120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ
ಬೆಂಗಳೂರು ಕಂಬೀಪುರದ ಶ್ರೀ ಆದಿಚುಂಚನಗಿರಿ ಮಠದ ₹120 ಕೋಟಿ ಮೌಲ್ಯದ 6 ಎಕರೆ ಜಮೀನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಯತ್ನ ಪ್ರಕರಣದ ಕಿಂಗ್‌ಪಿನ್ ನರೇಶ್ ಗೌಡ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾನೆ. ನಿರೀಕ್ಷಣಾ ಜಾಮೀನು ಪಡೆದಿದ್ದ ಆತ, ತನಗೇನೂ ಸಂಬಂಧವಿಲ್ಲವೆಂದು ಹೇಳಿಕೆ ನೀಡಿದ್ದಾನೆ. ಸತ್ತ ವ್ಯಕ್ತಿಯ ಹೆಸರಲ್ಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದು, ಸರ್ಕಾರಿ ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ. ತನಿಖೆ ತೀವ್ರಗೊಂಡಿದೆ.

ಬೆಂಗಳೂರು ಆ 5: ಬೆಂಗಳೂರು ಹೊರವಲಯದ ಕಂಬೀಪುರದಲ್ಲಿ ಶ್ರೀ ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 120 ಕೋಟಿ ರೂಪಾಯಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ನೆಲಮಂಗಲದ ನರೇಶ್ ಗೌಡ ಕೊನೆಗೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.
ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಆತ, ಕೆಂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಅವರ ಮುಂದೆ ವಿಚಾರಣೆಗೆ ಹಾಜರಾಗಿ ತನಗೇನೂ ತಿಳಿಯದಂತೆ ಹೇಳಿಕೆ ನೀಡಿದ್ದಾನೆ. ವಿಚಾರಣೆ ವೇಳೆ ನರೇಶ್ ಗೌಡ, “ನಾನೊಬ್ಬ ಬ್ರೋಕರ್ ಅಷ್ಟೇ. ಜಮೀನು ಮಾರಾಟ ಮಾಡಿಸಿ ಕಮಿಷನ್ ಪಡೆಯಲು ಮುಂದಾಗಿದ್ದೆ. ಜಮೀನು ಮಾರುವವರು ಮತ್ತು ಕೊಳ್ಳುವವರು ಇದ್ದರು, ಅದನ್ನು ಬಿಟ್ಟು ನನಗೂ ಈ ನಕಲಿ ದಾಖಲೆಗಳಿಗೂ ಯಾವುದೇ ಲಿಂಕ್ ಇಲ್ಲ” ಎಂದು ತನಗೇನೂ ಸಂಬಂಧವಿಲ್ಲದಂತೆ ಕಥೆ ಹೇಳಿದ್ದಾನೆ.
1975ರಲ್ಲಿ ದಾನವಾಗಿ ಮಠಕ್ಕೆ ಬಂದಿದ್ದ ಒಟ್ಟು 45 ಎಕರೆ ಜಮೀನಿನಲ್ಲಿ 6 ಎಕರೆ ಜಮೀನಿಗೆ ಸತ್ತ ವ್ಯಕ್ತಿಯ ಮಗನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಅಕ್ರಮ ಪಹಣಿ (RTC) ಹಾಗೂ ನಕಲಿ ದಾಖಲೆ ಸೃಷ್ಟಿಸಲು ಆರೋಪಿಗಳಾದ ಆರೋಗ್ಯಸ್ವಾಮಿ ಮತ್ತು ಫ್ರಾನ್ಸಿಸ್‌ಗೆ ಹಣ ನೀಡಿ, ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಕೆಲಸ ಮಾಡಿಸಿದ್ದು ಇದೇ ನರೇಶ್ ಗೌಡ ಎಂಬುದು ಈ ಹಿಂದಿನ ತನಿಖೆಯಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ
ಈ ಜಮೀನು ಕಬಳಿಕೆ ಜಾಲದಲ್ಲಿ ಇಬ್ಬರು ಡೆಪ್ಯುಟಿ ತಹಶೀಲ್ದಾರ್‌ಗಳು, ಇಬ್ಬರು ವಿಲೇಜ್ ಅಕೌಂಟೆಂಟ್‌ಗಳು ಸೇರಿದಂತೆ ಒಟ್ಟು 6 ಜನ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದು, ಈವರೆಗೆ ಪ್ರಕರಣದಲ್ಲಿ 17 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ನರೇಶ್ ಗೌಡನನ್ನು ಒಂದು ದಿನ ವಿಚಾರಣೆ ನಡೆಸಿರುವ ಕೆಂಗೇರಿ ಪೊಲೀಸರು, ಮತ್ತಷ್ಟು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




