ಬಾಗಲಕೋಟೆ: ಅಕಾಲಿಕ ಮಳೆಗೆ ರೈತರು ಕಂಗಾಲು; ಬಾಗಲಕೋಟೆ ಜಿಲ್ಲೆಯಲ್ಲಿ 490 ಹೆಕ್ಟೇರ್ ಪ್ರದೇಶದ ದ್ರಾಕ್ಷಿ ನಾಶ
ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಡು 490 ಹೆಕ್ಟೇರ್ ಪ್ರದೇಶದ ದ್ರಾಕ್ಷಿ ಬೆಳೆ ಹಾನಿಯಾಗಿರೋದಾಗಿ ವರದಿ ನೀಡಿದ್ದಾರೆ. ಆದರೆ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳು ಪ್ರತಿಯೊಬ್ಬ ದ್ರಾಕ್ಷಿ ಬೆಳೆದ ರೈತರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡುತ್ತಿಲ್ಲ. ಕೆಲವೊಂದು ಕಡೆ ಮಾತ್ರ ಭೇಟಿ ನೀಡಿ ವರದಿ ನೀಡುತ್ತಿದ್ದಾರೆ.
ಬಾಗಲಕೋಟೆ: ದಾಳಿಂಬೆ, ಚಿಕ್ಕು, ಪೇರಲೆ ಹಣ್ಣು ಬೆಳೆಯುವುದಕ್ಕೆ ಮೊದಲಿನಿಂದಲೂ ಹೆಸರಾದ ಜಿಲ್ಲೆ ಎಂದರೆ ಅದು ಬಾಗಲಕೋಟೆ. ಜಿಲ್ಲೆಯ ಕಲಾದಗಿ ಭಾಗದಲ್ಲಿ ದಾಳಿಂಬೆ, ಚಿಕ್ಕು ಹಣ್ಣುಗಳನ್ನು ಸಮೃದ್ಧವಾಗಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಇನ್ನು ಜಮಖಂಡಿ ಗಡಿಭಾಗದಲ್ಲಿ, ಬಾದಾಮಿ ತಾಲ್ಲೂಕಿನ ಕುಳಗೇರಿ ಭಾಗದಲ್ಲಿ ಪೇರಲೆ ಹಣ್ಣುಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ (Grapes crop) ಕೂಡ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ, ಜಮಖಂಡಿ ತಾಲ್ಲೂಕಿನ ಸಾವಳಕಿ, ಚಿಕ್ಕಲಕಿ ಭಾಗದಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಾರೆ. ಆದರೆ ಈ ಬಾರಿ ಸುರಿದ ಅಕಾಲಿಕ ಮಳೆ (Karnataka rains) ಮಾತ್ರ ದ್ರಾಕ್ಷಿ ಬೆಳೆಗಾರರಿಗೆ ಬಾರಿ ಸಂಕಷ್ಟ ತಂದೊಡ್ಡಿದೆ. ನಿರಂತರವಾಗಿ ಸುರಿದ ಮಳೆಯ ಪರಿಣಾಮ ದ್ರಾಕ್ಷಿಯ ಹೂ ಹಾಗೂ ಎಳೆ ಚಿಗುರು ಎಲ್ಲವೂ ಉದುರಿ ಬಾರಿ ನಷ್ಟವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬರೊಬ್ಬರಿ 490 ಹೆಕ್ಟೇರ್ ದ್ರಾಕ್ಷಿ ಮಳೆಗೆ ಹಾನಿ ಮಳೆ ಶುರುವಾದ ಕೆಲ ದಿನ ಯಾವುದೇ ಬೆಳೆ ಹಾನಿಯಾಗಿಲ್ಲ ಎನ್ನುತ್ತಲೇ ಬಂದಿದ್ದ ಅಧಿಕಾರಿಗಳು, ಇತ್ತೀಚೆಗೆ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿದೆ. ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಡು 490 ಹೆಕ್ಟೇರ್ ಪ್ರದೇಶದ ದ್ರಾಕ್ಷಿ ಬೆಳೆ ಹಾನಿಯಾಗಿರೋದಾಗಿ ವರದಿ ನೀಡಿದ್ದಾರೆ. ಆದರೆ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳು ಪ್ರತಿಯೊಬ್ಬ ದ್ರಾಕ್ಷಿ ಬೆಳೆದ ರೈತರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡುತ್ತಿಲ್ಲ. ಕೆಲವೊಂದು ಕಡೆ ಮಾತ್ರ ಭೇಟಿ ನೀಡಿ ವರದಿ ನೀಡುತ್ತಿದ್ದಾರೆ. ಇದರಿಂದ ಸಮೀಕ್ಷೆ ಪರಿಪೂರ್ಣವಾಗೋದಿಲ್ಲ ಎಲ್ಲ ರೈತರ ಹೊಲಕ್ಕೆ ಭೇಟಿ ನೀಡಿ ಸರಿಯಾದ ದ್ರಾಕ್ಷಿ ಬೆಳೆ ಹಾನಿ ವರದಿ ಸಲ್ಲಿಸಬೇಕು ಎಂದು ದ್ರಾಕ್ಷಿ ಬೆಳೆದ ರೈತ ಭೀಮಶಿ ಹಳಿಂಗಳಿ ಹೇಳಿದ್ದಾರೆ.
ವಿಮಾ ಕಂಪನಿಯಿಂದಲೂ ದ್ರಾಕ್ಷಿ ಬೆಳೆಗೆ ಬರುತ್ತಿಲ್ಲ ಸರಿಯಾದ ಪರಿಹಾರ ಪ್ರತಿ ವರ್ಷವೂ ದ್ರಾಕ್ಷಿ ಬೆಳೆಗಾರರು ಲಕ್ಷಾಂತರ ರೂಪಾಯಿ ಸಾಲ ಮಾಡಿ ದ್ರಾಕ್ಷಿ ಬೆಳೆಯುತ್ತಾರೆ. ಎಕರೆಗೆ ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡುತ್ತಾರೆ. ಆದರೆ ಅಕಾಲಿಕ ಮಳೆ ಮಾತ್ರ ರೈತರನ್ನು ಪುನಃ ಸಾಲಗಾರರನ್ನಾಗಿ ಮಾಡುತ್ತಿದೆ. ಇನ್ನು ಅಕಾಲಿಕ ಮಳೆ ಪರಿಣಾಮ ನೊಂದ ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ರೈತ ಶ್ರೀಶೈಲ್ ಯಳ್ಳಿಗುತ್ತಿ ಹೊಲದಲ್ಲಿನ ಮೂರು ಎಕರೆ ದ್ರಾಕ್ಷಿ ತೋಟವನ್ನೇ ಕಡಿದು ಹಾಕಿದ್ದಾರೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ದ್ರಾಕ್ಷಿ ನಾಶ ಆದರೂ ಸರಿಯಾಗಿ ರೈತರಿಗೆ ವಿಮೆ ಹಣ ಸಿಗುತ್ತಿಲ್ಲವಂತೆ. ರೈತರು ಎಕರೆಗೆ ಸಾವಿರಾರು ರೂಪಾಯಿ ವಿವಿಧ ವಿಮಾ ಕಂಪನಿಗಳಿಗೆ ತುಂಬಿರುತ್ತಾರೆ. ಆದರೆ ವಿಮಾ ಕಂಪನಿಗಳಿಂದಲೂ ಸರಿಯಾಗಿ ವಿಮಾ ಹಣ ಬರುತ್ತಿಲ್ಲ, ಸರಕಾರ ಈ ಬಗ್ಗೆ ಗಮನಹರಿಸಿ ವಿಮಾ ಹಣವನ್ನು ಕೊಡಿಸಬೇಕೆಂದು ದ್ರಾಕ್ಷಿ ಬೆಳೆಗಾರ ರೈತ ಮಲ್ಲಪ್ಪ ಆಗ್ರಹ ಮಾಡಿದ್ದಾರೆ.
ಒಟ್ಟಾರೆ ಅಕಾಲಿಕ ಮಳೆ ವಿವಿಧ ಬೆಳೆ ಜೊತೆಗೆ ದ್ರಾಕ್ಷಿ ಬೆಳೆಗಾರರಿಗೂ ಬಾರಿ ಸಂಕಷ್ಟ ತಂದೊಡ್ಡಿದ್ದು, ದ್ರಾಕ್ಷಿ ಬೆಳೆಗಾರರು ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಮೋಡ ಕವಿದ ವಾತಾವರಣದಿಂದ ವಿಜಯಪುರದ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ
ಮಳೆಕಾಟದ ಮಧ್ಯೆ ಕಾಡು ಹಂದಿ, ಮಂಗಗಳ ಕಾಟ; ಪಪ್ಪಾಯಿ ಬೆಳೆ ನಾಶ, ಕಂಗಾಲಾದ ರೈತ