ಕೊರೊನಾದ ರಾಜಧಾನಿ ಬೆಂಗಳೂರು! ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗಿಂತ ಹೆಚ್ಚು ಸಕ್ರಿಯ ಪ್ರಕರಣ ಉದ್ಯಾನನಗರಿಯಲ್ಲಿ
ಆಂಧ್ರಪ್ರದೇಶದಲ್ಲಿ 1,22,980, ತಮಿಳುನಾಡಿನಲ್ಲಿ 1,15,128 ಹಾಗೂ ತೆಲಂಗಾಣದಲ್ಲಿ 77,727 ಸಕ್ರಿಯ ಪ್ರಕರಣಗಳಿದ್ದರೆ ಕರ್ನಾಟಕದ ರಾಜಧಾನಿ ಬೆಂಗಳೂರೊಂದರಲ್ಲೇ ಈ ರಾಜ್ಯಗಳನ್ನು ಮೀರಿಸುವಂತೆ 2,59,058 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಬೆಂಗಳೂರು: ನೋಡನೋಡುತ್ತಲೇ ಊಹೆಗೂ ಮೀರಿ ಅವಾಂತರ ಸೃಷ್ಟಿಸುತ್ತಿರುವ ಕೊರೊನಾ ಎರಡನೇ ಅಲೆಯಿಂದಾಗಿ ಕರ್ನಾಟಕ ರಾಜ್ಯ ಅಕ್ಷರಶಃ ತತ್ತರಿಸಿ ಹೋಗಿದೆ. ಬಹುಮುಖ್ಯವಾಗಿ ರಾಜಧಾನಿ ಬೆಂಗಳೂರು ಚಿಂತಾಜನಕ ಪರಿಸ್ಥಿತಿಗೆ ತಲುಪಿದ್ದು ರಾಜ್ಯದ ಸುಮಾರು ಅರ್ಧದಷ್ಟು ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿವೆ. ನಿನ್ನೆ (ಏಪ್ರಿಲ್ 30) ಕರ್ನಾಟಕದಲ್ಲಿ ಬರೋಬ್ಬರಿ 48,296 ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇದರ ಅರ್ಧಭಾಗಕ್ಕಿಂತಲೂ ಹೆಚ್ಚು ಅಂದರೆ 26,756 ಪ್ರಕರಣಗಳು ಕೇವಲ ಬೆಂಗಳೂರಿನಲ್ಲಿ ಕಂಡುಬಂದಿವೆ. ಅತ್ಯಂತ ಗಮನಾರ್ಹ ಹಾಗೂ ಆತಂಕಕಾರಿ ಅಂಶವೆಂದರೆ ಪ್ರಸ್ತುತ ಬೆಂಗಳೂರಿನಲ್ಲಿರುವ ಸಕ್ರಿಯ ಕೊರೊನಾ ಪ್ರಕರಣಗಳ ಪ್ರಮಾಣ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನೂ ಮೀರಿಸಿದೆ.
ಆಂಧ್ರಪ್ರದೇಶದಲ್ಲಿ 1,22,980, ತಮಿಳುನಾಡಿನಲ್ಲಿ 1,15,128 ಹಾಗೂ ತೆಲಂಗಾಣದಲ್ಲಿ 77,727 ಸಕ್ರಿಯ ಪ್ರಕರಣಗಳಿದ್ದರೆ ಕರ್ನಾಟಕದ ರಾಜಧಾನಿ ಬೆಂಗಳೂರೊಂದರಲ್ಲೇ ಈ ರಾಜ್ಯಗಳನ್ನು ಮೀರಿಸುವಂತೆ 2,59,058 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಡೀ ಕರ್ನಾಟಕ ರಾಜ್ಯದಲ್ಲಿ 3,82,690 ಸಕ್ರಿಯ ಪ್ರಕರಣಗಳಿದ್ದು ಈ ವಿಚಾರದಲ್ಲಿ ಕರುನಾಡು ನೆರೆಯ ರಾಜ್ಯಗಳನ್ನು ಮೀರಿಸಿದೆ. ಮೊದಲ ಅಲೆಯಲ್ಲಿ ಅಕ್ಟೋಬರ್ 7ರಂದು ದಾಖಲಾದ 10,974 ಪ್ರಕರಣಗಳು ಕರ್ನಾಟಕದ ಮಟ್ಟಿಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದ್ದವು, ಆದರೀಗ ಅದಕ್ಕಿಂತಲೂ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚು ಪ್ರಕರಣಗಳು 24 ಗಂಟೆ ಅವಧಿಯಲ್ಲಿ ದಾಖಲಾಗಿರುವುದು ಎರಡನೇ ಅಲೆಯ ಗಂಭೀರತೆಗೆ ಸಾಕ್ಷಿಯಾಗಿದೆ.
ಆರೋಗ್ಯ ಇಲಾಖೆ ಕೊವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಿರುವುದರಿಂದ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳುತ್ತಿದೆಯಾದರೂ 2020ರ ಅಕ್ಟೋಬರ್ 7ರಂದು ನಡೆಸಿದ ಪರೀಕ್ಷೆ ಪ್ರಮಾಣಕ್ಕೂ ನಿನ್ನೆ (ಏಪ್ರಿಲ್ 30) ನಡೆಸಿದ ಪರೀಕ್ಷೆ ಪ್ರಮಾಣಕ್ಕೂ ತುಲನೆ ಮಾಡಿದರೆ ಕೊರೊನಾ ಸೋಂಕು ಹಬ್ಬುವಿಕೆಯೇ ವೇಗವಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಕ್ಟೋಬರ್ 7 ರಂದು ನಡೆಸಿದ್ದ 1,04,348 ಪರೀಕ್ಷೆಗಳ ಪೈಕಿ 10,974 ಪಾಸಿಟಿವ್ ಕಂಡುಬಂದಿತ್ತು. ಆದರೆ ನಿನ್ನೆ ನಡೆಸಲಾದ 1,89,793 ಪರೀಕ್ಷೆಗಳಲ್ಲಿ ಬರೋಬ್ಬರಿ 48,296 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ ಅಕ್ಟೋಬರ್ 07 ರಂದು ನಡೆಸಿದ್ದಕ್ಕಿಂತ ಶೇ.81ರಷ್ಟು ಹೆಚ್ಚು ಪರೀಕ್ಷೆಯನ್ನು ನಿನ್ನೆ ನಡೆಸಿದ್ದರೂ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ.340ರಷ್ಟು ಏರಿಕೆ ಕಂಡಿರುವುದು ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜತೆಗೆ, ಜನವರಿ ವೇಳೆಗೆ ಶೇ.98.06ರಷ್ಟು ಸೋಂಕಿತರು ಗುಣಮುಖರಾಗುತ್ತಿದ್ದು ಆ ಪ್ರಮಾಣ ಈಗ ಶೇ.73.55ಕ್ಕೆ ಕುಸಿತ ಕಂಡಿರುವುದು ಸಕ್ರಿಯ ಪ್ರಕರಣಗಳ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಇದನ್ನೂ ಓದಿ: ವಿಶ್ವ ದಾಖಲೆ: ಭಾರತದಲ್ಲಿ ದಿನಕ್ಕೆ 4 ಲಕ್ಷದ ಗಡಿ ದಾಟಿದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ, ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು
ಲಸಿಕೆ ಪಡೆದವರಲ್ಲೂ ಕೊರೊನಾ ಸೋಂಕು ದೃಢಪಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ