3 ಕೋಟಿ ಹಣ, 5 ಕೆಜಿ ಚಿನ್ನ: ಪರಸ್ಪರ ಹೊಡೆದಾಡಿಕೊಂಡವರನ್ನ ಒಂದುಗೂಡಿಸಿದ ದೇವಿ: ದ್ವೇಷ ಮರೆತು ಜಾತ್ರೆಗೆ ತಯಾರಿ

ಬಾಗಲಕೋಟೆಯ ಗದ್ದನಕೇರಿ ದುರ್ಗಾದೇವಿ ದೇವಸ್ಥಾನದ ಲೆಕ್ಕದ ವಿವಾದ ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿಗೆ ಕಾರಣವಾಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಮುಂಬರುವ ದುರ್ಗಾದೇವಿ ಜಾತ್ರೆ ಹಿನ್ನೆಲೆ ದೇವಿ ಮಹಿಮೆಯಿಂದ ಎಲ್ಲರೂ ದ್ವೇಷ ಮರೆತು ಒಂದಾಗಿದ್ದಾರೆ. ಒಗ್ಗಟ್ಟಿನಿಂದ ಜಾತ್ರೆ ಮಾಡಲು ನಿರ್ಧರಿಸಿದ್ದು, ಸಾಮರಸ್ಯದ ಸಂದೇಶ ಸಾರಿದ್ದಾರೆ.

3 ಕೋಟಿ ಹಣ, 5 ಕೆಜಿ ಚಿನ್ನ: ಪರಸ್ಪರ ಹೊಡೆದಾಡಿಕೊಂಡವರನ್ನ ಒಂದುಗೂಡಿಸಿದ ದೇವಿ: ದ್ವೇಷ ಮರೆತು ಜಾತ್ರೆಗೆ ತಯಾರಿ
ದುರ್ಗಾದೇವಿ ದೇವಸ್ಥಾನದ ಲೆಕ್ಕದ ವಿವಾದ
Image Credit source: tv9 kannada
Edited By:

Updated on: Sep 09, 2026 | 9:55 PM

ಬಾಗಲಕೋಟೆ, ಸೆಪ್ಟೆಂಬರ್​ 09: ಬಾಗಲಕೋಟೆ ತಾಲೂಕಿನ ಗದ್ದನಕೇರಿ ತಾಂಡಾದ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದ 3 ಕೋಟಿ ರೂಪಾಯಿ ಹಣ ಹಾಗೂ 5 ಕೆಜಿ ಚಿನ್ನದ ಲೆಕ್ಕ ಕೇಳಿದ ವಿಚಾರಕ್ಕೆ ಎರಡೂ ಬಣಗಳ ಮಧ್ಯೆ ಕೆಲ ತಿಂಗಳ ಹಿಂದೆ ದೊಡ್ಡ ಮಾರಾಮಾರಿ ನಡೆದಿತ್ತು. ಈ ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಇದೀಗ ಈ ಗಲಾಟೆ ಸುಖಾಂತ್ಯ ಕಂಡಿದೆ. ಮುಂಬರುವ ಜಾತ್ರಾ ಮಹೋತ್ಸವ ಹಿನ್ನೆಲೆ ಬಂಜಾರ ಮುಖಂಡರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಪರಸ್ಪರ ಕಾದಾಡಿಕೊಂಡಿದ್ದ ಎರಡೂ ಬಣಗಳ ಜನರು ದ್ವೇಷ ಮರೆತು ಒಗ್ಗಟ್ಟಿನಿಂದ ಜಾತ್ರೆ ಆಚರಿಸಲು ಮುಂದಾಗಿದ್ದಾರೆ.

ಲೆಕ್ಕ ಕೇಳಿದ್ದಕ್ಕೆ ಕೊಡಲಿ, ರಾಡ್‌ನಿಂದ ಮಾರಾಮಾರಿ

ಜುಲೈ 31ರಂದು ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನದ 3 ಕೋಟಿ ರೂ ಹಣ ಹಾಗೂ 5 ಕೆಜಿ ಚಿನ್ನದ ಲೆಕ್ಕವನ್ನು ಮಂಜುನಾಥ ರಾಠೋಡ್ ಮತ್ತು ಏಕನಾಥ ರಾಠೋಡ್ ಕೇಳಿದ್ದರು. ಈ ವಿಚಾರವಾಗಿ ಬಾಗಲಕೋಟೆ ಜಿ.ಪಂ. ಮಾಜಿ ಸದಸ್ಯ ಹೂವಪ್ಪ ರಾಠೋಡ್ ಅವರ ಸಹೋದರ ಭೋಜಪ್ಪ ರಾಠೋಡ್ ಹಾಗೂ ಮಂಜುನಾಥ ರಾಠೋಡ್ ಗುಂಪುಗಳ ನಡುವೆ ತೀವ್ರ ಘರ್ಷಣೆ ನಡೆದಿತ್ತು.

ಇದನ್ನೂ ಓದಿ: ದೇವಸ್ಥಾನದ 3 ಕೋಟಿ ಹಣ, 5 ಕೆಜಿ ಚಿನ್ನದ ವಿವಾದ: ಎರಡು ಗುಂಪುಗಳ ನಡುವೆ ಮಾರಾಮಾರಿ

ಕೊಡಲಿ, ರಾಡ್‌ಗಳಿಂದ ಬಡಿದಾಡಿಕೊಂಡಿದ್ದರಿಂದ ಮಂಜುನಾಥ ಹಾಗೂ ಏಕನಾಥ ತಲೆಗೆ ಗಂಭೀರ ಗಾಯವಾಗಿ ರಕ್ತ ಹರಿದಿತ್ತು. ಎದುರಾಳಿ ಗುಂಪಿನ ಭೋಜಪ್ಪ ಕೂಡ ಗಾಯಗೊಂಡು ಐಸಿಯು ಸೇರಿದ್ದರು. ರಕ್ತಸಿಕ್ತ ಸ್ಥಿತಿಯಲ್ಲೇ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಷ್ಟೇ ಅಲ್ಲದೆ ಇಡೀ ತಾಂಡಾದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಂಧಾನ ಯಶಸ್ವಿ: ಲೆಕ್ಕ ಒಪ್ಪಿಸಿದ ಮುಖಂಡರು

ಮೂರು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಗೆ ಜುಲೈ ತಿಂಗಳಲ್ಲಿ ನಡೆದ ಜಗಳ ಕರಿನೆರಳು ಬೀರಬಾರದು ಎಂಬ ಉದ್ದೇಶದಿಂದ ಬಂಜಾರ ಸಮುದಾಯದ ಮುಖಂಡರು ನಿರಂತರ ಸಂಧಾನ ಪ್ರಯತ್ನ ನಡೆಸಿದ್ದರು. ಇದೀಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೂವಪ್ಪ ರಾಠೋಡ್ ಹಾಗೂ ಅವರ ತಂಡ ದೇವಸ್ಥಾನದ 3 ಕೋಟಿ ರೂ ಹಣ ಮತ್ತು 5 ಕೆಜಿ ಚಿನ್ನದ ಸಂಪೂರ್ಣ ಲೆಕ್ಕವನ್ನು ನೀಡಿದೆ. ಇದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದೆ. ಇತ್ತ ನವನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪರಸ್ಪರ ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ.

ದುರ್ಗಾದೇವಿ ಜಾತ್ರೆಗೆ ಬರುವಂತೆ ಭಕ್ತರಿಗೆ ಬಂಜಾರ ಮುಖಂಡರ ಕರೆ

‘ದೇವಸ್ಥಾನದ ಲೆಕ್ಕ ಕೊಟ್ಟಿದ್ದೇವೆ. ಎಲ್ಲರೂ ಅದಕ್ಕೆ ಒಪ್ಪಿ ಜಾತ್ರೆಯನ್ನು ವಿಜೃಂಭಣೆಯಿಂದ ಮಾಡಲು ಒಪ್ಪಿದ್ದಾರೆ. ಕೇಸ್​ಗಳನ್ನು ಎರಡು ಗುಂಪಿನವರು ವಾಪಸ್ ಪಡೆಯಲಿದ್ದಾರೆ‌. ಭಕ್ತರು ಯಾರೂ ಆತಂಕ ಪಡಬೇಕಾಗಿಲ್ಲ, ನಿರ್ಭಿತಿಯಿಂದ ಜಾತ್ರೆಗೆ ಬನ್ನಿ’ ಎಂದು ಬಂಜಾರ ಮುಖಂಡರು ಭಕ್ತರಿಗೆ ಕರೆ ನೀಡಿದ್ದಾರೆ.

ನವೆಂಬರ್ 13ರಿಂದ ಮೂರು ದಿನಗಳ ಕಾಲ ಅದ್ಧೂರಿ ಜಾತ್ರೆ

ಸಂಧಾನ ಯಶಸ್ವಿಯಾಗಿರುವುದನ್ನು ಗದ್ದನಕೇರಿ ತಾಂಡಾದ ಬಂಜಾರ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ. ಬರುವ ನವೆಂಬರ್ 13, 14 ಮತ್ತು 15 ರಂದು ಮೂರು ದಿನಗಳ ಕಾಲ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ ವಿಜೃಂಭಣೆಯಿಂದ ನೆರವೇರಲಿದೆ. ದೇಶದಾದ್ಯಂತ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ.

Compramise for Villege Festival: 3 ವರ್ಷಗಳ ಹಿಂದೆ ಬಡಿದಾಡಿಕೊಂಡವರು ಎಲ್ಲ ಮರೆತು ಒಂದಾಗಿದ್ದು ಹೇಗೆ ಗೊತ್ತಾ?

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:37 pm, Wed, 9 September 26

Loading...
Unable to load recommendations.
Follow Us