Azadi ka Amrit Mahotsav Part 7: ಮಹತ್ವದ ಕಾಯ್ದೆಗಳು ಜಾರಿ, 2004ರಲ್ಲಿ ತಮಿಳುನಾಡಿನಲ್ಲಿ ಭೀಕರ ಸುನಾಮಿ, ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

75 Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

Azadi ka Amrit Mahotsav Part 7: ಮಹತ್ವದ ಕಾಯ್ದೆಗಳು ಜಾರಿ, 2004ರಲ್ಲಿ ತಮಿಳುನಾಡಿನಲ್ಲಿ ಭೀಕರ ಸುನಾಮಿ, ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ
2004ರ ಸುನಾಮಿ ಮತ್ತು ಭಾರತ 2ನೇ ಬಾರಿ ವಿಶ್ವಕಪ್ ಗೆದ್ದ ಕ್ಷಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2022 | 6:30 PM

Azadi ka Amrit Mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳುಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

61. ಸುವರ್ಣ ಚತುಷ್ಪಥ ಯೋಜನೆ

ಎನ್​ಡಿಎ ಮೈತ್ರಿಕೂಟದ ಸರಕಾರದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮಹತ್ವದ ಹೆದ್ದಾರಿ ಯೋಜನೆಯಾದ ಸುವರ್ಣ ಚತುಷ್ಪಥ ಯೋಜನೆಯನ್ನು 2001ರಲ್ಲಿ ಘೋಷಣೆ ಮಾಡಿದರು. GQ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಗೋಲ್ಡನ್ ಕ್ವಾಡ್ರಿಲಾಟರಲ್ ಭಾರತದ ನಾಲ್ಕು ಪ್ರಮುಖ ನಗರಗಳನ್ನು ಸಂಪರ್ಕಿಸುವ ಕನಸಿನ ಯೋಜನೆ ಇದಾಗಿತ್ತು. ಉತ್ತರದಲ್ಲಿ ದೆಹಲಿ, ಪಶ್ಚಿಮದಲ್ಲಿ ಕೊಲ್ಕತ್ತಾ, ದಕ್ಷಿಣದ ಕಡೆಗೆ ಚೆನ್ನೈ ಮತ್ತು ಪಶ್ಚಿಮವನ್ನು ಒಳಗೊಂಡ ಮುಂಬೈ ನಗರ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. 5,846 ಕಿಲೋಮೀಟರ್ ಉದ್ದ ವ್ಯಾಪಿಸಿರುವ ಹೆದ್ದಾರಿ ಭಾರತದ ಅತಿದೊಡ್ಡ ಹೆದ್ದಾರಿಯಾಗಿದೆ ಮತ್ತು ವಿಶ್ವದ ಐದನೇ ಅತಿದೊಡ್ಡ ಹೆದ್ದಾರಿಯಾಗಿದೆ. ಹೆದ್ದಾರಿಯು ನಾಲ್ಕು ಪಥಗಳು ಮತ್ತು ಆರು ಪಥಗಳ ಎಕ್ಸ್‌ಪ್ರೆಸ್‌ವೇಗಳನ್ನು ಒಳಗೊಂಡಿದೆ ಮತ್ತು ನಿರ್ಮಾಣದ ಅಂದಾಜು ವೆಚ್ಚ ಸುಮಾರು 8.4 ಶತಕೋಟಿ ಡಾಲರ್ ಆಗಿತ್ತು.

62. ಮಾಹಿತಿ ಹಕ್ಕು ಕಾಯ್ದೆ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಮಹತ್ವದ ಕಾನೂನು ಆಗಿದೆ. ಸರಕಾರದ ಇಲಾಖೆಗಳಲ್ಲಿನ ಮಾಹಿತಿಯನ್ನು ಪಡೆಯುವ ಹಕ್ಕನ್ನು ಸರಕಾರ ಕಾನೂನನ್ನಾಗಿಸಿತು. ರೈಟ್ ಟು ಇನ್ಪರ್ಮೇಷನ್‌ ಕಾಯಿದೆಯನ್ನು ಯುಪಿಎ ಮೊದಲ‌ ಅವಧಿಯ ಸರಕಾರ ಜಾರಿಗೆ ತಂದಿತು. 2005ರಲ್ಲಿ ಸಂಸತ್ತು ಹೊಸ ಕಾನೂನನ್ನು ಅಂಗೀಕರಿಸಿತು. ಆರ್‌ಟಿಐ ಎನ್ನುವುದು ನಾಗರಿಕರ ಮಾಹಿತಿ ಪಡೆಯುವ ಹಕ್ಕಿನ ಬಗ್ಗೆ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ರೂಪಿಸುತ್ತದೆ. ಈ ಕಾಯಿದೆಯಡಿ ಭಾರತದ ಯಾವುದೇ ನಾಗರಿಕರು ಸಾರ್ವಜನಿಕ ಸಂಸ್ಥೆಗಳಿಂದ ಮಾಹಿತಿಯನ್ನು ಕೋರಬಹುದು. ಅದು ಮೂವತ್ತು ದಿನಗಳಲ್ಲಿ ತ್ವರಿತವಾಗಿ ಉತ್ತರಿಸಬೇಕಾಗುತ್ತದೆ. ಮಾಹಿತಿ ಕೋರಿ ನಾಗರಿಕರು ಅರ್ಜಿಯನ್ನು 10ರೂ. ಶುಲ್ಕದೊಂದಿಗೆ ಸಂಬಂಧಪಟ್ಟ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಬಹುದು. 30 ದಿನಗಳಲ್ಲಿ ಇದಕ್ಕೆ ಉತ್ತರ ಬರದಿದ್ದರೆ ಮುಂದಿನ ಹಂತದಲ್ಲಿ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು,

63. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಕಾಯ್ದೆ (MGNREGA)

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಕಾಯ್ದೆಯನ್ನು ಮೊದಲ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು. ಈ ಯೋಜನೆ‌ ವಿಶ್ವದ ಅತಿದೊಡ್ಡ ಉದ್ಯೋಗ ಖಾತರಿ ಕಾರ್ಯಕ್ರಮವಾಗಿದೆ. ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸುವ ಪ್ರಾಥಮಿಕ ಉದ್ದೇಶದೊಂದಿಗೆ 2005ರಲ್ಲಿ ಜಾರಿಗೊಳಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವುದೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾಗಿದೆ. ಉದ್ಯೋಗ ಖಾತ್ರಿ ನೀಡುವುದು ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ಜವಾಬ್ದಾರಿಯಾಗಿದೆ. ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮೊದಲಿಗೆ ಇದು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂದು ಕರೆಯಲಾಗಿತ್ತು.

64. 2004ರಲ್ಲಿ ತಮಿಳುನಾಡಿನಲ್ಲಿ ಸುನಾಮಿ

ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭಾರಿ ಸಮುದ್ರದ ಭೂಕಂಪದಿಂದ ಬೃಹತ್ ಸುನಾಮಿ ಉಂಟಾಗಿತ್ತು. ಹಿಂದೂ ಮಹಾಸಾಗರದಲ್ಲಿ ಎದ್ದ ದೊಡ್ಡ ಅಲೆಗಳಿಂದ‌ ಅನೇಕ ಜನರು ಪ್ರಾಣ ಕಳೆದುಕೊಂಡರು. ಅಂದಾಜು 10,000 ಜನರು ಪ್ರಾಣ ಕಳೆದುಕೊಂಡರು. ಈ ಸುನಾಮಿಯ ಪ್ರಭಾವ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಅಂಡಮಾನ್ ರಾಜ್ಯಗಳ ಮೇಲೆ ಬೀರಿತ್ತು.‌ ಇದು ಶತಮಾನದ ಭೀಕರ ಸುನಾಮಿಯಾಗಿತ್ತು. ಅಮೆರಿಕದ ಭೂಗರ್ಭ ಸಮೀಕ್ಷೆಯ ಪ್ರಕಾರ ಹಿಂದೂ ಮಹಾ ಸಾಗರದಲ್ಲಿ 2004 ರಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸೃಷ್ಟಿಯಾದ ಸುನಾಮಿಯು ಹಿರೋಶಿಮಾದ ಮೇಲೆ ಬಿದ್ದ ಅಣುಬಾಂಬ್‌ಗಿಂತ ಸುಮಾರು 23 ಸಾವಿರ ಪಟ್ಟು ಅಧಿಕ ಶಕ್ತಿಯುತವಾಗಿತ್ತು. ಜೆಟ್ ವಿಮಾನದ ವೇಗದಲ್ಲಿ ಹಿಂದೂ ಮಹಾಸಾಗರದಾದ್ಯಂತ ರಕ್ಕಸ ಅಲೆಗಳನ್ನು ಸೃಷ್ಟಿಸಿತು. ಮಾನವ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಸುನಾಮಿ ಇದಾಗಿತ್ತು.

65. ಚಂದ್ರಯಾನ 1

ಭಾರತವು ಚಂದ್ರನನ್ನು ಅನ್ವೇಷಿಸಲು ಅಕ್ಟೋಬರ್ 2008ರಲ್ಲಿ ಚಂದ್ರಯಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದು ಭಾರತದ ಮೊಟ್ಟಮೊದಲ ಮಾನವರಹಿತ ಚಂದ್ರ ಶೋಧಕವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಇದನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್‌ 2009ರ ತನಕ ಕಾರ್ಯನಿರ್ವಹಿಸಿತ್ತು. ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ಚಂದ್ರಯಾನದ ಮಹತ್ತರ ಸಾಧನೆಯೆಂದರೆ ಚಂದ್ರನ ಮಣ್ಣಿನಲ್ಲಿ ನೀರಿನ ಅಣುಗಳ ಆವಿಷ್ಕಾರವಾಗಿತ್ತು. ಉದ್ದೇಶಿತ ಎರಡು ವರ್ಷಗಳ ಬದಲಿಗೆ ಚಂದ್ರಯಾನ ಕೇವಲ 312 ದಿನಗಳ ಕಾಲ ಕಾರ್ಯನಿರ್ವಹಿಸಿದರೂ ಸಹ, ತನ್ನ ಯೋಜಿತ ಉದ್ದೇಶಗಳ ಪೈಕಿ ಶೇ.95 ರಷ್ಟನ್ನು ಸಾಧಿಸಿತು. ಇದರ ಮಹತ್ವದ ಸಾಧನೆಗಳ ಪೈಕಿ ಚಂದ್ರನ ನೆಲದಲ್ಲಿ ನೀರಿನ ಕಣಗಳ ವ್ಯಾಪಕ ಉಪಸ್ಥಿತಿಯನ್ನು ಶೋಧಿಸಿದ್ದು ಸಹ ಒಂದಾಗಿದೆ.

66. ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ

2008ರ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಭಿನವ್ ಯಶಸ್ಸು ಇಡೀ ಭಾರತೀಯ ಸ್ಪರ್ಧಿಗಳಿಗೆ ಸ್ಫೂರ್ತಿಯಾಗಿತ್ತು. ಇದು ಕಳೆದೊಂದು ದಶಕದಲ್ಲಿ ಶೂಟಿಂಗ್‌ನಲ್ಲಿ ಭಾರತ ಸಾಧಿಸಿರುವ ಪ್ರಗತಿಗೆ ಸಾಕ್ಷಿಯಾಗಿದೆ. ಕೇವಲ ಶೂಟಿಂಗ್‌ಗೆ ಮಾತ್ರ ಸೀಮಿತವಾಗದೆ ಇತರೆ ಕ್ರೀಡಾಳುಗಳಿಗೂ ಅಭಿನವ್ ಮಾದರಿಯಾಗಿದ್ದರು. 2006ರ ಐಎಸ್‌ಎಸ್‌ಎಫ್ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಬಿಂದ್ರಾ ಚಿನ್ನ ಸಾಧನೆ ಮಾಡಿದ್ದರು. ಬಳಿಕ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಇದೇ ಸಾಧನೆ ಪುನರಾವರ್ತಿಸಿದ್ದರು. ಬಳಿಕ 2016ರ ರಿಯೋ ಒಲಿಂಪಿಕ್ ಬಳಿಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. 1980ರಲ್ಲಿ ಪುರುಷರ ಹಾಕಿ ತಂಡ ಚಿನ್ನ ಗೆದ್ದ ಬಳಿಕ ಭಾರತದ ಮೊದಲನೆಯ ಒಲಂಪಿಕ್ ಚಿನ್ನದ ಪದಕವಾಗಿತ್ತು.

67. ಮುಂಬೈ ಮೇಲೆ ಉಗ್ರರ ದಾಳಿ

2008 ನವೆಂಬರ್​ನಲ್ಲಿ ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್ತೊಯ್ಬಾದ ಸುಮಾರು 12 ಉಗ್ರರು ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದರು. ಅಲ್ಲದೆ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬ್ ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗೂ ಅಪಾರ ಆಸ್ತಿಪಾಸ್ತಿ ನಷ್ಟಗಳಿಗೆ ಕಾರಣರಾದರು. ಮುಂಬಯಿ ಮಹಾನಗರ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನ ಮಾಡಿತು. ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗೂ ದೇಶದ ಆಂತರಿಕ ಪೋಲಿಸ್ ಪಡೆ ಹತ್ಯೆ ಮಾಡಿತು. ಅದರಲ್ಲಿ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು. ಸರಣಿ ಭಯೋತ್ಪಾದಕರ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು. ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬದುಕುಳಿದ ಏಕೈಕ ಉಗ್ರ ಅಜ್ಮಲ್ ಕಸಬ್​ನನ್ನು 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು.

68. ಶಿಕ್ಷಣ ಹಕ್ಕು ಕಾಯ್ದೆ

2009ರಲ್ಲಿ ಶಿಕ್ಷಣದ ಹಕ್ಕು ಮಸೂದೆಯನ್ನು ಸಂಸತ್ತು ಅಂಗೀಕರಿಸುವ ಮೂಲಕ ಕಾಯ್ದೆಯಾಗಿ ರೂಪುಗೊಂಡಿತು. ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು ಎನ್ನುವುದನ್ನು ಕಾಯ್ದೆ ಪ್ರತಿಪಾದಿಸುತ್ತದೆ. ಭಾರತೀಯ ಸಂವಿಧಾನದ 21A ವಿಧಿಯ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಪ್ರಾಮುಖ್ಯತೆಯನ್ನು ಕಾಯ್ದೆ ವಿವರಿಸುತ್ತದೆ. ಭಾರತದಲ್ಲಿ 6 ರಿಂದ 14 ವರ್ಷಗಳು ಕಡ್ಡಾಯ ಶಿಕ್ಷಣ ನೀಡುವುದು ಯೋಜನೆ ಉದ್ದೇಶವಾಗಿದೆ‌. ಕಾಯ್ದೆ ಜಾರಿಗೆ ಬಂದಾಗ ಶಿಕ್ಷಣವನ್ನು ಪ್ರತಿ ಮಗುವಿನ ಮೂಲಭೂತ ಹಕ್ಕನ್ನಾಗಿ ಮಾಡುವ 135 ದೇಶಗಳಲ್ಲಿ ಭಾರತವು ಒಂದಾಗಿದೆ. ಈ ಕಾಯ್ದೆಯು ಸಮಾಜದ ವಿವಿಧ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ ಪಡೆಯುವ ಅಂತರವನ್ನು ಕಡಿಮೆ ಮಾಡಿತು. ಎಲ್ಲ ಖಾಸಗಿ ಶಾಲೆಗಳು ಬಡ ಮಕ್ಕಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡುವ ಕಾಯ್ದೆ ಇದಾಗಿದೆ. 6 ವರ್ಷದಿಂದ‌ 14 ವರ್ಷದ ಮಕ್ಕಳಿಗೆ‌ ಅನುಕೂಲವಾಗಿದೆ. ಯೋಜನೆ ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಶಾಲೆಗಳಿಗೆ ಕಳುಹಿಸಬಹುದು. ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಲಾಗಿದೆ.

69. ಕಾಮನ್‌ವೆಲ್ತ್ ಗೇಮ್ಸ್ 2010

ಭಾರತವು 2010ರ ಕಾಮನ್ ವೆಲ್ತ್ ಗೇಮ್ಸ್ ಅನ್ನು ದೆಹಲಿಯಲ್ಲಿ ಆಯೋಜಿಸಿತ್ತು. ಈ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸಿದ್ದ ಭಾರತ, ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಅದ್ವಿತೀಯ ಸಾಧನೆ ಮಾಡಿತು. 38 ಚಿನ್ನ, 27 ಬೆಳ್ಳಿ ಮತ್ತು 35 ಕಂಚು ಸೇರಿದಂತೆ ಒಟ್ಟಾರೆ 101 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ಯು. ಆಸ್ಟ್ರೇಲಿಯಾ ನಂತರ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು. ದೊಡ್ಡ ಕ್ರೀಡಾಕೂಟ ಆಯೋಜನೆ‌ ನಂತರ ಭ್ರಷ್ಟಾಚಾರ ಪ್ರಕರಣಗಳಿಗೆ ಸದ್ದು ಮಾಡಿತು. 2010ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಕುರಿತು ವಿಚಾರಣೆ ನಡೆಸಲು ಕಾಮನ್ ವೆಲ್ತ್ ಕ್ರೀಡೆಗಳ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು 2011ರ ಏಪ್ರಿಲ್ ನಲ್ಲಿ ಬಂಧಿಸಿತ್ತು. ಟೈಮಿಂಗ್ ಸ್ಕೋರ್ ಹಾಗೂ ಫಲಿತಾಂಶ ಯಂತ್ರ ಖರೀದಿಯಲ್ಲಿ ನಡೆದ ಅವ್ಯವಹಾರ ಕುರಿತಂತೆ ಸಿಬಿಐ ತನಿಖೆ ನಡೆಸಿತ್ತು.

70. ಭಾರತದ ಎರಡನೇ ಕ್ರಿಕೆಟ್ ವಿಶ್ವಕಪ್ ಗೆಲುವು

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಕ್ರಿಕೆಟ್ ಟೀಂ ಇಂಡಿಯಾವು 2011ರ ಏಪ್ರಿಲ್ 2 ರಂದು ವಿಶ್ವಕಪ್ ಗೆದ್ದುಕೊಂಡಿತು. ಶ್ರೀಲಂಕಾವನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಶ್ರೀಲಂಕಾ ವಿರುದ್ಧ ಫೈನಲ್‌ ಹಣಾಹಣಿಯಲ್ಲಿ 6 ವಿಕೆಟ್‌ಗಳಿಂದ ಗೆದಿದ್ದ ಭಾರತ ಸತತ 28 ವರ್ಷಗಳ ಬಳಿಕ ಭಾರತ ಈ ಸಾಧನೆ ಮಾಡಿತ್ತು. ಅಂದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 275 ರನ್‌ ಗುರಿ ಹಿಂಬಾಲಿಸಿದ್ದ ಭಾರತ, ಗೌತಮ್‌ ಗಂಭೀರ್‌ 97 ಗಳಿಸಿ ಔಟ್ ಆಗಿದ್ದರು. ಎಂ.ಎಸ್‌ ಧೋನಿ 91 ರನ್ ಗಳಿಸಿ ನಾಟ್‌ ಔಟ್ ಆಗಿ ಉಳಿದು ತಂಡವನ್ನು ಗೆಲುವಿನ ದಡಕ್ಕೆ‌ ಸೇರಿಸಿದ್ದರು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ವೃತ್ತಿ ಜೀವನದ ಸರಿಸುಮಾರು 22 ವರ್ಷಗಳ ಕಾಲ ವಿಶ್ವಕಪ್‌ ಟ್ರೋಫಿಗಾಗಿ ಕಾದಿದ್ದರು. ಜೊತೆಗೆ ವಿಶ್ವಕಪ್‌ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿದ್ದರು. ಅದರಂತೆ ಅಂದು ಭಾರತ ಶ್ರೀಲಂಕಾ ತಂಡವನ್ನು ಮಣಿಸಿ ಎರಡನೇ ಬಾರಿ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಸಚಿನ್‌ ತೆಂಡೂಲ್ಕರ್‌ ಅವರ ಸುದೀರ್ಘ ಅವಧಿಯ ಕನಸು ಈಡೇರಿತು. (ಮುಂದುವರಿಯುವುದು)

ವರದಿ: ಚಂದ್ರಮೋಹನ್ 

Published On - 11:18 am, Sun, 14 August 22

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ