ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಅವಘಡ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು, 7 ಜನ ಗಂಭೀರ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಗಾ ಮಾತೆ ಮೂರ್ತಿ ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಶಿವಮೊಗ್ಗದ ಭದ್ರಾವತಿಯ ಮೂಲೆಕಟ್ಟೆ ತಿರುವಿನಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಸುನೀಗಿದ್ದಾರೆ.

ಬೆಳಗಾವಿ, ಅಕ್ಟೋಬರ್ 11: ನವರಾತ್ರಿ ಮೊದಲ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿದ್ದು, ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರಂತ ನಡೆದಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಹಂಜಾನಟ್ಟಿ ಗ್ರಾಮದ ನಿವಾಸಿಗಳಾದ ಪ್ರಕಾಶ ವಾಸೇದಾರ(28), ದಾನಪ್ಪ ಜಾನಗೊರೆ(26) ಮತ್ತು ಶಿವಪ್ಪ ಖಾನಾಪುರೆ(30) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ದುರ್ಗಾ ಮಾತೆ ಮೂರ್ತಿಯನ್ನು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಗಾಯಾಳುಗಳನ್ನು ಬಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು-ಬೈಕ್ ನಡುವೆ ಡಿಕ್ಕಿ: ಓರ್ವ ಸಾವು
ಶಿವಮೊಗ್ಗದ ಭದ್ರಾವತಿಯ ಮೂಲೆಕಟ್ಟೆ ತಿರುವಿನಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಅಸುನೀಗಿದ್ದಾರೆ. ಮೃತನನ್ನು ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸಂಗಯ್ಯ (40) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಸಹ ಸವಾರ ಮುರುಳೀಧರ್‌ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಕಲರಹಾಕಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:47 pm, Sun, 11 October 26




