದಿರಿ. ಕೃಷಿಕರಿಗೆ ಅವರ ಕೆಲಸಕ್ಕೆ ಬೇಕಾದ ವಾಹನವನ್ನು ಖರೀದಿಸುವಂಥ ಯೋಗ ಇದೆ. ಅದರಲ್ಲೂ ಸೆಕೆಂಡ್ ಹ್ಯಾಂಡ್ ವಾಹನವನ್ನು ಕೊಳ್ಳುವಂಥ ಯೋಗ ಇದೆ. ಮನೆಯಲ್ಲಿ ಕೆಲವು ಸಣ್ಣ- ಪುಟ್ಟ ದುರಸ್ತಿಗಳನ್ನು ಮಾಡಿಸಿಕೊಳ್ಳಲು ಅಥವಾ ಗೋಡೌನ್, ಪಶು ಸಾಕಣೆಗೆ ಬೇಕಾದಂಥ ವ್ಯವಸ್ಥೆ ಮಾಡಿಕೊಳ್ಳಲು ಹಣ ಖರ್ಚಾಗಲಿದೆ. ವೃತ್ತಿನಿರತರು ದೇವತಾ ಕಾರ್ಯಗಳಿಗೆ ಖರ್ಚು ಮಾಡಲಿದ್ದೀರಿ. ಶಾಶ್ವತವಾದ ಆದಾಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿದ್ದೀರಿ. ವಿದ್ಯಾರ್ಥಿಗಳು ಆಟೋಟಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಮಹಿಳೆಯರು ಸ್ವಂತ ಉದ್ಯಮ, ವ್ಯವಹಾರ ನಡೆಸುತ್ತಿರುವವರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ, ಮೆಚ್ಚುಗೆ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮಕ್ಕಳ ಶಿಕ್ಷಣದ ಸಲುವಾಗಿ ಚಿಂತೆ ಕಾಡಲಿದೆ. ಹೆಚ್ಚಿನ ಖರ್ಚು ಮಾಡಲಿದ್ದೀರಿ. ನಿಮ್ಮ ನಿರ್ಧಾರದ ಬಗ್ಗೆ ಇತರರು ಅನುಮಾನ ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನಿಮ್ಮೆದುರೇ ಈ ಮಾತನ್ನು ಹೇಳಿದಲ್ಲಿ ಮನಸ್ಸಿಗೆ ಬೇಸರ ಪಟ್ಟುಕೊಳ್ಳದಿರಿ. ನಿಮಗೆ ಯಾರ ಮೇಲೆ ಬಹಳ ನಂಬಿಕೆ ಇರುತ್ತದೋ ಅಂಥವರ ನಡವಳಿಕೆ ಹಾಗೂ ಮಾತುಗಳು ಬೇಸರ ಮೂಡಿಸಲಿದೆ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರು ನಿಮ್ಮ ಕೈಲಿ ಒಂದಿಷ್ಟು ಹಣ ಇಟ್ಟುಕೊಂಡು ಮುಂದುವರಿಯುವುದು ಉತ್ತಮ, ಇಲ್ಲದಿದ್ದರೆ ಅವಮಾನದ ಪಾಲಾಗುತ್ತೀರಿ. ತಂದೆ- ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಷೇರುಪೇಟೆಯಲ್ಲಿ ಹಣ ತೊಡಗಿಸಿರುವವರು ನಷ್ಟದಲ್ಲಿ ದುಡ್ಡು ವಾಪಸ್ ತೆಗೆದುಕೊಳ್ಳುವಂತಾಗುತ್ತದೆ. ನಿಮಗೆ ಸಂಬಂಧಪಡದ ವಿಚಾರಗಳಿಗೆ ತಲೆ ಹಾಕದಿರುವುರು ಉತ್ತಮ. ಕೃಷಿ- ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಆದಾಯದ ಪ್ರಮಾಣ ಜಾಸ್ತಿ ಆಗಲಿದೆ. ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ನೀವು ಹೆಚ್ಚಿನ ಓಡಾಟ ನಡೆಸಲಿದ್ದೀರಿ. ತೋಟಗಾರಿಕೆ ಬೆಳೆಯನ್ನು ಬೆಳೆಯುವವರಿಗೆ ಹೊಸ ಹೂಡಿಕೆ ಮಾಡುವಂಥ ಸಾಧ್ಯತೆ ಇದೆ. ವೃತ್ತಿನಿರತರು ವಿದೇಶ ಪ್ರಯಾಣಕ್ಕೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ವೃತ್ತಿಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದವರಿಂದ ಆಹ್ವಾನ ಬರಲಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಲೋನ್ ಪಡೆಯುವಂಥ ಸಾಧ್ಯತೆ ಇದೆ. ಯುವತಿಯರು ವಿವಾಹ ವಯಸ್ಕರಾಗಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬಡ್ತಿ, ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರುಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ವೃತ್ತಿನಿರತರು ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕಡಿಮೆ ಆಗಬಹುದು. ಪಠ್ಯೇತರ ಸಂಗತಿಗಳಲ್ಲಿ ನಿಮ್ಮ ಮನಸ್ಸು ವಾಲುವುದರಿಂದ ಮನೆಯಲ್ಲಿ ಕೂಡ ಆಕ್ಷೇಪಣೆಗಳು ಕೇಳಿಬರಲಿವೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ವಿನಾಕಾರಣದ ಪ್ರಯಾಣ ಮತ್ತು ಇದರಿಂದ ಅನಗತ್ಯವಾಗಿ ಖರ್ಚುಗಳು ಆಗಲಿವೆ. ಮಹಿಳೆಯರು ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ. ಬಂದ ಲಾಭದಿಂದ ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಸಾಧ್ಯವಾದಲ್ಲಿ ಈ ವಾರದಲ್ಲಿ ಬರುವ ಗುರುವಾರದಂದು ನೀವು ಗುರುಗಳಾಗಿ ಭಾವಿಸುವವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೊಂದಲದ ಅವಧಿ ಇದಾಗಿರಲಿದೆ. ಈಗಿನ ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚಿಸಲಿದ್ದೀರಿ. ಕೆಲವರು ಪ್ರಾಜೆಕ್ಟ್ ಬೇರೆ ಬದಲಾಯಿಸಿಕೊಡುವಂತೆ ಮನವಿ ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ನೆಮ್ಮದಿ ಯಾವುದರಲ್ಲಿದೆ ಎಂಬುದನ್ನು ಆಲೋಚಿಸಿ. ಏಕೆಂದರೆ ನೀವಾಗಿಯೇ ಕೇಳಿಕೊಂಡ ಹುದ್ದೆ, ಕೆಲಸ ನಿಮಗೇ ಸಮಸ್ಯೆಯಾಗಿ ಕಾಡುವ ಅವಕಾಶಗಳು ಜಾಸ್ತಿ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕೆಲಸ ಮಾಡುವವರು ಇತರರಿಗೆ ಜಾಮೀನಾಗಿ ನಿಲ್ಲುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ಏಕೆಂದರೆ ಹೀಗೆ ಜಾಮೀನಾಗಿ ನಿಲ್ಲುವ ಮೂಲಕ ಸಮಸ್ಯೆ ಸಿಲುಕಿಕೊಳ್ಳಬಹುದು. ವೃತ್ತಿನಿರತರು ಸ್ವಂತ ಕಚೇರಿಗೆ ಬದಲಾವಣೆ ಆಗಬಹುದು ಅಥವಾ ಇರುವ ಕಚೇರಿಯಿಂದ ಬೇರೆ ಕಚೇರಿಗೆ ಸ್ಥಳಾಂತರ ಆಗುವ ಯೋಗ ಇದೆ. ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದು ಬ್ಯಾಂಕ್ ಲೋನ್ ಅಥವಾ ಬೇರೆ ಪ್ರಯಾಣ ಸಿದ್ಧತೆಯನ್ನು ನಡೆಸುತ್ತಿದ್ದಲ್ಲಿ ಅನುಕೂಲಗಳು ಒದಗಿಬರಲಿದೆ. ದೀರ್ಘ ಕಾಲದ ಗೆಳೆಯರ ಸಹಾಯ ಒದಗಿ ಬರಲಿದೆ. ಮಹಿಳೆಯರಿಗೆ ಒಂದು ವೇಳೆ ಈ ಹಿಂದೆ ಕೆಲಸ ಮಾಡುತ್ತಿದ್ದು, ತಾತ್ಕಾಲಿಕ ಅಥವಾ ದೀರ್ಘ ವಿರಾಮ ಪಡೆದುಕೊಂಡಿದ್ದೀರಿ ಅಂತಾದರೆ ಮತ್ತೆ ಉದ್ಯೋಗ ಹುಡುಕುತ್ತಿರುವವರಿಗೆ ಶುಭ- ಅನುಕೂಲ ಇದೆ. ಕೆಲವರಿಗೆ ತಾತ್ಕಾಲಿಕವಾಗಿಯಾದರೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ನಂಬಿದ್ದ ವ್ಯಕ್ತಿಗಳು, ಸತ್ಯಗಳು ಬದಲಾಗುವಂಥ ವಾರ ಇದು. ನಮ್ಮ ಕೆಲಸಗಳನ್ನು ನಾವೇ ಮಾಡಬೇಕು, ಇನ್ನೊಬ್ಬರಿಗೆ ನಮ್ಮ ಕನಸುಗಳನ್ನು ಒಪ್ಪಿಸಬಾರದು ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಆರಂಭವಾಗುತ್ತದೆ. ಈ ಬದಲಾವಣೆ ಬರುವುದಕ್ಕೆ ನೀವು ಒಂದಿಷ್ಟು ಬೆಲೆಯನ್ನು ಸಹ ತೆರಬೇಕಾಗುತ್ತದೆ. ತುಂಬ ಮುಖ್ಯವಾದ ದಾಖಲೆ- ಪತ್ರಗಳನ್ನು ಸರಿಯಾಗಿ ಇಡುವಂತೆ ನಿಮಗೆ ಹೇಳಿದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆಯಿಂದ ಇರಿ. ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಭೂಮಿ ವಿಸ್ತರಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ದೊಡ್ಡ ಪ್ರಮಾಣದ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಸಾಧ್ಯತೆ ಇದೆ ಅಥವಾ ಭೂಮಿ ಖರೀದಿಗಾಗಿಯೇ ಹಣಕಾಸು ಸಂಸ್ಥೆಗಳಲ್ಲಿ ಸಾಲ ಕೂಡ ಮಾಡಬಹುದು. ವೃತ್ತಿ ನಿರ್ವಹಿಸುವವರಿಗೆ ಹೊಸ ಪೀರೋಪಕರಣಗಳು, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಖರ್ಚಿನ ಮೇಲೆ ನಿಗಾ ಇಡಿ. ವಿದ್ಯಾರ್ಥಿಗಳು ಪರಿಚಯಸ್ಥರ ಮನೆಗೆ ಹೋದಾಗ ವಿಪರೀತ ಸ್ವಾತಂತ್ರ್ಯ ತೆಗೆದುಕೊಂಡು ಎಲ್ಲೆಂದರಲ್ಲಿ ಓಡಾಡಬೇಡಿ. ಏಕೆಂದರೆ ಅಲ್ಲಿ ಏನಾದರೂ ವಸ್ತುಗಳು ಕಾಣೆಯಾದಲ್ಲಿ ನಿಮ್ಮ ಮೇಲೆ ಆರೋಪಗಳು ಬರುವ ಸಾಧ್ಯತೆ ಇದೆ. ಮಹಿಳೆಯರು ಸಂತಾನಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ವಾರ್ತೆ ಕೇಳುವ ಯೋಗ ಇದೆ. ಮನೆ ಸದಸ್ಯರಿಂದ ಆರ್ಥಿಕ ಬೆಂಬಲ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ