ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವು! ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ
ಬಳ್ಳಾರಿಯ ಬಿಎಂಇಆರ್‌ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಅಕ್ಕಮ್ಮ ಸಾವನ್ನಪ್ಪಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಆಪರೇಷನ್ ನಂತರ ಸೂಕ್ತ ಔಷಧಿ, ಚಿಕಿತ್ಸೆ ಸಿಗದೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಖಾಸಗಿ ಔಷಧಿ, ಪರೀಕ್ಷೆಗಳಿಗೆ ಹಣ ಖರ್ಚು ಮಾಡಿಸಿದ್ದಾರೆಂದೂ ಆರೋಪಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಳ್ಳಾರಿ, ಏಪ್ರಿಲ್ 24: ಜಿಲ್ಲೆಯ ಬಿಎಂಇಆರ್‌ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ (Cancer) ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆ ಸಾವನ್ನಪ್ಪಿದ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆಪರೇಷನ್ ನಂತರ ಸೂಕ್ತ ಔಷಧಿ, ಇಂಜೆಕ್ಷನ್ ನೀಡದ ಕಾರಣದಿಂದ ವೈದ್ಧೆ ಸಾವನ್ನಪ್ಪಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರ ಅಳಲು
ಬಾಯಿಯ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಕಮ್ಮ (70) ಎಂಬುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 17ರಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಪರೇಷನ್ ಯಶಸ್ವಿಯಾಗಿ ನಡೆದಿತ್ತು ಎಂದು ವೈದ್ಯರು ತಿಳಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ವೈದ್ಯರು ಸರಿಯಾಗಿಯೇ ನೋಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ಆಪರೇಷನ್ ಬಳಿಕ ಆಸ್ಪತ್ರೆ ಸಿಬ್ಬಂದಿ ಅಗತ್ಯವಿರುವ ಸಮಯಕ್ಕೆ ಇಂಜೆಕ್ಷನ್, ಔಷಧಿ ಹಾಗೂ ಇತರೆ ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ವೈದ್ಯರು ಸೂಚನೆ ನೀಡಿದ್ದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅಕ್ಕಮ್ಮ ಬದುಕುತ್ತಿದ್ದರು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಮೆಡಿಸಿನ್ಗೆ ಸಾವಿರಾರು ರೂ. ಖರ್ಚು!
ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲ್ಲವೆಂದು ಹೇಳಿ ಖಾಸಗಿ ಮೆಡಿಸಿನ್ ಖರೀದಿಸಲು ಹೇಳಲಾಗಿದ್ದು, ಸುಮಾರು 40 ಸಾವಿರ ರೂ. ಖರ್ಚು ಮಾಡಿಸಿದ್ದಾರೆ ಎಂಬ ಆರೋಪವೂ ಇದೆ. ಜೊತೆಗೆ, ಖಾಸಗಿ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಮಾಡಿಸಲು ಒತ್ತಾಯಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಅಕ್ಕಮ್ಮ ಸಾವಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



