ಬೆಳಗಾವಿ: 24 ಸಾವಿರ ಲೀಟರ್ ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಟ್ಯಾಂಕರ್ ಜಪ್ತಿ
ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಸಮೀಪ ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯ ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ಅಬಕಾರಿ ಇಲಾಖೆ ಜಪ್ತಿ ಮಾಡಿದೆ. ಟ್ಯಾಂಕರ್ ಮತ್ತು ಮದ್ಯದ ಒಟ್ಟು ಮೌಲ್ಯ 32.40 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಚಾಲಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ವಾಹನದ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು
- 24 ಸಾವಿರ ಲೀಟರ್ ಅಕ್ರಮ ಮದ್ಯ ಸಾಗಣೆ ಪತ್ತೆ
- ಟ್ಯಾಂಕರ್ ಮತ್ತು ಮದ್ಯದ ಮೌಲ್ಯ ₹32.40 ಲಕ್ಷ
- ಚಾಲಕನಿಗೆ ನೋಟಿಸ್, ವಾಹನ ಮಾಲೀಕನ ವಿರುದ್ಧ ಪ್ರಕರಣ
ಬೆಳಗಾವಿ, ಅಕ್ಟೋಬರ್ 12: ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯ ಸಾಗಿಸುತ್ತಿದ್ದ ಭಾರಿ ಗಾತ್ರದ ಟ್ಯಾಂಕರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಶನಿವಾರ ಮಧ್ಯರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಜಪ್ತಿ ಮಾಡಲಾದ ಟ್ಯಾಂಕರ್ ಮತ್ತು ಮದ್ಯದ ಒಟ್ಟು ಮೌಲ್ಯ ₹32.40 ಲಕ್ಷ ಎಂದು ಅಂದಾಜಿಸಲಾಗಿದೆ.
ಮಧ್ಯರಾತ್ರಿ ವಾಹನ ತಪಾಸಣೆ ವೇಳೆ ಪತ್ತೆ
ಅಬಕಾರಿ ಇಲಾಖೆ ಅಧಿಕಾರಿಗಳ ಪ್ರಕಾರ, ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸುಮಾರು 12.25ರ ವೇಳೆಗೆ ಗಸ್ತು ತಿರುಗುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಈ ವೇಳೆ KA-25-AA-3750 ನೋಂದಣಿ ಸಂಖ್ಯೆಯ ಭಾರತ್‌ಬೆನ್ಜ್ ಟ್ಯಾಂಕರ್ ಅನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 24 ಸಾವಿರ ಲೀಟರ್ ಮದ್ಯ ಪತ್ತೆಯಾಗಿದೆ.
ಚಾಲಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್
ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ನಿವಾಸಿ ಬಂಡೆನವಾಜ್ ನಬಿ ಸಾಬ್ ತಿಗಣಿಬಿದರಿ ಎಂಬಾತ ಟ್ಯಾಂಕರ್ ಚಾಲಕನಾಗಿದ್ದಾನೆ. ವಿಚಾರಣೆಗಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 35(3) ಅಡಿಯಲ್ಲಿ ಹಾಜರಾಗುವಂತೆ ಚಾಲಕನಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನದ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರು, ರಾಮದುರ್ಗ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೈಲಹೊಂಗಲ ಅಬಕಾರಿ ವಲಯದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




