Tata Punch Micro SUV: ಉಳಿದ ಕಾರುಗಳಿಗೆ ಪಂಚ್ ಕೊಡಲು ಬರುತ್ತಿದೆ ಟಾಟಾ ಪಂಚ್
Tata Punch Micro SUV: ಟಾಟಾ ಮೋಟಾರ್ಸ್ ಕಳೆದ ವರ್ಷ ಆಟೋ ಎಕ್ಸ್‌ಪೋದಲ್ಲಿ ಪಂಚ್ ಅನ್ನು ಎಚ್‌ಬಿಎಕ್ಸ್ ಕಾನ್ಸೆಪ್ಟ್ ಮೈಕ್ರೋ ಎಸ್‌ಯುವಿಯಾಗಿ ಪ್ರದರ್ಶಿಸಿತ್ತು.
Updated on: Aug 30, 2021 | 6:46 PM

ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಕಂಪೆನಿ ಟಾಟಾ ತನ್ನ ನೂತನ ಕಾರು ಟಾಟಾ ಪಂಚ್ನ ಲುಕ್ ಅನ್ನು ಅನಾವರಣಗೊಳಿಸಿದೆ. ಹೊಸ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಕಾರ್ ಆಗಿದ್ದು, ಹೆಸರೇ ಸೂಚಿಸುವಂತೆ ಇದು ಚಿಕ್ಕದಾದ ಚೊಕ್ಕ ಎಸ್‌ಯುವಿ ಆಗಿ ರಸ್ತೆಗಿಳಿಯಲಿದೆ.

ಟಾಟಾ ಪಂಚ್ ಅನ್ನು ALFA-ARC (Agile Light Flexible Advanced Architecture) ನಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಇದು ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಿದ ಟಾಟಾ ಮೋಟಾರ್ಸ್‌ನ ಮೊದಲ SUV ಕಾರ್ ಎಂಬುದು ಇದರ ಮತ್ತೊಂದು ವಿಶೇಷ. ಯುವ ಪೀಳಿಗೆಯನ್ನು ಗಮನದಲ್ಲಿರಿಸಿ ಪಂಚ್ ವಿನ್ಯಾಸ ರೂಪಿಸಲಾಗಿದ್ದು, ಅದರಂತೆ ಈ ಹೊಸ ಕಾರು ಹೆದ್ದಾರಿಗಳಲ್ಲಿ ಸ್ಪೋರ್ಟಿಂಗ್ ಅನುಭವವನ್ನು ನೀಡಲಿದೆ.

ಬಾಹ್ಯ ನೋಟ ಮತ್ತು ವಿನ್ಯಾಸ: ಟಾಟಾ ಮೋಟಾರ್ಸ್ ಕಳೆದ ವರ್ಷ ಆಟೋ ಎಕ್ಸ್‌ಪೋದಲ್ಲಿ ಪಂಚ್ ಅನ್ನು ಎಚ್‌ಬಿಎಕ್ಸ್ ಕಾನ್ಸೆಪ್ಟ್ ಮೈಕ್ರೋ ಎಸ್‌ಯುವಿಯಾಗಿ ಪ್ರದರ್ಶಿಸಿತು. ಇದೀಗ ಅದನ್ನೇ ಹೊಸ ಹೆಸರಿನಲ್ಲಿ ಗ್ರಾಹಕರ ಮುಂದಿಡಲು ಮುಂದಾಗಿದೆ. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದ ಚಿತ್ರವನ್ನು ಗಮನಿಸಿದರೆ, ಮುಂಭಾಗದ ಬಂಪರ್ ಮತ್ತು ಬಾಡಿ ಕ್ಲಾಡಿಂಗ್ ಅನ್ನು ಈ ಹಿಂದಿನ ಪರಿಕಲ್ಪನೆಯಿಂದ ಕೆಳಗಿಳಿಸಿರುವುದು ಸ್ಪಷ್ಟವಾಗುತ್ತದೆ.

ಡ್ಯುಯಲ್-ಟೋನ್ ಬಾಹ್ಯ ಪೇಂಟ್ ಆಯ್ಕೆಯು ಕಾರಿನ ಮೇಲ್ಛಾವಣಿ ಲುಕ್ನ್ನು ಹೆಚ್ಚಿಸಿದೆ. ಇನ್ನು ಈ ಕಾರಿನಲ್ಲಿ ಸ್ಟೈಲಿಶ್ 16 ಇಂಚಿನ ಚಕ್ರಗಳನ್ನು ನೀಡಲಾಗಿದೆ. ಇದೇ ಮಾದರಿಯ ಟೈಯರುಗಳು ಟಾಟಾ ಬಿಗ್ ಎಸ್‌ಯುವಿ, ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಕಂಡು ಬರುತ್ತಿತ್ತು. ಹಾಗೆಯೇ ಪಂಚ್ನಲ್ಲಿ ಸ್ಪ್ಲಿಟ್-ಹೆಡ್‌ಲ್ಯಾಂಪ್ ಸೆಟಪ್ ಮತ್ತು ಟಾಟಾದ ಹ್ಯುಮಾನಿಟಿ ಲೈನ್ ಗ್ರಿಲ್‌ನೊಂದಿಗೆ ನೀಡಲಾಗಿದೆ. ಇನ್ನು ಕಾರಿಗೆ ನೀಡಲಾದ ಚೌಕಾಕಾರದ ಕಮಾನುಗಳು SUV ಲುಕ್ನ್ನು ನೀಡುತ್ತದೆ.

ಒಳಾಂಗಣ ಮತ್ತು ವೈಶಿಷ್ಟ್ಯಗಳು: ಹೊಸ ಟಾಟಾ ಪಂಚ್ ಎಸ್‌ಯುವಿಯ ಒಳಭಾಗದ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಕೆಲ ವರದಿಗಳ ಪ್ರಕಾರ, ಕಾರಿನ ಒಳಭಾಗದ;ಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಚೌಕಾಕಾರದ ಏರ್ ಕಾನ್ವೆಂಟ್ ಹೊಂದಿರಲಿದೆ.

ಎಂಜಿನ್ ಮತ್ತು ಸ್ಪರ್ಧೆ: ಹೊಸ ಪಂಚ್ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗೆ ಸಹ ಶಕ್ತಿಯನ್ನು ನೀಡುತ್ತದೆ. ಮೋಟಾರ್ 85 bhp ಮತ್ತು 113 Nm ಪವರ್ ಹೊಂದಿರಲಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಆಟೋ AMT ಯುನಿಟ್ನೊಂದಿಗೆ ಬರುವ ಸಾಧ್ಯತೆಯಿದೆ. ಬಿಡುಗಡೆಯಾದಾಗ, ಹೊಸ ಟಾಟಾ ಪಂಚ್ ಮಾರುತಿ ಸುಜುಕಿ ಇಗ್ನಿಸ್ ಮತ್ತು ರೆನಾಲ್ಟ್ ಕ್ವಿಡ್ ನೊಂದಿಗೆ ಪೈಪೋಟಿ ನಡೆಸುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಬೆಲೆ: Tata Punch Micro SUV ಬೆಲೆಗಳು 5 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
























