ಸಿಎಂ ಆಯ್ತು ಈಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು: ಏನಿದು ಪ್ರಕರಣ?
ಕರ್ನಾಟಕ ಮತ್ತು ರಾಜ್ಯದ ಜನರು ಮತ್ತೊಂದು ಸಮರಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಅದು ಕೂಡ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಶಾಸಕರ ನಡುವಿನ ಯುದ್ದ. ಈ ಕದನ ವೈಯಕ್ತಿಕ ಮಟ್ಟಕ್ಕೂ ಬಂದು ಮುಟ್ಟುವಂತೆ ಕಾಣುತ್ತಿದ್ದು, ಇದೀಗ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ನಡುವಿನ ಅನುದಾನ ಕದನ ರಾಜಭವನ ತಲುಪಿದೆ.
ಬೆಂಗಳೂರು, (ಅಕ್ಟೋಬರ್ 30): ಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡದ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾನೇ ಜಯನಗರ ಕ್ಷೇತ್ರವನ್ನು ಹೊರತುಪಡಿಸಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಿದ್ದೇನೆ ಎಂದಿದ್ದಾರೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್, ಡಿಕೆ ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಇದೇ ವಿಚಾರ ಇಟ್ಟುಕೊಂಡು ಡಿಕೆಶಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ವಕೀಲ ಹೆಚ್.ಯೋಗೇಂದ್ರ ಎನ್ನುವರು ಡಿಕೆ ಶಿವಕುಮಾರ್ ವಿರುದ್ಧ ಇಂದು (ಅಕ್ಟೋಬರ್ 30) ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರ ವಿವೇಚನಾ ಕೋಟಾದಡಿ ಅನುದಾನ ಹಂಚಿಕೆ ಮಾಡದೇ ಪ್ರಮಾಣವಚನದ ಉದ್ದೇಶ ಉಲ್ಲಂಘಿಸಿದ್ದಾರೆ. ಉಪಮುಖ್ಯಮಂತ್ರಿ ಆಗುವ ವೇಳೆ ಸ್ವೀಕರಿಸಿದ್ದ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ವಕೀಲ ಹೆಚ್.ಯೋಗೇಂದ್ರ ಅವರು ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಜಯನಗರ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ನಡುವೆ ಅನುದಾನ ಕದನ ಶುರುವಾಗಿದೆ.
ಇದನ್ನೂ ಓದಿ: ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಅನುದಾನ ಕೊಡದಿರುವುದಕ್ಕೆ ಕಾರಣ ಕೊಟ್ಟ ಡಿಕೆಶಿ
ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೆ ಸೂಚನೆ ನೀಡಿದೆ. ಕಳೆದ ಬಜೆಟ್ ನಲ್ಲಿ ಬೆಂಗಳೂರು ನಗರ ಪ್ರದೇಶಾಭಿವೃದ್ಧಿಗೆ ಪ್ರತ್ಯೇಕವಾಗಿ 300 ಕೋಟಿ ರೂ. ಹಣವನ್ನ ಸರ್ಕಾರ ಮೀಸಲಿಟ್ಟಿತ್ತು. ಅದರಲ್ಲಿ ಜಯನಗರ ಹೊರತು ಪಡಿಸಿ 26 ಕ್ಷೇತ್ರಗಳಿಗೆ 265 ಕೋಟಿ ರೂ, ಅನುದಾನ ಬಿಡುಗಡೆಗೆ ಸೂಚಿಸಲಾಗಿದೆ. ಅದ್ರಂತೆ 26 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟದ ಎಚ್ಚರಿಕೆ
ಆದ್ರೆ ಇಲ್ಲೇ ವಿವಾದಕ್ಕೆ ಕಾರಣವಾಗಿದೆ. ಈಗ ಘೋಷಣೆ ಅನುದಾನ ಕ್ಷೇತ್ರಗಳಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರ ಮಾತ್ರ ಇಲ್ಲ.. ಅದಕ್ಕೆ ಕಾರಣ ಏನು ಅನ್ನೋದನ್ನ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಹೋರಾಟ ಮಾಡಲಿ ಎಂದು ಸವಾಲೇಸೆದಿದ್ದಾರೆ. ಈ ಮೂಲಕ ಅನುದಾನ ಯಾಕೆ ಕೊಟ್ಟಿಲ್ಲ ಎಂಬ ಆರೋಪಕ್ಕೆ ಖುದ್ದು ಡಿಸಿಎಂ ಡಿಕೆ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ತಮ್ಮ ಕ್ಷೇತ್ರಕ್ಕೆ ಅನುದಾನ ನೀಡದಿರೋದಕ್ಕೆ ಖುದ್ದು ಜಯನಗರ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟಕ್ಕೂ ಎಚ್ಚರಿಕೆ ನೀಡಿದ್ದಾರೆ..
ನಮ್ಮ ತೆರಿಗೆ ನಮ್ಮ ಹಕ್ಕು.. ಇದು ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಹೋರಾಟ. ಆವತ್ತು ಈ ಹೋರಾಟ ಸುಪ್ರೀಂಕೋರ್ಟ್ ಕೋರ್ಟ್ ಅಂಗಳ ಕೂಡ ತಲುಪಿ ದೇಶ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು.. ಕಾರಣ ಅಷ್ಟೇ.. ತೆರಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಕೆಂಡಕಾರಿತ್ತು. ಈಗ ಅದೇ ರೀತಿ ರಾಜ್ಯದಲ್ಲೂ ಡಿಸಿಎಂ ಮತ್ತು ಬಿಜೆಪಿ ಶಾಸಕನ ನಡುವೆ ಅನುದಾನ ಹಂಚಿಕೆ ಗುದ್ದಾಟ ಶುರುವಾಗಿದ್ದು, ಇದು ಮುಂದೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ