ಬೆಳಗಾವಿ ಮಕ್ಕಳ ಮಾರಾಟ ಪ್ರಕರಣ: ಆರೋಪಿ ಅಬ್ದುಲ್ನಿಂದ ಭ್ರೂಣಹತ್ಯೆ, ತನಿಖೆಯಲ್ಲಿ ಬಯಲು
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಮಕ್ಕಳ ಮಾರಾಟ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಆಘಾತಕಾರಿ ವಿಚಾರ ಬಯಲಾಗಿದೆ. ಆರೋಪಿ, ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣ ಹತ್ಯೆ ಮಾಡುತ್ತಿದ್ದ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಬೆಳಗಾವಿ, ಜೂನ್ 16: ಮಕ್ಕಳ ಮಾರಾಟ ಪ್ರಕರಣದ ಆರೋಪಿ, ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣ ಹತ್ಯೆ (Feticide) ಮಾಡುತ್ತಿದ್ದ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್ಎಸ್ಎಲ್ ತಂಡ ಇಂದು (ಜೂ.16) ಕಿತ್ತೂರು (Kittur) ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿಯ ನಕಲಿ ವೈದ್ಯನ ಫಾರ್ಮ್ಹೌಸ್ ಪರಿಶೀಲಿಸಿತು. ಅಬ್ದುಲ್ ಗಫಾರ್ ಲಾಡಖಾನ್ ಫಾರ್ಮ್ ಹೌಸ್ ಪರಿಶೀಲನೆ ವೇಳೆ ತೋಟದಲ್ಲಿ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿವೆ.
ಈ ಭ್ರೂಣಗಳನ್ನು ತಂದು ಹೂಳುತ್ತಿದ್ದ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ನ ಸಹಾಯಕ ರೋಹಿತ್ ಕುಪ್ಪಸಗೌಡರ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್ ಗಫಾರ್ ಲಾಡಖಾನ್ ಬಳಿ ರೋಹಿತ್ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ್, ಮೂವರು ಸಿಪಿಐ ನೇತೃತ್ವದಲ್ಲಿ ಕಾರ್ಯಾರಣೆ ನಡೆದಿದೆ.
ಏನಿದು ಮಕ್ಕಳ ಮಾರಾಟ ಜಾಲ
ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಸೇರಿದಂತೆ ಐವರು ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.
ಇದನ್ನೂ ಓದಿ: ಜಮೀರ್ ಅಹ್ಮದ್ ಸಂಧಾನಕ್ಕೂ ಬಗ್ಗದ ರೌಡಿಗಳು: ಫೇಸ್ಬುಕ್ನಲ್ಲಿ ಬೆದರಿಕೆ ಹಾಕಿದ್ದವನಿಂದ ನಡೆಯಿತು ಭೀಕರ ಕೊಲೆ
ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಹೆಣ್ಮುಕ್ಕಳನ್ನು ಟಾರ್ಗೆಟ್ ಮಾಡಿ ನಕಲಿ ವೈದ್ಯ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು.
ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಮಕ್ಕಳ ಮಾರಾಟ ಮಾಡುತ್ತಿದ್ದ ಆರೋಪಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣ ಹತ್ಯೆ ಕೂಡ ಮಾಡಿದ್ದಾನೆ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Sun, 16 June 24