AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಕೆರೆಯಲ್ಲಿ ಈಜಲು ತೆರಳಿದ್ದ 12 ವರ್ಷದ ಇಬ್ಬರು ಬಾಲಕರು ಸಾವು

ಬಿಸಿಲಿನ ತಾಪದಿಂದ ಜನ ಕಂಗೆಟ್ಟು ಹೋಗಿದ್ದಾಗ ತಂಪೆರೆದ ಮಳೆರಾಯ ಮಂದಹಾಸ ಮೂಡಿಸಿದ್ದ. ಆದ್ರೆ ನೀರಿನಿಂದಲೇ 11 ಜನ ಮೃತಪಟ್ಟಿದ್ದಾರೆ. ಕೆರೆಗೆ ಈಜಲು ಹೋಗಿದ್ದ ಬಾಲಕರು ಮೃತಪಟ್ಟಿರುವ ಘಟನೆಗಳು ಬಾಗಲಕೋಟೆ, ಹಾಸನ, ರಾಮನಗರ, ಉತ್ತರಕನ್ನಡದಲ್ಲಿ ನಡೆದಿದೆ. ಭಾರೀ ಮಳೆಯಿಂದಾಗಿ ಕೆರೆಗಳು ತುಂಬಿದ್ದು ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ.

ಬಾಗಲಕೋಟೆ: ಕೆರೆಯಲ್ಲಿ ಈಜಲು ತೆರಳಿದ್ದ 12 ವರ್ಷದ ಇಬ್ಬರು ಬಾಲಕರು ಸಾವು
ಕೆರೆಯಲ್ಲಿ ಈಜಲು ತೆರಳಿದ್ದ 12 ವರ್ಷದ ಇಬ್ಬರು ಬಾಲಕರು ಸಾವು
ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು|

Updated on: May 20, 2024 | 2:12 PM

Share

ಬಾಗಲಕೋಟೆ, ಮೇ.20: ರಾಜ್ಯದಲ್ಲಿ ಮಳೆಯಿಂದ ಕೆರೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಅನಾಹುತಗಳು ಕೂಡ ಸಂಭವಿಸುತ್ತಿವೆ. ಇತ್ತೀಚೆಗೆ ಹಾಸನದಲ್ಲಿ ನಾಲ್ವರು, ರಾಮನಗರದಲ್ಲಿ ಮೂವರು ನೀರು ಪಾಲಾಗಿದ್ದರು (Death). ಈಗ ಇದೇ ರೀತಿಯ ಮತ್ತೊಂದು ದುರಂತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಬನಹಟ್ಟಿ ನಗರದ ಹೊರ ವಲಯದಲ್ಲಿರುವ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಬೆಳಿಗ್ಗೆ 09 ಗಂಟೆಗೆ ಕೆರೆಯಲ್ಲಿ ಈಜಲು ಹೋಗಿದ್ದ ಸಂಜಯ್ ತಳವಾರ್ (12), ಸಮರ್ಥ್ ತಳವಾರ್ (12) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯಲ್ಲಿ ನೀರು ಜಾಸ್ತಿ ಇದ್ದರಿಂದ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಬನಹಟ್ಟಿ ಕೆರೆ ತುಂಬಿತ್ತು. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಸ್ಥಳೀಯ ಈಜುಗಾರರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಶವ ಹೊರ ತೆಗೆದಿದ್ದಾರೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬನಹಟ್ಟಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಂಡ್ಯದಲ್ಲೂ ಬಾಲಕರು ನೀರುಪಾಲು

ಮೇ 16ರಂದು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಟಿ.ತಿಮ್ಮನಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲಾಗಿದ್ರು. ಶಾಲೆಗೆ ರಜೆ ಅಂತಾ ಮಜಾ ಮಾಡಲು ಹೋಗಿ ಜೀವನ್, ಸಾತ್ವಿಕ್, ವಿಶ್ವ ಮತ್ತು ಪೃಥ್ವಿ ದಾರುಣವಾಗಿ ಅಂತ್ಯ ಕಂಡಿದ್ರು.

ಇದನ್ನೂ ಓದಿ: ವಿಧಾನಸೌಧದ ಬಳಿ ಮಹಾಂತೇಶ್ ಕೌಜಲಗಿ ಕಾರು ಅಪಘಾತ, ಸಣ್ಣಪುಟ್ಟ ಗಾಯಗಳೊಂದಿಗೆ ಶಾಸಕ ಪಾರು

ರಾಮನಗರದಲ್ಲಿ ಮೂವರು ಬಾಲಕರು ನೀರುಪಾಲು

ಇನ್ನು ಇತ್ತೀಚೆಗೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ಹೊಳೆಯಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟಿದ್ದಾರೆ. ರಾಮನಗರದ ಸುಲ್ತಾನ್‌ ನಗರದ 8 ವಿದ್ಯಾರ್ಥಿಗಳು ಮಸೀದಿಗೆ ಹೋಗಿ ನಮಾಜ್‌ ಮುಗಿಸಿದ್ರು. ಅಲ್ಲಿಂದ ಮನೆಗೆ ತೆರಳದೇ, ಫೋಟೋ ಶೂಟ್‌ಗೆ ಅಂತಾ ಕೈಯಲ್ಲಿ ಮೊಬೈಲ್ ಹಿಡಿದು ಅಚ್ಚಲು ಗ್ರಾಮದ ಬಳಿ ಇರೋ ಬೆಟ್ಟ ಹತ್ತಿದ್ರು. ಈ ವೇಳೆ ಬಾವಿ ಆಕಾರದಲ್ಲಿ ಇರೋ ತಗ್ಗು ಕಂಡಿದೆ. ಆಗ ಶಾಬಾಜ್‌, ಸುಲ್ತಾನ್‌ ಹಾಗೂ ರಿಹಾನ್‌ ಖಾನ್‌ ಅನ್ನೋ ಮೂವರು ನೀರಿಗಿಳಿದಿದ್ದಾರೆ. ಆಳ ಗೊತ್ತಿಲ್ಲದೇ ಇಳಿದವರು ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಉಳಿದ ಐವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ನೀರು ಪಾಲು

ಬಾಗಲಕೋಟೆ, ಹಾಸನ, ರಾಮನಗರ ಸೇರಿ ಒಂಬತ್ತು ಜನರು ಮೃತಪಟ್ಟಿದ್ರೆ, ಉತ್ತರಕನ್ನಡದಲ್ಲಿ ಮತ್ತಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ 15 ಕ್ಕೂ ಹೆಚ್ಚು ಜನ ಸ್ನಾನ ಮಾಡಲು ತೆರಳಿದ್ರು. ಆದ್ರೆ ಹೊಳೆಯಲ್ಲಿ ಸ್ನಾನ ಮಾಡ್ಬೇಕಾದ್ರೆ ಕಂಡೆಕೋಡ್ಲು ನಿವಾಸಿಗಳಾದ ಸೂರಜ್ ನಾಯ್ಕ್, ಪಾರ್ವತಿ ಶಂಕರ ನಾಯ್ಕ ಮೃತಪಟ್ಟಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ