AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರದಲ್ಲಿ ಕಾಡಾನೆಗೆ ಲಾರಿ ಗುದ್ದಿಸಲು ಯತ್ನಿಸಿದ ಚಾಲಕ: ಕೇರಳ ಚಾಲಕನಿಗೆ 5,000 ರೂ. ದಂಡ

ಬಂಡೀಪುರ-ಊಟಿ ಹೆದ್ದಾರಿಯಲ್ಲಿ ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನಿಸಿದ ಚಾಲಕನಿಗೆ ಅರಣ್ಯ ಇಲಾಖೆ ₹5,000 ದಂಡ ವಿಧಿಸಿದೆ. ಡ್ಯಾಶ್ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳನ್ನು ಕಂಡಾಗ ವಾಹನಗಳ ವೇಗ ತಗ್ಗಿಸುವಂತೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಬಂಡೀಪುರದಲ್ಲಿ ಕಾಡಾನೆಗೆ ಲಾರಿ ಗುದ್ದಿಸಲು ಯತ್ನಿಸಿದ ಚಾಲಕ: ಕೇರಳ ಚಾಲಕನಿಗೆ 5,000 ರೂ. ದಂಡ
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on: Oct 03, 2026 | 8:04 AM

Share

ಮುಖ್ಯಾಂಶಗಳು

  • ಕಾಡಾನೆಯೊಂದಕ್ಕೆ ಲಾರಿ ಡಿಕ್ಕಿ ಹೊಡೆಸಲು ಯತ್ನ
  • ಕೇರಳ ಮೂಲದ ಲಾರಿ ಚಾಲಕನಿಗೆ 5,000 ರೂ. ದಂಡ
  • ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ವನ್ಯಜೀವಿಗಳ ಸುರಕ್ಷತೆಯನ್ನು ಗಾಳಿಗೆ ತೂರಿದ ಚಾಲಕ

ಗುಂಡ್ಲುಪೇಟೆ, ಅ.3: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (Bandipur Tiger Reserve) ವ್ಯಾಪ್ತಿಯ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗೆ ಬಂದಿದ್ದ ಕಾಡಾನೆಯೊಂದಕ್ಕೆ ಲಾರಿ ಡಿಕ್ಕಿ ಹೊಡೆಸಲು ಯತ್ನಿಸಿದ ಅಮಾನವೀಯ ಹಾಗೂ ಅಪಾಯಕಾರಿ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಕೇರಳ ಮೂಲದ ಲಾರಿ ಚಾಲಕನಿಗೆ 5,000 ರೂ. ದಂಡ ವಿಧಿಸಿ ತಕ್ಕ ಶಿಸ್ತುಕ್ರಮ ಕೈಗೊಂಡಿದೆ.

ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ವನ್ಯಜೀವಿಗಳ ಸುರಕ್ಷತೆಯನ್ನು ಗಾಳಿಗೆ ತೂರಿ, ವಾಹನವನ್ನು ಬೇಜವಾಬ್ದಾರಿಯಿಂದ ಚಲಾಯಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಗುಂಡ್ಲುಪೇಟೆ-ಊಟಿ ಮಾರ್ಗದಲ್ಲಿ ಲಾರಿ ಚಾಲಕ ಸಾಗುತ್ತಿದ್ದಾಗ, ಹತ್ತಿರದ ಕಾಡಿನಿಂದ ಬಂದ ಕಾಡಾನೆಯೊಂದು ದಿಢೀರನೆ ರಸ್ತೆ ದಾಟಲು ಬಂದಿದೆ.

ರಸ್ತೆಯಲ್ಲಿ ಬೃಹತ್ ಆನೆ ಇರುವುದು ಕಣ್ಣಿಗೆ ಕಾಣಿಸುತ್ತಿದ್ದರೂ ಚಾಲಕ ಲಾರಿಯ ವೇಗವನ್ನು ತಗ್ಗಿಸದೆ, ಆನೆಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿ ಲಾರಿಯನ್ನು ಮುನ್ನುಗ್ಗಿಸಿದ್ದಾನೆ. ಈ ಲಾರಿಯ ಹಿಂಭಾಗದಲ್ಲಿ ಬರುತ್ತಿದ್ದ ಕಾರೊಂದರ ‘ಡ್ಯಾಶ್ ಕ್ಯಾಮೆರಾ’ದಲ್ಲಿ ಚಾಲಕನ ಈ ಪುಂಡಾಟ ಸಂಪೂರ್ಣವಾಗಿ ಸೆರೆಯಾಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆಗಿಳಿದರು.

ವೀಡಿಯೋ ಆಧರಿಸಿ ತನಿಖೆ ಕೈಗೊಂಡ ಬಂಡೀಪುರ ವಲಯ ಅರಣ್ಯಾಧಿಕಾರಿ (RFO) ಮೋಹನ್ ಕುಮಾರ್ ಅವರು, ಲಾರಿ ಹಾಗೂ ಕೇರಳ ಮೂಲದ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಚಾಲಕನನ್ನು ಬಂಡೀಪುರ ಅರಣ್ಯ ಇಲಾಖೆಯ ಕಚೇರಿಗೆ ಕ ಕರೆಸಿಕೊಂಡು ಘಟನೆಯ ಕುರಿತು ಸುದೀರ್ಘ ವಿಚಾರಣೆ ನಡೆಸಲಾಯಿತು. ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5,000 ರೂ. ನಗದು ದಂಡ ವಿಧಿಸಲಾಯಿತು.

ಇದನ್ನೂ ಓದಿ: ಹಾಸನ: ಅಪಘಾತದಲ್ಲಿ ಬ್ರೈನ್ ಡೆಡ್ ಆದ ಯುವ ಇಂಜಿನಿಯರ್ ಅಂಗಾಂಗ ದಾನ: ದುಃಖದಲ್ಲೂ ಮಾದರಿಯಾದ ಪೋಷಕರು

ವನ್ಯಜೀವಿ ವಲಯಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ಚಾಲಕನಿಂದ ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ವನ್ಯಜೀವಿಗಳನ್ನು ಕಂಡಾಗ ವಾಹನಗಳ ವೇಗ ತಗ್ಗಿಸಿ, ಅವುಗಳಿಗೆ ಹಾದಿ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More