ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರ ಉದ್ಧಟತನ; ತಾಕತ್ತಿದ್ರೆ ಎಂಇಎಸ್ ನಿಷೇಧಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸವಾಲ್
ಮಹಾಜನ್ ವರದಿ ಅನ್ವಯವೇ ಗಡಿ ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪ ಮಂಡಿಸಲಿ ಎಂದು ಬೆಳಗಾವಿಯಲ್ಲಿ ಸಭೆ ನಡೆಸಿ ಎಂಇಎಸ್ ಪುಂಡರು ಆಗ್ರಹಿಸಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಎಂಇಎಸ್ ಪುಂಡರು ಉದ್ಧಟತನ ಪ್ರದರ್ಶಿಸಿದ್ದಾರೆ. ತಾಕತ್ತಿದ್ದರೆ ಎಂಇಎಸ್ ನಿಷೇಧಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಎಂಇಎಸ್ ಪುಂಡರು ಸವಾಲ್ ಹಾಕಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಅಧ್ಯಕ್ಷ ದೀಪಕ್ ದಳವಿ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಕರ್ನಾಟಕ ಸರ್ಕಾರಕ್ಕೆ ಎಂಇಎಸ್ (MES) ಸವಾಲ್ ಹಾಕಿದೆ. ಜತೆಗೆ ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಉನ್ನತ ಮಟ್ಟದ ಸಭೆ ಕರೆಯುವಂತೆ ಒತ್ತಾಯಿಸಿದೆ.
ಕರ್ನಾಟಕ ಸರ್ಕಾರಕ್ಕೆ ತಾಕತ್ತಿದ್ದರೆ ಮಹಾಜನ್ ವರದಿಯನ್ವಯ ಗಡಿ ವಿವಾದ ಇತ್ಯರ್ಥ ಮಾಡಲಿ. ಮಹಾಜನ್ ವರದಿಯೇ ಅಂತಿಮ ಎಂದು ಕರ್ನಾಟಕ ಸರ್ಕಾರ ಹೇಳುತ್ತಾ ಬಂದಿದೆ. ಮಹಾಜನ್ ವರದಿ ಅನ್ವಯವೇ ಗಡಿ ವಿವಾದ ಇತ್ಯರ್ಥಕ್ಕೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪ ಮಂಡಿಸಲಿ ಎಂದು ಬೆಳಗಾವಿಯಲ್ಲಿ ಸಭೆ ನಡೆಸಿ ಎಂಇಎಸ್ ಪುಂಡರು ಆಗ್ರಹಿಸಿದ್ದಾರೆ. ಸದ್ಯ ಎಂಇಎಸ್ ಪುಂಡರ ಈ ನಡೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಬೆಳಗಾವಿ ನಗರದಲ್ಲಿ ಪುಂಡಾಟ ಮೆರೆದಿದ್ದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್, ಎಂಇಎಸ್ನ ಮುಖಂಡ ಶುಭಂ ಶೆಳ್ಕೆ ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.
ಆರೋಪಿಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ದೊಂಬಿ, ಗಲಾಟೆ ಮಾಡಿದ್ದಾರೆ. ಸಮಾಜಘಾತುಕ ಕೃತ್ಯವೆಸಗಿದ್ದು ಜಾಮೀನಿಗೆ ಅರ್ಹರಲ್ಲ. ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನದ ಗಂಭೀರ ಆರೋಪ ಇದೆ ಎಂದು ವಾದ ಮಾಡಲಾಗಿದೆ. ಕರ್ನಾಟಕ ಸರ್ಕಾರ ಪರ ಸರ್ಕಾರಿ ಅಭಿಯೋಜಕ ಕಿರಣ್ ಪಾಟೀಲ್ ಈ ವಾದ ಮಂಡಿಸಿದ್ದರು. ಹೀಗಾಗಿ ಸದ್ಯ ನ್ಯಾಯಾಧೀಶ ಹೇಮಂತ ಕುಮಾರ್‌ರಿಂದ ಎಂಇಎಸ್ ಪುಂಡರ ಜಾಮೀನು ಅರ್ಜಿ ತಿರಸ್ಕಾರವಾಗಿದೆ.
ಡಿ.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್ ಪುಂಡಾಟಿಕೆ ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ, ಡಿ.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಪ್ರತಿಭಟನೆ ನಡೆಸಿತ್ತು. ಆದರೆ ಪ್ರತಿಭಟನೆ ವೇಳೆ ಸರ್ಕಾರಿ ವಾಹನಗಳನ್ನೇ ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದ ಕೆಲ ಕಿಡಿಗೇಡಿಗಳು, ನಂತರ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಈವರೆಗೂ 38 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು 22 ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅದರಲ್ಲಿ ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿ 11 ಆರೋಪಿಗಳು ತಲೆಮರಿಸಿಕೊಂಡು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವೇಳೆ ಎಂಇಎಸ್ ಪುಂಡಾಟಿಕೆ: ಪೊಲೀಸ್ ಆಯುಕ್ತ ಎತ್ತಂಗಡಿ, ದುಷ್ಕರ್ಮಿಗಳಿಗೆ ಸಿಗಲಿಲ್ಲ ಜಾಮೀನು
Published On - 9:19 am, Wed, 5 January 22