ಸಚಿವ ಜಮೀರ್ ಅಹ್ಮದ್​ಗೆ 2 ಕೋಟಿ ರೂ. ಕೊಟ್ಟಿದ್ದೆಲ್ಲಿಂದ ರಾಧಿಕಾ ಕುಮಾರಸ್ವಾಮಿ? ಲೋಕಾಯುಕ್ತ ವಿಚಾರಣೆಲಿ ಮಾಹಿತಿ ಬಿಚ್ಚಿಟ್ಟ ನಟಿ

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ 2019ರಲ್ಲಿ ನಡೆದಿದ್ದ ಇ.ಡಿ ದಾಳಿ ಹಾಗೂ ನಂತರ ನಡೆದ ಎಸಿಬಿ ಹಾಗೂ ಲೋಕಾಯುಕ್ತ ತನಿಖೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವರಿಗೆ 2 ಕೋಟಿ ರೂ. ಹಣ ನೀಡಿದ್ದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.

ಸಚಿವ ಜಮೀರ್ ಅಹ್ಮದ್​ಗೆ 2 ಕೋಟಿ ರೂ. ಕೊಟ್ಟಿದ್ದೆಲ್ಲಿಂದ ರಾಧಿಕಾ ಕುಮಾರಸ್ವಾಮಿ? ಲೋಕಾಯುಕ್ತ ವಿಚಾರಣೆಲಿ ಮಾಹಿತಿ ಬಿಚ್ಚಿಟ್ಟ ನಟಿ
ರಾಧಿಕಾ ಕುಮಾರಸ್ವಾಮಿ
Updated By: Ganapathi Sharma

Updated on: Sep 01, 2025 | 10:26 AM

ಬೆಂಗಳೂರು, ಸೆಪ್ಟೆಂಬರ್ 1: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರಿಗೆ 2 ಕೋಟಿ ರೂಪಾಯಿ ಹಣಕಾಸು ನೆರವು ನೀಡಿದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಕಳೆದ ವಾರ ಲೋಕಾಯುಕ್ತ (Lokayukta) ವಿಚಾರಣೆಗೆ ಹಾಜರಾಗಿರುವುದು ತಿಳಿದುಬಂದಿದೆ. ಜಮೀರ್ ಅಹ್ಮದ್ ಖಾನ್​ಗೆ ಹಣ ಕೊಟ್ಟಿರುವ ಬಗ್ಗೆ ಲೋಕಾಯುಕ್ತ ವಿಚಾರಣೆ ವೇಳೆ ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಜಮೀರ್ ಅಹಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ 2019 ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ ಜಮೀರ್​ಗೆ ಹಣಕಾಸು ನೆರವು ಅಥವಾ ನೀಡಿದ ವಿವರಗಳನ್ನು ಇಡಿ ಸಂಗ್ರಹಿಸಿತ್ತು. ರಾಧಿಕಾ ಕುಮಾರಸ್ವಾಮಿ ಕೂಡ ಹಣ ನೀಡಿದ್ದರು ಎಂಬುದು ತಿಳಿದು ಬಂದಿತ್ತು. ಆಗ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಜಮೀರ್ ಸಚಿವರಾಗಿದ್ದರು. ಜಮೀರ್ ವಿರುದ್ಧ ಭ್ರಷ್ಟಾಚಾರ ವಿಗ್ರಹದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಬಳಿಕ ರಾಜ್ಯದಲ್ಲಿ ಎಸಿಬಿ ರದ್ದುಗೊಂಡಿದ್ದರಿಂದ ಆ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಮುಂದುವರಿಸಿತ್ತು. ಅದರಂತೆ ತನಿಖೆಗೆ ಹಾಜರಾಗುವಂತೆ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಲಾಗಿತ್ತು.

ವಿಚಾರಣೆ ವೇಳೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

2012ರಲ್ಲಿ ಶಮಿಕಾ ಎಂಟರ್​ಪ್ರೈಸಸ್ ಹೆಸರಿನಲ್ಲಿ ಯಶ್ ಮತ್ತು ರಮ್ಯಾ ಅಭಿನಯದ ಚಿತ್ರ ನಿರ್ಮಾಣ ಮಾಡಿದ್ದು ಅದರ ಯಶಸ್ಸು ಮತ್ತು ಸ್ಯಾಟಲೈಟ್ ಹಕ್ಕಿನಿಂದ ದೊರೆತ ಲಾಭಾಂಶದಲ್ಲಿ ಎರಡು ಕೋಟಿ ರೂಪಾಯಿಯನ್ನು ಸಚಿವರಿಗೆ ನೀಡಿದ್ದಾಗಿ ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿಕೊಂಡಿರುವ ಲೋಕಾಯುಕ್ತರು, ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಜೊತೆ ಆ್ಯಂಕರ್ ಅನುಶ್ರೀಗೂ ಹೂವಿನ ಸುರಿಮಳೆ

ಮತ್ತೊಂದೆಡೆ, ರಾಧಿಕಾ ಕುಮಾರಸ್ವಾಮಿ ಮಾತ್ರವಲ್ಲದೆ ಇನ್ನೂ ಹಲವರಿಂದ ಜಮೀರ್ ಹಣ ಪಡೆದಿದ್ದರು ಎನ್ನಲಾಗಿತ್ತು. ಜೆಡಿಎಸ್ ಮುಖಂಡ ಕುಪೇಂದ್ರ ರೆಡ್ಡಿ ಸೇರಿದಂತೆ ಅನೇಕರಿಂದ ಜಮೀರ್ ಅಹ್ಮದ್ ಖಾನ್ ಹಣ ಪಡೆದಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಲೋಕಾಯುಕ್ತ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ